×
Ad

ಪಶ್ಚಿಮವಾಹಿನಿ ಬಗ್ಗೆ ಶೀಘ್ರವೇ ಕರಾವಳಿ ಜಿಲ್ಲೆಗಳ ಜಿಲ್ಲಾಧಿಕಾರಿಗಳೊಂದಿಗೆ ಚರ್ಚೆ:ಐವನ್

Update: 2016-08-06 15:00 IST

ಮಂಗಳೂರು, ಆ.6: ಕರಾವಳಿ ಜಿಲ್ಲೆಯಲ್ಲಿ ಪಶ್ಚಿಮವಾಹಿನಿ ಯೋಜನೆಯನ್ನು ರೂಪಿಸಲು ಸರಕಾರ ಮುಂದಾಗಿದ್ದು ಈ ಬಗ್ಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳ ಜೊತೆ ಶೀಘ್ರದಲ್ಲಿಯೆ ಚರ್ಚೆ ನಡೆಸಲಾಗುವುದು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.

ನಗರದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈವರೆಗೆ ಪಶ್ಚಿಮವಾಹಿನಿ ಯೋಜನೆಯ ಬಗ್ಗೆ ಯಾವುದೆ ಪ್ರಕ್ರಿಯೆಗಳು ನಡೆದಿರಲಿಲ್ಲ. ವಿಧಾನಪರಿಷತ್‌ನಲ್ಲಿ ಕೇಳಿದ ಪ್ರಶ್ನೆಗೆ ಸಣ್ಣ ನೀರಾವರಿ ಸಚಿವ ಟಿ.ಬಿ.ಜಯಚಂದ್ರ ಅವರು ದ.ಕ ಜಿಲ್ಲೆಯಲ್ಲಿ 7,399 ಲಕ್ಷ ಅಂದಾಜು ಮೊತ್ತದ 161 ಕಿಂಡಿ ಅಣೆಕಟ್ಟುಗಳನ್ನು ಅನುಷ್ಠಾನಗೊಳಿಸಲಾಗಿದೆ. 1857 ಲಕ್ಷ ರೂ.ಮೊತ್ತದ 35 ಕಿಂಡಿ ಅಣೆಕಟ್ಟುಗಳ ಕಾಮಗಾರಿಗಳನ್ನು ಕೈಗೊಂಡಿದ್ದು, ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ. 615 ಲಕ್ಷ ರೂ. ಅಂದಾಜು ಮೊತ್ತದಲ್ಲಿ 8 ಕೆರೆಗಳ ಅಭಿವೃದ್ದಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದ್ದು, ಪಶ್ಚಿಮ ವಾಹಿನಿ ಯೋಜನೆಯಡಿ ದ.ಕ ಜಿಲ್ಲೆಯಲ್ಲಿ ಕಿಂಡಿ ಅಣೆಕಟ್ಟು, ಉಪ್ಪು ನೀರಿನ ತಡೆ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿರುತ್ತಾರೆ ಎಂದು ಹೇಳಿದರು.ಅಂತರ್ಜಲ ವೃದ್ದಿಸಲು ಮತ್ತು ಪಶ್ಚಿಮವಾಹಿನಿ ಯೋಜನೆಯನ್ನು ಜಾರಿಗೆ ತರಲು ಸಣ್ಣ ನೀರಾವರಿ ಸಚಿವರಾದ ಟಿ.ಬಿ.ಜಯಚಂದ್ರ ಮತ್ತು ಬೃಹತ್ ಮತ್ತು ಮಧ್ಯಮ ನೀರಾವರಿ ಸಚಿವ ಎಂ.ಬಿ.ಪಾಟೀಲ್ ಜೊತೆ ಚರ್ಚಿಸಿದ್ದು ಈ ಬಗ್ಗೆ ಜಿಲ್ಲೆಯ ಪ್ರತಿನಿಧಿಗಳ ಜೊತೆ ಚರ್ಚೆಯನ್ನು ಶೀಘ್ರದಲ್ಲಿಯೆ ಮಾಡುವ ಭರವಸೆಯನ್ನು ನೀಡಿರುತ್ತಾರೆ ಎಂದರು.

ಜಿಲ್ಲೆಯಲ್ಲಿ ನೀರು ಇಂಗಿಸುವಿಕೆಯ ಬಗ್ಗೆ ಜಾಗೃತಿ ಮೂಡಿಸಬೇಕಾಗಿದ್ದು ಹೊಸದಾಗಿ ರಚನೆಯಾಗುವ ಕಟ್ಟಡಗಳು, 2500 ಚದರಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಮನೆಗಳಲ್ಲಿ ಕಡ್ಡಾಯ ನೀರು ಇಂಗಿಸುವಿಕೆಯ ವ್ಯವಸ್ಥೆಯನ್ನು ಮಾಡಬೇಕಾಗಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News