×
Ad

ಐಸಿಸ್‌ಗೂ ಇಸ್ಲಾಮಿನ ಸಿದ್ಧಾಂತಕ್ಕೂ ಸಂಬಂಧವಿಲ್ಲ: ಮುಹಮ್ಮದ್ ಇರ್ಫಾನ್

Update: 2016-08-06 19:51 IST

ಮಂಗಳೂರು,ಆ.6: ಮಾರಣಹೋಮಗಳನ್ನು ನಡೆಸುವ ಐಸಿಸ್‌ಗೂ ಇಸ್ಲಾಮಿನ ಸಿದ್ಧಾಂತಕ್ಕೂ ಯಾವುದೇ ಸಂಬಂಧವೂ ಇಲ್ಲ, ಸಾಮ್ಯತೆಯೂ ಇಲ್ಲ ಎಂದು ರಾಷ್ಟ್ರೀಯ ಹಜ್ ಕಮಿಟಿ ಸದಸ್ಯ ಮತ್ತು ಬಿಜೆಪಿ ರಾಷ್ಟ್ರೀಯ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ಮುಹಮ್ಮದ್ ರ್ಇಾನ್ ಅಹ್ಮದ್ ಸ್ಪಷ್ಟಪಡಿಸಿದ್ದಾರೆ.

ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೆರೆಯ ರಾಷ್ಟ್ರಗಳಲ್ಲಿ ದುಷ್ಕೃತ್ಯ ನಡಸುತ್ತಿರುವ ಐಸಿಸ್ ಎಂಬ ಪೆಡಂಭೂತದ ಒತ್ತಡಕ್ಕೆ ಭಾರತೀಯ ಯುವಕರು ಒಳಗಾಗುತ್ತಿಲ್ಲ. ಇದನ್ನು ಗೃಹ ಸಚಿವ ರಾಜನಾಥ್ ಸಿಂಗ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಯಾರಾದರೂ ದಾರಿ ತಪ್ಪಿ ಆಚೆ ಹೋಗಿದ್ದರೆ, ಅದರ ಬಗ್ಗೆ ಗೃಹ ಮತ್ತು ವಿದೇಶಾಂಗ ಸಚಿವಾಲಯ ನಿಗಾ ಇಟ್ಟಿದೆ. ದಾರಿ ತಪ್ಪಿದವರನ್ನು ತಿಳಿವಳಿಕೆ ನೀಡಿ, ಮನವರಿಕೆ ಮಾಡುವ ಕೆಲಸ ನಡೆಸುತ್ತೇವೆ ಎಂದವರು ಹೇಳಿದರು.

ದೇಶದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ಹಲ್ಲೆಗಳಿಗೂ ಬಿಜೆಪಿ ಅಥವಾ ಕೇಂದ್ರ ಸರಕಾರಕ್ಕೂ ಯಾವುದೇ ಸಂಬಂಧವಿಲ್ಲ. ದೇಶದ 125 ಕೋಟಿ ಜನರನ್ನೂ ಕೇಂದ್ರ ಸರಕಾರ ಏಕಪ್ರಕಾರದಲ್ಲಿ ನೋಡುತ್ತಿದೆ. ಯಾರಿಗೂ ತಾರತಮ್ಯ ಮಾಡುತ್ತಿಲ್ಲ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಮುಂದಿನ ಅವಧಿಗೆ ಬಿಜೆಪಿ ಸರಕಾರ ಬರಲಿದ್ದು, ಆಗ ಮಂಗಳೂರಿನಲ್ಲಿ ಹಜ್ ಘರ್ ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಹಜ್ ಘರ್ ನಿರ್ಮಾಣಕ್ಕೆ ಜಾಗ ಕಲ್ಪಿಸಿಕೊಡುವುದು, ಕಟ್ಟಡ ನಿರ್ಮಾಣ ರಾಜ್ಯ ಸರಕಾರದ ಜವಾಬ್ದಾರಿ. ಮಂಗಳೂರಿನಲ್ಲಿ ಈಗಾಗಲೇ ಎರಡು ಎಕರೆ ಜಮೀನು ಮೀಸಲಿಟ್ಟಿದೆ. ಇದಕ್ಕೆ ಕೇಂದ್ರ ಸರಕಾರದಿಂದ ನೆರವು ನೀಡಲಾಗದು. ಅಲ್ಪಸಂಖ್ಯಾತರಿಗೆ ಏನೂ ಮಾಡದ ರಾಜ್ಯದ ಕಾಂಗ್ರೆಸ್ ಸರಕಾರ ಒಂದು ವರ್ಷದಲ್ಲಿ ಹಜ್ ಘರ್ ನಿರ್ಮಿಸದಿದ್ದರೆ ಬಿಜೆಪಿ ಅಧಿಕಾರಕ್ಕೆ ಬಂದು ಮಾಡಲಿದೆ ಎಂದು ಅವರು ಹೇಳಿದರು.

ದೇಶದ 21 ಕೇಂದ್ರಗಳಿಂದ ಸರಕಾರದ ಮೂಲಕ 1.26 ಲಕ್ಷ, ಖಾಸಗಿ ಟೂರ್ ಆಪರೇಟರ್‌ಗಳಿಂದ 36 ಸಾವಿರ ಸೇರಿದಂತೆ ಒಟ್ಟು 1.56 ಲಕ್ಷ ಮಂದಿ ಭಾರತದಿಂದ ಈ ಬಾರಿ ಹಜ್ ಯಾತ್ರೆ ಕೈಗೊಳ್ಳುತ್ತಿದ್ದಾರೆ. ಇದರಲ್ಲಿ ಆರು ರಾಜ್ಯಗಳ ಶೇ.15ರಷ್ಟು ಮಂದಿ ದಿಲ್ಲಿ ಮೂಲಕ ಹಜ್ ತೆರಳುತ್ತಿದ್ದು, ಮಂಗಳೂರಿನಿಂದ ಹೊರಟ ದಿನವೇ ದಿಲ್ಲಿಯಿಂದಲೂ ಪ್ರಥಮ ವಿಮಾನ ಹೊರಟಿತ್ತು ಎಂದು ಅವರು ಹೇಳಿದರು.

ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ದೇಶದಲ್ಲೂ, ವಿದೇಶದಲ್ಲೂ ಅಲ್ಪಸಂಖ್ಯಾತರ ಕಲ್ಯಾಣ ಕೆಲಸದಲ್ಲಿ ತೊಡಗಿದೆ. ಕೇವಕ ಒಂದು ಟ್ವೀಟ್‌ಗೆ ಸ್ಪಂದಿಸಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್, ಸಹಾಯಕ ಸಚಿವ ಜನರಲ್ ವಿ.ಕೆ.ಸಿಂಗ್ ಅವರನ್ನು ಸೌದಿ ಅರೇಬಿಯಾಕ್ಕೆ ಕಳುಹಿಸಿ ಭಾರತೀಯ ಕಾರ್ಮಿಕರ ಕಷ್ಟ ನಷ್ಟಗಳಿಗೆ ಸ್ಪಂದಿಸಿದೆ ಎಂದರು. 

ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾ ಉಪಾಧ್ಯಕ್ಷ ರಹೀಂ ಉಚ್ಚಿಲ್, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಜಾಯ್ಲೆಸ್ ಡಿಸೋಜ, ಮುನೀರ್ ಬಾವ, ಅಬ್ದುಲ್ ಅಝೀಝ್, ಫ್ರಾಂಕ್ಲಿನ್ ಮೊಂತೆರೊ, ಜಮಾಲ್, ಉಡುಪಿ ಜಿಲ್ಲಾಧ್ಯಕ್ಷ ಸೋಜನ್ ಜೇಮ್ಸ್, ಬಿಜೆಪಿ ಮಂಗಳೂರು ಪ್ರಧಾನ ಕಾರ್ಯದರ್ಶಿ ಭಾಸ್ಕರಚಂದ್ರ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News