×
Ad

ಉಳ್ಳಾಲ: ನಾಡದೋಣಿ ಮುಳುಗಿ ಮೀನುಗಾರ ನೀರುಪಾಲು; ರಕ್ಷಿಸಲು ತೆರಳಿದ ಯುವಕ ಅಸ್ವಸ್ಥಗೊಂಡು ಮೃತ್ಯು

Update: 2016-08-06 14:03 IST

ಉಳ್ಳಾಲ, ಆ.6: ಉಳ್ಳಾಲ ಕೋಟೆಪುರ ಅಳಿವೆ ಬಾಗಿಲು ಸಮುದ್ರದಲ್ಲಿ ಮೂವರು ಮೀನುಗಾರಿಕೆಗೆ ತೆರೆಳಿದ್ದ ಸಂದರ್ಭ ಸಮುದ್ರದ ಅಲೆಗೆ ಸಿಲುಕಿ ದೋಣಿ ಮಗುಚಿ ಬಿದ್ದ ಪರಿಣಾಮ ಓರ್ವ ಮೀನುಗಾರ ನೀರುಪಾಲಾದ ಘಟನೆ ಶನಿವಾರ ನಡೆದಿದೆ. ಇದೇ ಸಂದರ್ಬದಲ್ಲಿ ಸಮುದ್ರಪಾಲಾಗುತ್ತಿದ್ದ ಮೀನುಗಾರರನ್ನು ಕಂಡ ಸ್ಥಳೀಯ ಕೋಟೆಪುರದ ಸಾಹಸಿ ವ್ಯಕ್ತಿಯೊರ್ವರು ಸಮುದ್ರಕ್ಕೆ ಧುಮುಕಿ ಓರ್ವನನ್ನು ರಕ್ಷಿಸಿ ಮತ್ತೆ ಇಬ್ಬರ ರಕ್ಷಣೆಗೆ ಧಾವಿಸಿದಾಗ ಸಮುದ್ರದಲ್ಲಿದ್ದ ಬಂಡೆಕಲ್ಲು ತಲೆಗೆ ಬಡಿದು ದಾರುಣವಾಗಿ ಮೃತಪಟ್ಟಿದ್ದಾರೆ.

ಮೀನುಗಾರನ ರಕ್ಷಣೆಗೆ ತೆರಳಿ ಪ್ರಾಣತೆತ್ತ ಸಾಹಸಿ ವ್ಯಕ್ತಿಯನ್ನು ಕೋಟೆಪುರ ಕೋಡಿಯ ಮಸೀದಿ ಬಳಿಯ ನಿವಾಸಿ ಫಝಲ್ (38) ಎಂದು ಗುರುತಿಸಲಾಗಿದೆ. ತಮಿಳುನಾಡು, ತಿರುವನ ಹಳ್ಳಿ ಮೂಲದ ಮೀನುಗಾರ ಡೆಲ್ಲಿ ಚಂದನ್(40) ಎಂಬವರೇ ನೀರುಪಾಲಾದ ವ್ಯಕ್ತಿ.

ಕೋಟೆಪುರ ಅಳಿವೆ ಬಾಗಿಲಿನ ಸಮುದ್ರದಲ್ಲಿ ಅಣ್ಣು ಕಾಂಚನ್ ಮಾಲಕತ್ವದ ನಾಡದೋಣಿಯಲ್ಲಿ ತಮಿಳುನಾಡು ಮೂಲದ ಮೆಹನಸ್(46), ಕುಮಾರ್(30), ಡೆಲ್ಲಿ ಚಂದನ್(40) ಎಂಬವರು ಮೀನುಗಾರಿಕೆಗೆ ತೆರಳಿ ಮೂರು ದಿವಸಗಳ ನಂತರ ಶನಿವಾರ ಹಿಂದಿರುಗುತ್ತಿದ್ದ ವೇಳೆ ಪ್ರಕ್ಷುಬ್ದಗೊಂಡಿದ್ದ ಸಮುದ್ರದ ಅಲೆಗಳ ಸುಳಿಗೆ ಸಿಲುಕಿ ದೋಣಿ ಮಗುಚಿ ಬಿದ್ದಿದೆ.

ನೀರಿಗೆ ಬಿದ್ದು ಜೀವರಕ್ಷಣೆಗೆ ಮೀನುಗಾರರು ಬೊಬ್ಬಿಡುತ್ತಿದ್ದ ಸಂದರ್ಭದಲ್ಲಿ ದಡದಲ್ಲಿದ್ದ ಸ್ಥಳೀಯ ಈಜುಗಾರ ಫಝಲ್, ರಮೀಝ್ ಮತ್ತು ಸ್ನೇಹಿತರು ಸೇರಿ ಮೂವರು ಮೀನುಗಾರರ ರಕ್ಷಣೆಗೆ ಧಾವಿಸಿದ್ದಾರೆ. ಸ್ನೇಹಿತರು ಹಗ್ಗ ಹಿಡಿದಿದ್ದು ಫಝಲ್ ಸಮುದ್ರಕ್ಕೆ ಧುಮುಕಿ ಮೊದಲಿಗೆ ಮೆಹನಸ್‌ನನ್ನು ಹಗ್ಗದ ಸಹಾಯದಿಂದ ದಡಕ್ಕೆ ಸುರಕ್ಷಿತವಾಗಿ ತಲುಪಿಸಿದ್ದಾರೆ. ಓರ್ವನನ್ನು ರಕ್ಷಿಸಿ ಉಳಿದಿಬ್ಬರನ್ನೂ ರಕ್ಷಿಸಲು ಮುಂದಾದ ಫಝಲ್ ಸಮುದ್ರಕ್ಕೆ ಮತ್ತೆ ಧುಮುಕಿ ಡೆಲ್ಲಿ ಚಂದನ್‌ರನ್ನು ರಕ್ಷಿಸಿಲು ಕೈ ನೀಡಿದ್ದು ನೀರಿನಲ್ಲಿ ಮುಳುಗುತ್ತಿದ್ದ ಚಂದನ್ ಫಝಲ್‌ರನ್ನು ಗಟ್ಟಿಯಾಗಿ ನೀರಿನೊಳಗೆ ಎಳೆದಿದ್ದು, ಫಝಲ್ ಕೈಗಳಿಂದ ಹಗ್ಗದ ಹಿಡಿತವೂ ತಪ್ಪಿ ಹೋಗಿದ್ದಲ್ಲದೆ, ಸಮುದ್ರದೊಳಗಿದ್ದ ಬಂಡೆಕಲ್ಲು ಅವರ ತಲೆಗೆ ಬಲವಾಗಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡರು.

ಚಿಂತಾಜನಕ ಸ್ಥಿತಿಯಲ್ಲಿದ್ದ ಫಝಲ್‌ರನ್ನು ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಅಲ್ಲಿಂದ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದ್ದು ಆಸ್ಪತ್ರೆಯಲ್ಲಿ ಅವರು ಮೃತಪಟ್ಟಿದ್ದಾರೆ. ಮೂವರು ಮೀನುಗಾರರಲ್ಲಿ ಕುಮಾರ್ ಎಂಬಾತ ಸಮುದ್ರದಲ್ಲಿ ಈಜಿಕೊಂಡೇ ಪ್ರಾಣ ರಕ್ಷಿಸಿಕೊಂಡಿದ್ದಾರೆ. ಅಸ್ವಸ್ಥಗೊಂಡ ಮೆಹನಸ್ ಮತ್ತು ಕುಮಾರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸಮುದ್ರದಲ್ಲಿ ಮುಳುಗಿ ಅಸ್ವಸ್ಥರಾದ ಫಝಲ್‌ರನ್ನು ಆಸ್ಪತ್ರೆಗೆ ದಾಖಲಿಸಲು 108 ಉಚಿತ ಆ್ಯಂಬುಲೆನ್ಸ್‌ಗೆ ಕರೆ ಮಾಡಲಾಗಿತ್ತು. ಆದರೆ ಬಹಳ ಹೊತ್ತಾದರೂ ಬಾರದೆ ಕೊನೆಗೆ ಪೊಲೀಸ್ ವಾಹನದಲ್ಲಿ ತೊಕ್ಕೊಟ್ಟಿನ ಆಸ್ಪತ್ರೆಗೆ ಕರೆತರಲಾಗಿತ್ತು. ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಸುಮಾರು 20 ನಿಮಿಷಗಳ ಕಾಲ ಸಾವು, ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದರೂ ಆ್ಯಂಬುಲೆನ್ಸ್ ವಾಹನ ತಡವರಿಸಿ ಬಂದ ಪರಿಣಾಮ ಸಾವು ಸಂಭವಿಸಿದೆ ಎಂದು ಸಂಬಂಧಿಕರು, ಸ್ನೇಹಿತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News