ಪತ್ನಿ, ಮಗನಿಂದಲೇ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ?
ಉಡುಪಿ, ಆ.6: ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಉಡುಪಿಯ ಉದ್ಯಮಿ ಭಾಸ್ಕರ್ ಶೆಟ್ಟಿ(52) ಕೊಲೆಯಾಗಿರುವುದು ದೃಢಪಟ್ಟಿದ್ದು, ಈ ಸಂಬಂಧ ಮಣಿಪಾಲ ಪೊಲೀಸರು ಭಾಸ್ಕರ್ ಶೆಟ್ಟಿಯ ಪತ್ನಿ ರಾಜೇಶ್ವರಿ(48) ಹಾಗೂ ಮಗ ನವನೀತ್(25) ಎಂಬವರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ಹೇಳಲಾದ ಕಾರ್ಕಳ ನಂದಳಿಕೆಯ ಜ್ಯೋತಿಷಿ ನಿರಂಜನ್ ಭಟ್(25) ಎಂಬಾತ ತಲೆಮರೆಸಿ ಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಭಾಸ್ಕರ್ ಶೆಟ್ಟಿ ಜು.28ರಂದು ನಾಪತ್ತೆಯಾಗಿರುವುದಾಗಿ ಜು.31ರಂದು ಮಣಿಪಾಲ ಪೊಲೀಸ್ ಠಾಣೆಗೆ ದೂರು ನೀಡಿರುವ ಅವರ ತಾಯಿ ಗುಲಾಬಿ ಶೆಡ್ತಿ,ಸೊಸೆ ಹಾಗೂ ಮೊಮ್ಮಗನ ಮೇಲೆ ಸಂಶಯ ವ್ಯಕ್ತಪಡಿಸಿದ್ದರು. ಅದರಂತೆ ಪೊಲೀಸರು ಭಾಸ್ಕರ್ ಶೆಟ್ಟಿಯ ಪತ್ನಿ ಹಾಗೂ ಮಗನನ್ನು ವಿಚಾರಣೆ ನಡೆಸಿದಾಗ ಈ ಕೊಲೆ ಪ್ರಕರಣ ಬೆಳಕಿಗೆ ಬಂತೆನ್ನಲಾಗಿದೆ. ಜು.27ರಂದೇ ಇಂದ್ರಾಳಿಯ ಹಯಗ್ರೀವನಗರದಲ್ಲಿರುವ ಮನೆಯಲ್ಲಿ ಭಾಸ್ಕರ ಶೆಟ್ಟಿ ಸ್ನಾನ ಮಾಡಿ ಬರುವಾಗ ಕಣ್ಣಿಗೆ ಕಾರದ ಪುಡಿ ಎರಚಿ ಬಳಿಕ ಕೊಲೆ ಮಾಡಲಾಗಿದೆ. ನಂತರ ಮೃತದೇಹವನ್ನು ನಂದಳಿಕೆಯ ನಿರಂಜನ್ ಭಟ್‌ರ ಮನೆಗೆ ಸಾಗಿಸಿ ಅಲ್ಲಿ ಇವರು ಮೂವರು ಸೇರಿ ಹೋಮ ಕುಂಡದಲ್ಲಿ ಹಾಕಿ ಸುಟ್ಟು ನಂತರ ಅವಶೇಷವನ್ನು ಮನೆಯಿಂದ ಎರಡು ಕಿ.ಮೀ. ದೂರದಲ್ಲಿರುವ ನದಿಗೆ ಎಸೆದಿರುವುದಾಗಿ ಪೊಲೀಸ್ ಮೂಲ ಗಳಿಂದ ತಿಳಿದು ಬಂದಿದೆ.
ಈ ವೇಳೆ ನಿರಂಜನ್ ಭಟ್ ತಾಯಿಗೆ ಅನಾರೋಗ್ಯ ಇದ್ದ ಕಾರಣ ತಂದೆ ಹಾಗೂ ತಾಯಿ ಉಡುಪಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದರು. ನಂತರ ಮನೆಗೆ ಬಂದಾಗ ಹೋಮ ಕುಂಡದ ಸುತ್ತಲಿನ ಟೈಲ್ಸ್‌ಗಳನ್ನು ಬದ ಲಾಯಿಸಿದ್ದಾರೆ. ಅದೇ ರೀತಿ ಹೋಮ ಕುಂಡವನ್ನು ಪುನರ್ ನಿರ್ಮಿಸಿರು ವುದು ಕಂಡುಬಂದಿದೆ. ಇದೆಲ್ಲವು ಸಾಕ್ಷ ನಾಶ ಮಾಡುವ ಉದ್ದೇಶದಿಂದ ಮಾಡಿರಬಹುದೆಂದು ಶಂಕಿಸಲಾಗಿದೆ. ಎರಡು ದಿನಗಳ ಹಿಂದೆ ಪೊಲೀಸರು ಪತ್ನಿ ಹಾಗೂ ಮಗನನ್ನು ನಂದಳಿಕೆಯ ನಿರಂಜನ್ ಭಟ್‌ರ ಮನೆಗೆಗೆ ಕರೆದೊಯ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ. ಆದರೆ ಪೊಲೀಸರು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗಪಡಿಸಿಲ್ಲ. ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ನೇತೃತ್ವದಲ್ಲಿ ಪ್ರಕರಣದ ತನಿಖೆ ಮುಂದುವರೆದಿದೆ.
ಹಣದ ವಿವಾದವೇ ಕೊಲೆಗೆ ಕಾರಣ
ಸೌದಿ ಅರೇಬಿಯಾದಲ್ಲಿ ಆರು ಸುರ್ಪರ್ ಮಾರ್ಕೆಟ್ ನಡೆಸುತ್ತಿದ್ದ ಭಾಸ್ಕರ್ ಶೆಟ್ಟಿ ಉಡುಪಿಯಲ್ಲಿ ದುರ್ಗಾ ಇಂಟರ್ ನ್ಯಾಶನಲ್ ಹೊಟೇಲ್ ಹಾಗೂ ಮಸೀದಿ ರಸ್ತೆಯಲ್ಲಿ ಶಂಕರ್ ಬಿಲ್ಡಿಂಗ್‌ನ್ನು ಹೊಂದಿದ್ದರು. ಕೋಟ್ಯಂತರ ರೂ. ಆಸ್ತಿ ಹೊಂದಿರುವ ಭಾಸ್ಕರ್ ಶೆಟ್ಟಿ ಹಾಗೂ ಅವರ ಪತ್ನಿ ರಾಜೇಶ್ವರಿ ಮಧ್ಯೆ ಹಣಕಾಸು ವಿಚಾರದಲ್ಲಿ ಗಲಾಟೆಗಳು ಸಂಭವಿಸುತ್ತಿದ್ದವು ಎನ್ನಲಾಗಿದೆ. ಈ ವಿಚಾರದಲ್ಲಿ ಇವರಿಗೆ ಪತ್ನಿ ಹಾಗೂ ಮಗ ಹಲವು ಬಾರಿ ಹಲ್ಲೆ ನಡೆಸಿದ್ದರು. ಅದಕ್ಕಾಗಿ ಭಾಸ್ಕರ್ ಶೆಟ್ಟಿಗೆ ಮನೆಗೆ ಹೋಗದೆ ಹೊಟೇಲಿನ ರೂಮಿನಲ್ಲಿ ಉಳಿಯುವಂತೆ ತಾಯಿ ಹೇಳಿದ್ದರು. ಹಾಗೆ ಭಾಸ್ಕರ್ ಶೆಟ್ಟಿ ಹೊಟೇಲ್ ರೂಮಿನಲ್ಲಿ ಉಳಿದು, ಸ್ನಾನಕ್ಕಾಗಿ ಮನೆಗೆ ಹೋಗುತಿದ್ದರು. ಭಾಸ್ಕರ್ ಶೆಟ್ಟಿ ಸೌದಿಯಿಂದ ಕಳುಹಿಸಿದ ಹಣವನ್ನು ಇವರು ದುರುಪಯೋಗ ಪಡಿಸಿದ್ದಾರೆ ಹಾಗೂ ಪತ್ನಿಯ ಮೊಬೈಲ್‌ನಲ್ಲಿನ ಹಲವು ವಿಚಾರಗಳು ಭಾಸ್ಕರ್ ಶೆಟ್ಟಿ ಗೊತ್ತಾಗಿರುವ ಪರಿಣಾಮ ಈ ಕೊಲೆ ನಡೆದಿದೆ ಎಂದು ಸಂಬಂಧಿಗಳು ದೂರಿದ್ದಾರೆ.
ನವನೀತ್ ಈ ಹಿಂದೆ ಬಂಟಕಲ್ಲಿನ ಸೋದೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿದ್ದು, ಅದನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದನು. ಇತ್ತೀಚೆಗೆ ಯಷ್ಟೆ ಆತ ಶಂಕರ್ ಬಿಲ್ಡಿಂಗ್‌ನಲ್ಲಿ ಜಿಮ್ ಸೆಂಟರ್ ಆರಂಭಿಸಿದ್ದನು. ಇದರ ಉದ್ಘಾಟನೆಗೆ ಭಾಸ್ಕರ್ ಶೆಟ್ಟಿ ಬಂದಿದ್ದರು.
ಎರಡು ದಿನಗಳ ಹಿಂದೆ ಪೊಲೀಸರು ಭಾಸ್ಕರ್ ಶೆಟ್ಟಿಯ ಅಮ್ಮ ಮತ್ತು ಮಗನನ್ನು ಕರೆದುಕೊಂಡು ಇಲ್ಲಿಗೆ ಬಂದಿದ್ದರು. ಸ್ಥಳ ಮಹಜರು ಮಾಡಿದಾಗ ಇಲ್ಲೇ ಮೂವರು ಸೇರಿ ಭಾಸ್ಕರ್ ಶೆಟ್ಟಿಯನ್ನು ಬೆಂಕಿಯಲ್ಲಿ ಸುಟ್ಟು ಕೊಂದಿರುವುದಾಗಿ ಹೇಳಿದ್ದಾರೆ. ಆದರೆ ನಮ್ಮ ಮಗ ಒಳ್ಳೆಯವ. ಯಾಕೆ ಹೀಗೆ ಯಾಕೆ ಮಾಡಿದ ಎಂಬುದು ಗೊತ್ತಾಗುತ್ತಿಲ್ಲ. ಅವರಿಗೆ ಸಹಾಯ ಮಾಡಲು ಹೋಗಿ ಇವನು ಸಿಕ್ಕಿಬಿದ್ದಿರಬಹುದು. ಇದರಲ್ಲಿ ಭಾಗಿಯಾಗಿದ್ದರೆ ಅವನು ಎಲ್ಲೆ ಇದ್ದರೂ ನಾನೇ ಪೊಲೀಸರಿಗೆ ಹಿಡಿದುಕೊಡುತ್ತೇನೆ.
-ಶ್ರೀನಿವಾಸ ಭಟ್, ನಿರಂಜನ್ ಭಟ್ ತಂದೆ
ಹಣಕ್ಕಾಗಿ ತಾಯಿ ಮಗ ಸೇರಿ ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡಿದ್ದಾರೆ. ಹೆಂಡತಿ ಮತ್ತು ಮಗ ಹಾಗೂ ಜ್ಯೋತಿಷಿಯ ಮೇಲೆ ಅನುಮಾನ ಇದೆ. ಭಾಸ್ಕರ್ ಶೆಟ್ಟಿ ನಮ್ಮ ಮನೆಗೆ ಬಂದಾಗ ಪತ್ನಿ ಹಾಗೂ ಮಗ ಹೊಡೆಯುತ್ತಿದ್ದ ವಿಚಾರವನ್ನು ತಿಳಿಸಿದ್ದರು. ಇವರ ನಾಪತ್ತೆಯಾದ ದಿನದಂದೆ ಕೊಲೆ ಮಾಡಿ ಸುಳಿವು ಸಿಗದಂತೆ ಮಾಡಲಾಗಿದೆ. ಜ್ಯೋತಿಷಿ ನಿರಂಜನ್ ಭಟ್ ತಲೆಮರೆಸಿಕೊಂಡಿದ್ದಾರೆ. ಆತ ಸಿಕ್ಕಿದರೆ ಸತ್ಯಾಂಶ ಗೊತ್ತಾಗುತ್ತದೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
ಗುರು ಶೆಟ್ಟಿ, ಭಾಸ್ಕರ್ ಶೆಟ್ಟಿ ಸಂಬಂಧಿ
ಪ್ರಕರಣದ ತನಿಖೆ ನಡೆಯುತ್ತಿದೆ. ದೂರು ಕೊಟ್ಟವರು ಸಂಶಯ ವ್ಯಕ್ತ ಪಡಿಸಿದವರನ್ನೆಲ್ಲ ಕರೆದು ವಿಚಾರಣೆ ಮಾಡಿದ್ದೇವೆ. ಅದೇ ರೀತಿ ಭಾಸ್ಕರ್ ಶೆಟ್ಟಿಯ ಪತ್ನಿ ಹಾಗೂ ಮಗನನ್ನು ಕೂಡ ವಿಚಾರಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಈವರೆಗೆ ಯಾರನ್ನು ಬಂಧಿಸಿಲ್ಲ. ಈ ಪ್ರಕರಣದಲ್ಲಿ ಹೆಸರು ಕೇಳಿ ಬರುತ್ತಿರುವ ಜ್ಯೋತಿಷಿ ನಿರಂಜನ್ ಭಟ್ ತಲೆಮರೆಸಿಕೊಂಡಿದ್ದಾನೆ. ಆತನಿಗಾಗಿ ಶೋಧ ಕಾರ್ಯ ನಡೆಸಲಾಗುತ್ತಿದೆ. ಈತ ಸಿಕ್ಕಿದರೆ ಪ್ರಕರಣದ ಎಲ್ಲ ವಿಚಾರಗಳು ತಿಳಿಯಬಹುದು.
-ವಿಷ್ಣುವರ್ಧನ, ಪ್ರಭಾರ ಪೊಲೀಸ್ ಅಧೀಕ್ಷಕ ಹಾಗೂ ಹೆಚ್ಚುವರಿ ಪೊಲೀಸ್ ಅಧೀಕ್ಷಕ, ಉಡುಪಿ ಜಿಲ್ಲೆ