ಗೋರಕ್ಷಕರು ಸಮಾಜ ಕಂಟಕರು:ಮೋದಿ
ಮೋದಿ ಹೇಳಿದ್ದು......
ರಾತ್ರಿಯಲ್ಲಿ ಕ್ರಿಮಿನಲ್‌ಗಳು,ಹಗಲಿನಲ್ಲಿ ಗೋರಕ್ಷಕರು
ಗೋರಕ್ಷಣೆ ಎಂದರೆ ಇನ್ನೊಬ್ಬರಿಗೆ ಕಿರುಕುಳ ನೀಡುವುದಲ್ಲ
ಕಸಾಯಿಖಾನೆಗಳಲ್ಲಿಗಿಂತ ಹೆಚ್ಚಿನ ಗೋವುಗಳು ಪ್ಲಾಸ್ಟಿಕ್ ತಿಂದೇ ಸಾಯುತ್ತಿವೆ.
ಹೊಸದಿಲ್ಲಿ,ಆ.6: ತಥಾಕಥಿತ ಗೋರಕ್ಷಕರಿಂದ ದಲಿತರ ವಿರುದ್ಧದ ಹಿಂಸಾಚಾರದ ಕುರಿತು ಪ್ರಧಾನಿ ನರೇಂದ್ರ ಮೋದಿ ಕೊನೆಗೂ ತನ್ನ ವೌನ ಮುರಿದಿದ್ದಾರೆ. ಶನಿವಾರ ಇಲ್ಲಿ ಗೋರಕ್ಷಕರನ್ನು ತೀವ್ರ ತರಾಟೆಗೆತ್ತಿಕೊಂಡ ಮೋದಿ, ಈ ಪೈಕಿ ಹೆಚ್ಚಿನವರು ಗೋರಕ್ಷಣೆಯ ಹೆಸರಿನಲ್ಲಿ ‘ಅಂಗಡಿ ’ಗಳನ್ನು ತೆರೆದು ಕುಳಿತುಕೊಂಡಿರುವ ಸಮಾಜ ವಿರೋಧಿ ಶಕ್ತಿಗಳಾಗಿದ್ದಾರೆ ಮತ್ತು ಇದು ತನ್ನನ್ನು ಸಿಟ್ಟಿಗೆಬ್ಬಿಸಿದೆ ಎಂದು ಹೇಳಿದರು.
ಈ ಸ್ವಘೋಷಿತ ಗೋರಕ್ಷಕರ ಪೈಕಿ ಶೇ.80ರಷ್ಟು ಜನರು ರಾತ್ರಿಗಳಲ್ಲಿ ಅಕ್ರಮ ಚಟುವಟಿಕೆಗಳನ್ನು ನಡೆಸುತ್ತಾ ಹಗಲುಗಳಲ್ಲಿ ಗೋರಕ್ಷಣೆಯ ಸೋಗಿನಲ್ಲಿರುವವರಾಗಿದ್ದಾರೆ. ಆದ್ದರಿಂದ ಇಂತಹ ಗೋರಕ್ಷಕರ ಬಗ್ಗೆ ಮಾಹಿತಿ ವಿವರಗಳ ದಾಖಲೆಗಳನ್ನು ಸಿದ್ಧಪಡಿಸುವಂತೆ ರಾಜ್ಯ ಸರಕಾರಗಳಿಗೆ ಸೂಚಿಸಿದ ಅವರು, ಗೋರಕ್ಷಣೆ ಎಂದರೆ ಇತರರಿಗೆ ಕಿರುಕುಳ ನೀಡುವುದು ಎಂದು ಅರ್ಥವಲ್ಲ ಎಂದು ಒತ್ತಿ ಹೇಳಿದರು. ತನ್ಮೂಲಕ ತಥಾಕಥಿತ ಗೋರಕ್ಷಕರಿಗೆ ಕಠಿಣ ಸಂದೇಶವೊಂದನ್ನು ರವಾನಿಸಿದರು.
ತನ್ನ ಸರಕಾರದ ‘ಮೈ ಗವ್ ’ವೇದಿಕೆಯ ದ್ವಿತೀಯ ವರ್ಷಾಚರಣೆಯ ಪ್ರಯುಕ್ತ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾರ ‘ಟೌನ್‌ಹಾಲ್’ ಮಾದರಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರಜೆಗಳೊಂದಿಗೆ ತನ್ನ ಮೊದಲ ನೇರ ಸಂವಾದ ಕಾರ್ಯಕ್ರಮದಲ್ಲಿ ಮೋದಿ ಗೋರಕ್ಷಕರ ವಿರುದ್ಧ ಈ ಕಟುಟೀಕೆಯನ್ನು ಮಾಡಿದರು.
ಉತ್ತರ ಪ್ರದೇಶ,ಗುಜರಾತ್ ಮತ್ತು ಮಧ್ಯಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಗೋರಕ್ಷಕರಿಂದ ದಲಿತರು ಮತ್ತು ಮುಸ್ಲಿಮರ ವಿರುದ್ಧದ ಹಿಂಸಾಚಾರದ ಘಟನೆಗಳ ಕುರಿತು ತನ್ನ ಸರಕಾರ ಮತ್ತು ಬಿಜೆಪಿ ವ್ಯಾಪಕ ಟೀಕೆಗಳಿಗೆ ಗುರಿಯಾಗಿರುವ ಸಂದರ್ಭದಲ್ಲಿ ಪ್ರಧಾನಿಯವರ ಈ ಹೇಳಿಕೆ ಹೊರಬಿದ್ದಿದೆ.
‘‘ಜನರು ಗೋರಕ್ಷಣೆಯ ಹೆಸರಿನಲ್ಲಿ ಅಂಗಡಿಗಳನ್ನು ನಡೆಸುತ್ತಿರುವುದು ನನ್ನಲ್ಲಿ ಸಿಟ್ಟನ್ನು ಮೂಡಿಸಿದೆ. ಅವರಲ್ಲಿ ಹೆಚ್ಚಿನವರು ಗೋರಕ್ಷಣೆಯ ಮುಖವಾಡದ ಹಿಂದೆ ಬಚ್ಚಿಟ್ಟುಕೊಂಡಿರುವ ಸಮಾಜ ವಿರೋಧಿಗಳಾಗಿದ್ದಾರೆ ’’ ಎಂದು ಅವರು ಹೇಳಿದರು.
ಹೆಚ್ಚಿನ ಗೋವುಗಳು ಮಾಂಸಕ್ಕಾಗಿ ಕೊಲ್ಲಲ್ಪಡುವುದಕ್ಕಿಂತ ಪ್ಲಾಸ್ಟಿಕ್ ತ್ಯಾಜ್ಯಗಳನ್ನೇ ತಿಂದು ಸಾಯುತ್ತಿವೆ ಎಂದು ಬೆಟ್ಟು ಮಾಡಿದ ಅವರು, ಗೋವುಗಳನ್ನು ರಕ್ಷಿಸಲು ಬಯಸುವವರು ಅವು ಪ್ಲಾಸ್ಟಿಕ್ ತಿನ್ನುವುದನ್ನು ತಡೆಯಬೇಕು ಮತ್ತು ಇದು ಮಹತ್ವದ ಸೇವೆಯಾಗುತ್ತದೆ ಎಂದರು.
ಗೋಸೇವೆಯಲ್ಲಿ ತನ್ನ ಸ್ವಂತ ಕಾರ್ಯವನ್ನು ನೆನಪಿಸಿಕೊಂಡ ಮೋದಿ, ಜಾನುವಾರುಗಳ ಆರೋಗ್ಯ ತಪಾಸಣೆಗಾಗಿ ತಾನು ಹಮ್ಮಿಕೊಂಡಿದ್ದ ಶಿಬಿರವೊಂದರಲ್ಲಿ ಒಂದು ಗೋವಿನ ಹೊಟ್ಟೆಯಿಂದ ಕನಿಷ್ಠ ಎರಡು ಬಕೆಟ್ ತುಂಬ ಪ್ಲಾಸ್ಟಿಕ್ ಹೊರತೆಗೆಯಲಾಗಿತ್ತು ಎಂದು ತಿಳಿಸಿದರು.