ಸುಲಿಗೆ, ಕಳವು ಪ್ರಕರಣ: ಇಬ್ಬರು ಮಹಿಳೆಯರ ಬಂಧನ
ಮಂಗಳೂರು, ಆ.5: ವಿವಿಧ ರೀತಿಯ ಸುಲಿಗೆ ಹಾಗೂ ಕಳವು ಪ್ರಕರಣಗಳಲ್ಲಿ ಭಾಗಿಯಾಗಿರುವ ಇಬ್ಬರು ಮಹಿಳೆಯರನ್ನು ದಕ್ಷಿಣ ಠಾಣಾ ಪೊಲೀಸರು ಬಂಧಿಸಿರುವುದಾಗಿ ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ತಿಳಿಸಿದ್ದಾರೆ.
ನಗರದ ಕಮಿಷನರ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಮಿಳುನಾಡು ಮೂಲದವರಾದ ಅಯ್ಯಪ್ಪನ್ ಎಂಬವರ ಪತ್ನಿ ಸಿಲ್ವಿ (24) ಹಾಗೂ ಮುತ್ತು ಎಂಬವರ ಪುತ್ರಿ ಅರೈ (22) ಬಂಧಿತ ಆರೋಪಿಗಳಾಗಿದ್ದು, ಇವರಿಂದ 2,64,000 ರೂ. ವೌಲ್ಯದ 80 ಗ್ರಾಂ ತೂಕದ ಚಿನ್ನಾಭರಣ ಮತ್ತು 1,45,000 ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದರು.
ಆರೋಪಿಗಳು ತಾವು ಸುಲಿಗೆ ಮಾಡಿದ ಚಿನ್ನಾಭರಣಗಳನ್ನು ಮಾರಾಟ ಮಾಡಲು ಬಂದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಮಂಗಳೂರು ದಕ್ಷಿಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಬೆಳ್ಳಿಯಪ್ಪ ಕೆ.ಯು. ಇಂದು ಬೆಳಗ್ಗೆ 9:30ಕ್ಕೆ ನಗರದ ರೂಪವಾಣಿ ಟಾಕೀಸ್ ಬಳಿಯಿಂದ ಬಂಧಿಸಿದ್ದಾರೆ. ಆರೋಪಿಗಳು ಊರೂರು ಸುತ್ತಾಡುತ್ತಾ ಒಬ್ಬಂಟಿಗರಾಗಿ ನಡೆದುಕೊಂಡು ಹೋಗುವ ಮಹಿಳೆಯರ ಹಾಗೂ ಬಸ್ಸಿನಲ್ಲಿ ಪ್ರಯಾಣಿಸುವ ಮಹಿಳೆಯರ ಚಿನ್ನಾಭರಣ ಮತ್ತು ಪರ್ಸ್‌ನಲ್ಲಿನ ಹಣವನ್ನು ಸುಲಿಗೆ ಮಾಡುವ ಪ್ರವೃತ್ತಿಯುಳ್ಳವರಾಗಿದ್ದಾರೆ. ಇವರು ಬಸ್ಸಿನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ಮಹಿಳಾ ಪ್ರಯಾಣಿಕರ ಬಳಿ ನಿಂತುಕೊಂಡು ಪ್ರಯಾಣಿಕರ ಗಮನ ಬೇರೆಡೆಗೆ ಸೆಳೆದು ಮಹಿಳೆಯರ ಕುತ್ತಿಗೆಯಲ್ಲಿನ ಚಿನ್ನಾಭರಣ ಮತ್ತು ಪರ್ಸ್‌ನಲ್ಲಿನ ಹಣವನ್ನು ಸುಲಿಗೆ ಮಾಡುವುದರಲ್ಲಿ ನಿಸ್ಸೀಮರಾಗಿದ್ದಾರೆ ಎಂದು ಡಿಸಿಪಿ ತಿಳಿಸಿದರು.
ಆರೋಪಿಗಳು 2016ರ ಜುಲೈ 29ರಂದು ಲೀಲಾವತಿ ಎಂಬವರು ಮಂಗಳಾದೇವಿಯಿಂದ ರೂಟ್ ನಂಬ್ರ 6 ಡಿ ಬಸ್ಸಿನಲ್ಲಿ ಕಂಕನಾಡಿಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಅವರ ವ್ಯಾನಿಟಿ ಬ್ಯಾಗ್‌ನಿಂದ 1,58,760 ನಗದು ಕಳವು, 2016ರ ಆಗಸ್ಟ್ 1ರಂದು ಸೂಟರ್‌ಪೇಟೆ ಮುಖ್ಯ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಗುಣವಂತಿ ಎಂಬವರಿಂದ ಸುಮಾರು 40 ಗ್ರಾ ತೂಕದ ಹವಳದ ಚಿನ್ನಾಭರಣ ಲೂಟಿ, ಆಗಸ್ಟ್ 5ರಂದು ಪರಮೇಶ್ವರಿ ಎಂಬವರು ಕಂಕನಾಡಿ ಬಸ್‌ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಯಲ್ಲಿದ್ದ ಸುಮಾರು 16 ಗ್ರಾಂ ತೂಕದ ಚಿನ್ನಾಭರಣ ಸುಲಿಗೆ, ಜುಲೈ 25ರಂದು ಮಾಲತಿ ಎಂಬವರು ಮಂಗಳಾದೇವಿಯಿಂದ ಬಸ್ಸಿಗೆ ಹತ್ತುತ್ತಿದ್ದ ಸಂದರ್ಭದಲ್ಲಿ ಅವರ ಕುತ್ತಿಗೆಯಿಂದ 24 ಗ್ರಾಂ ತೂಕದ ಚಿನ್ನದ ಸರ ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಶಾಂತರಾಜು ಮಾಹಿತಿ ನೀಡಿದರು.
ಕಾರ್ಯಾಚರಣೆಯಲ್ಲಿ ಪೊಲೀಸ್ ಉಪ ನಿರೀಕ್ಷಕರಾದ ಮುಹಮ್ಮದ್ ಶರೀಫ್ ಕೆ., ಅನಂತ ಮುರ್ಡೇಶ್ವರ, ಸಿಬ್ಬಂದಿಯಾದ ವಿಶ್ವನಾಥ, ಗಂಗಾಧರ, ಧನಂಜಯ ಗೌಡ, ಶೇಖರ್ ಗಟ್ಟಿ, ಸತ್ಯನಾರಾಯಣ, ನೂತನ್ ಕುಮಾರ್, ಚಂದ್ರಶೇಖರ, ವಿಶ್ವನಾಥ ಬುಡೋಳಿ, ಮಹಿಳಾ ಸಿಬ್ಬಂದಿ ಝರೀನಾ ತಾಜ್ ಪಾಲ್ಗೊಂಡಿದ್ದರು.