×
Ad

ಪುತ್ತೂರು: ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣ; ಬಜರಂಗದಳದ ಕಾರ್ಯಕರ್ತನ ಬಂಧನ

Update: 2016-08-06 08:54 IST

ಪುತ್ತೂರು, ಆ.6: ಟಿಪ್ಪುಜಯಂತಿ ಹಿನ್ನೆಲೆಯಲ್ಲಿ ಪುತ್ತೂರು ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿ ಬಜರಂಗದಳ ಕಾರ್ಯಕರ್ತನೋರ್ವನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.

ಪುತ್ತೂರು ತಾಲೂಕಿನ ಆರ್ಯಾಪು ಗ್ರಾಮದ ಕುಂಜೂರುಪಂಜ ನಿವಾಸಿ ದಿ. ರಮೇಶ್ ಪೂಜಾರಿ ಎಂಬವರ ಪುತ್ರ ಜಯಂತ ಬಂಧಿತ ಆರೋಪಿ. ಇನ್ನೋರ್ವ ಆರೋಪಿ ಬನ್ನೂರಿನ ನೆಕ್ಕಿಲ ನಿವಾಸಿ ಪ್ರಜ್ವಲ್ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

ಜಯಂತ ಹಾಗೂ ಪ್ರಜ್ವಲ್ ಪುತ್ತೂರಿನಲ್ಲಿ ಅಲ್ಯೂಮಿನಿಯಂ ಫ್ಯಾಬ್ರಿಕೇಷನ್ ಕೆಲಸ ಮಾಡುತ್ತಿದ್ದರು. ಟಿಪ್ಪು ಜಯಂತಿ ದಿನವಾದ 2015ರ ನವೆಂಬರ್ 12ರಂದು ರಾತ್ರಿ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಲಾಗಿತ್ತು. ನ. 13ರಂದು ಬಂದ್‌ಗೆ ಕರೆ ಕೊಟ್ಟಿದ್ದು, ಬಂದ್‌ನ ತೀವ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಬಸ್‌ಗೆ ಬೆಂಕಿ ಹಚ್ಚಲಾಗಿದೆ ಎಂದು ತನಿಖೆ ವೇಳೆ ಆರೋಪಿ ತಿಳಿಸಿದ್ದಾನೆ.

ಆರೋಪಿಗಳಿಬ್ಬರು ರಾತ್ರಿ ಕೆಲಸ ಮುಗಿಸಿ 8 ಗಂಟೆಗೆ ದರ್ಬೆಯ ಬಾರೊಂದಕ್ಕೆ ತೆರಳಿ, ಪುತ್ತೂರು ದೇವಳದ ಗದ್ದೆಗೆ ಬೈಕ್‌ನಲ್ಲಿ ಬಂದಿದ್ದರು. ದೇವಸ್ಥಾನದ ಗದ್ದೆಯಲ್ಲಿ ಜಯಂತ್‌ನನ್ನು ಇಳಿಸಿದ ಪ್ರಜ್ವಲ್, ಪೆಟ್ರೋಲ್ ತಂದಿದ್ದಾನೆ. ಬಳಿಕ ಖಾಸಗಿ ಬಸ್ ನಿಲ್ದಾಣ ಆವರಣ ಗೋಡೆ ಹೊರಗಡೆ ಬೈಕ್ ನಿಲ್ಲಿಸಿ, ಯಾರೂ ಇಲ್ಲದ ಸಮಯ ನೋಡಿ ಬಸ್‌ಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಆಧಾರದಲ್ಲಿ ಶುಕ್ರವಾರ ಪುತ್ತೂರು ಬಸ್‌ನಿಲ್ದಾಣ ಸಮೀಪ ಜಯಂತನನ್ನು ಬಂಧಿಸಲಾಗಿದೆ. ಪ್ರಜ್ವಲ್ ಸುಳ್ಯಕ್ಕೆ ತೆರಳಿದ ಮಾಹಿತಿಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎಎಸ್ಪಿ ರಿಷ್ಯಂತ್ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲೀಸ್ ನಿರೀಕ್ಷಕ ಮಹೇಶ್ ಪ್ರಸಾದ್, ಎಸ್ಸೈ ಅಬ್ದುಲ್ ಖಾದರ್, ಸಿಬ್ಬಂದಿಯಾದ ಪ್ರಶಾಂತ್ ಶೆಟ್ಟಿ, ದಾಮೋದರ ನಾಯ್ಕಿ ಕಾರ್ಯಾಚರಣೆ ನಡೆಸಿದ್ದಾರೆ. 2015ರ ನವೆಂಬರ್ 12ರಂದು ರಾಜ್ಯ ಸರಕಾರ ಟಿಪ್ಪು ಜಯಂತಿ ಆಚರಣೆಗೆ ಕರೆ ನೀಡಿತ್ತು. ಇದೇ ಸಂದರ್ ಮಡಿಕೇರಿಯಲ್ಲಿ ಗಲಭೆ ಕಾಣಿಸಿಕೊಂಡಿದ್ದು, ನವೆಂಬರ್ 13ರಂದು ಬಂದ್‌ಗೆ ಕರೆ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಹಿಂದಿನ ದಿನ ರಾತ್ರಿ 10ರಿಂದ 10:30ರ ಸುಮಾರಿಗೆ ಕೃತ್ಯ ನಡೆಸಲಾಗಿದೆ. ಖಾಸಗಿ ಬಸ್‌ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಕೆಎಸ್ಸಾರ್ಟಿಸಿ ಬಸ್‌ಗೆ ಬೆಂಕಿ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News