×
Ad

ಮಲಹೊರುವ ಪದ್ಧತಿಯನ್ನು ಕೊನೆಗಾಣಿಸಲು ಪ್ರಯತ್ನ: ಎಂ. ನಾರಾಯಣ

Update: 2016-08-06 18:40 IST

ಬೆಳ್ತಂಗಡಿ, ಆ.6: ಮಲ ಹೊರುವ ಪದ್ಧತಿ ಅತ್ಯಂತ ಅಮಾನವೀಯ ಮತ್ತು ಕ್ರೌರ್ಯದಿಂದ ಕೂಡಿದ್ದಾಗಿದೆ. ಅದನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕು ಎಂಬ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿದ್ದೇನೆ. ಇದೀಗ 50 ಮಂದಿ ಮಲಹೊರುವ ಕಾರ್ಮಿಕರು ಹೊಸ ಬದುಕಿನೆಡೆಗೆ ಹೆಜ್ಜೆ ಇಡುತ್ತಿದ್ದಾರೆ. ಸರಕಾರದಿಂದ ಇವರಿಗೆ ತಲಾ ಒಂದು ಲಕ್ಷ ರೂ. ಅನುದಾನವನ್ನು ನೀಡಲಾಗುತ್ತಿದ್ದು ಇವರ ಬದುಕಿಗೆ ಭದ್ರತೆ ಒದಗಿಸಲು ಎಲ್ಲಾ ಕ್ರಮ ಕೈಗೊಳ್ಳಲಾಗುತ್ತಿದೆ. ಇದು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲಿದೆ ಎಂದು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಮ್. ನಾರಾಯಣ ಹೇಳಿದರು.

ಅವರು ಶನಿವಾರ ಬಿ.ಆರ್. ಅಂಬೇಡ್ಕರ್ ನಿಗಮದ ವತಿಯಿಂದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ಭೊರೂಕ-ಎಸ್.ಕೆ.ಡಿ.ಆರ್.ಡಿ.ಪಿ ಗ್ರಾಮೀಣ ಶ್ರೇಷ್ಠತಾ ಕೇಂದ್ರ ಬೆಳ್ತಂಗಡಿ ಇಲ್ಲಿ ತಿಂಗಳ ಕಾಲ ನಡೆದ ಸಫಾಯಿ ಕರ್ಮಚಾರಿಗಳ ಪುನಶ್ಚೇತನ ಹಾಗೂ ತರಬೇತಿ ಕಾರ್ಯಕ್ರಮಗಳ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ರಾಜ್ಯದ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಸಾವಿರಾರು ಮಂದಿ ಸಫಾಯಿ ಕರ್ಮಚಾರಿಗಳಿದ್ದಾರೆ. ವಿವಿಧ ಸಮೀಕ್ಷೆಗಳು ಬೇರೆ ಬೇರೆಯಾದ ಮಾಹಿತಿಗಳನ್ನು ಹೊರಗಿಡುತ್ತಿದೆ. ಇದೀಗ ಆಯೋಗದ ವತಿಯಿಂದ ಸಫಾಯಿ ಕರ್ಮಚಾರಿಗಳ ಬಗ್ಗೆ ಸಮಗ್ರವಾದ ಸರ್ವೇ ಕಾರ್ಯ ಮಾಡಲು ಸಿದ್ಧತೆ ನಡೆದಿದ್ದು ಮುಂದಿನ ತಿಂಗಳಿನಿಂದ ಈ ಕಾರ್ಯ ನಡೆಯಲಿದೆ. ರಾಜ್ಯದಲ್ಲಿರುವ ಎಲ್ಲಾ ಮಲ ಹೊರುವ ಕಾರ್ಮಿಕರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸಲಾಗುವುದು ಎಂದು ಅವರು ತಿಳಿಸಿದರು.

ಸಫಾಯಿ ಕರ್ಮಚಾರಿಗಳನ್ನು ದುಡಿಸಿಕೊಳ್ಳುವುದರ ವಿರುದ್ಧ ಅತ್ಯಂತ ಕಠಿಣವಾದ ಕಾನೂನುಗಳಿವೆ. ಆದರೆ ಇದು ಯಾವುದೂ ಪಾಲನೆಯಾಗುತ್ತಿಲ್ಲ. ರಾಜ್ಯದಲ್ಲಿ 53 ಜನ ಮಲ ಹೊರುವ ಕಾರ್ಮಿಕರ ಕೆಲಸದ ವೇಳೆಯಲ್ಲಿ ಮೃತಪಟ್ಟಿದ್ದಾರೆ. ಅವರಿಗೆ 10 ಲಕ್ಷ ರೂಗಳಂತೆ ಪರಿಹಾರ ನೀಡಬೇಕೆಂದು ಸುಪ್ರೀಂಕೊರ್ಟ್ ಆದೇಶಿಸಿದೆ. ಆದರೆ ಇನ್ನೂ ಕೇವಲ 8 ಜನರಿಗೆ ಮಾತ್ರ ಪರಿಹಾರ ನೀಡಲಾಗಿದೆ. ಉಳಿದವರಿಗೂ ಪರಿಹಾರ ಒದಗಿಸಲು ಆಯೋಗದ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇಲ್ಲಿ ತರಬೇತಿ ಪಡೆದು ಹೋಗುತ್ತಿರುವ ಕಾರ್ಮಿಕರು ತಮ್ಮ ನೆರೆಹೊರೆಯವರನ್ನೂ ಈ ವೃತ್ತಿಯಿಂದ ಹೊರತರಲು ಪ್ರಯತ್ನಿಸಬೇಕು. ಸಫಾಯಿ ಕರ್ಮಚಾರಿಗಳಿಗೆ ನೆರವಾಗಲು ಅಂಬೇಡ್ಕರ್ ಅಭಿವೃದ್ಧಿ ನಿಗಮ ಹಾಗೂ ಸರಕಾರ ಸಾಕಷ್ಟು ಅನುದಾನಗಳನ್ನು ಒದಗಿಸುತ್ತಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು. ಸರಕಾರದ ಭೂ ಒಡೆತನದ ಯೋಜನೆಯಡಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಎಡರು ಎಕರೆ ಜಮೀನು ಒದಗಿಸಲು ಅವಕಾಶವಿದ್ದು ಈ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ಜಮೀನು ಹಾಗೂ ಇತರೇ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು ಎಂದು ಅವರು ಭರವಸೆ ನೀಡಿದರು. ಯಾರೇ ಆಗಲಿ ಇಂತಹ ಅಮಾನುಷವಾದ, ಕ್ರೌರ್ಯದಿಂದ ಕೂಡಿದ ಮಲಹೊರುವ ಕಾರ್ಯಕ್ಕೆ ಮುಂದಾಗಬಾರದು ಎಂದು ಅವರು ಕಳಕಳಿಯಿಂದ ವಿನಂತಿಸಿದರು.

ಮುಖ್ಯ ಅತಿಥಿಗಳಾಗಿದ್ದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಡಾ. ಎಲ್.ಎಚ್.ಮಂಜುನಾಥ್ ಮಾತನಾಡಿ, ಮಲ ಹೊರುವಂತಹ ಪದ್ಧತಿಗಳನ್ನು ಸಂಪೂರ್ಣವಾಗಿ ನಿಷೇಧಿಸಬೇಕಾದ ಅಗತ್ಯವಿದೆ. ಇಲ್ಲಿ ತರಬೇತಿಯನ್ನು ಪಡೆದ ಪ್ರತಿಯೊಬ್ಬರೂ ಧೃಢವಾದ ಸಂಕಲ್ಪ ಮಾಡಿ ಸ್ವ ಉದ್ಯೋಗದೊಂದಿಗೆ ಬದುಕನ್ನು ನಡೆಸುವ ಕಾರ್ಯ ಮಾಡಬೇಕು. ಯಾರೂ ಇಂತಹ ಅಮಾನವೀಯ ಕೆಲಸಗಳನ್ನು ಮಾಡಲು ಹೋಗದಂತೆ ನೀವೇ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಮಲ ಹೊರುವ ಕಾರ್ಯಮಾಡುತ್ತಿದ್ದು ತರಬೇತಿಯಲ್ಲಿ ಭಾಗವಹಿಸಿದ ತಿರುಪಾಲ್, ಆದಿಯಾ ಛಬ್ಬಿಯಾ, ಸಂಕ್ರಯ್ಯ, ಸರೋಜಮ್ಮ ಹಾಗೂ ವಿನೋದ್ ತಮ್ಮ ಅನುಭವಗಳನ್ನು ವಿವರಿಸಿದರು.

ಅಂಬೇಡ್ಕರ್ ಅಭಿವೃದ್ಧಿ ನಿಗಮ ಬೆಂಗಳೂರು ಜಿಲ್ಲಾ ವ್ಯವಸ್ಥಾಪಕ ಪದ್ಮನಾಭ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್, ಸಫಾಯಿ ಕರ್ಮಚಾರಿಗಳ ಕಾವಲು ಸಮಿತಿ ಅಧ್ಯಕ್ಷ ಓಬಳೇಶ್ ಇದ್ದರು. ಗ್ರಾಮೀಣ ಶ್ರೇಷ್ಠತಾ ಕೇಂದ್ರದ ಪ್ರಾಚಾರ್ಯ ಸುರೇಶ್ ಸಾಲಿಯಾನ್ ಕಾರ್ಯಕ್ರಮ ನಿರೂಪಿಸಿದರು ದೇವಪ್ಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News