ಉಳ್ಳಾಲ: ಆಪದ್ಬಾಂಧವ ಫಯಾಝ್ ಆಕಸ್ಮಿಕ ನಿಧನಕ್ಕೆ ಸಚಿವ ಖಾದರ್ ಸಂತಾಪ

Update: 2016-08-06 16:24 GMT

ಉಳ್ಳಾಲ, ಆ.6: ಉಳ್ಳಾಲದ ಸ್ಥಳೀಯ ಈಜುಪಟು ಫಯಾಝ್ ಆಕಸ್ಮಿಕ ಅಗಲುವಿಕೆಗೆ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಸಂತಾಪ ವ್ಯಕ್ತಪಡಿಸಿದ್ದಾರೆ.

ದರ್ಗಾ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ಬರುವ ಕಡಲಕಿನಾರೆಗೆ ತೆರಳಿ ನೀರಿನಲ್ಲಿ ಈಜಿ ಅಪಾಯಕ್ಕೀಡಾಗುವ ಅದೆಷ್ಟೋ ಜೀವವನ್ನು ರಕ್ಷಿಸಿ ಪ್ರಶಂಸೆಗೆ ಈಡಾದವರು ಯುವಕ ಫಯಾಝ್. ಇತ್ತೀಚೆಗೆ ಮೈಸೂರಿನ ಮೂವರು ನೀರು ಪಾಲಾದಾಗ ಅಲ್ಲಿ ಫಯಾಝ್ ರಕ್ಷಣಾ ಕಾರ್ಯಕ್ಕೆ ಇಳಿದು ಮಾನವೀಯತೆ ಮೆರೆದ ನೆನಪು ಇನ್ನೂ ಮಾಸಿಲ್ಲ. ಇಂದು ಫಯಾಝ್ ಇಂತಹುದೇ ಕೆಲವು ಜೀವವನ್ನು ರಕ್ಷಿಸಲು ನೀರಿಗೆ ದುಮುಕಿ ಸ್ವತಃ ಪ್ರಾಣವನ್ನು ಕಳಕೊಂಡದ್ದು ಅತೀವ ದುಖ ತಂದಿದೆ. ಜೊತೆಗೆ ಇವರ ಅಗಲುವಿಕೆಯಿಂದ ಓರ್ವ ಸರಳ, ಸಜ್ಜನ ಆಪತ್ಬಾಂಧವನನ್ನು ಕಳೆದುಕೊಂಡಂತಾಗಿದೆ ಎಂದು ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.

ಇಂದು ಉಳ್ಳಾಲ ಅಳಿವೆಬಾಗಿಲಿನಲ್ಲಿ ನಾಡದೋಣಿಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ತಮಿಳ್ನಾಡು ಮೂಲದ ಡೆಲ್ಲಿ ಚಂದನ್ ನೀರುಪಾಲಾದಾಗ ರಕ್ಷಿಸಲು ತೆರಳಿದ ಫಯಾಝ್ ನೀರಿನಲ್ಲಿ ಮುಳುಗಿ ಮೃತಪಟ್ಟರು. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಮೃತದೇಹ ವೀಕ್ಷಿಸಿದ ಸಚಿವ ಯು.ಟಿ. ಖಾದರ್ ತೀವ್ರ ಸಂತಾಪ ಸೂಚಿಸಿದ್ದಾರೆ.

ಅಲ್ಲದೆ, ಶನಿವಾರ ನಿಧನ ಹೊಂದಿದ ಹಂಪನಕಟ್ಟ ಬೂಟ್ ಬಝಾರ್‌ನ ಮುಬಾರಕ್ ಹಾಜಿ ಮತ್ತು ಪಾವೂರು ಹುಸೈನ್ ಹಾಜಿ ಅವರ ನಿಧನಕ್ಕೂ ಸಚಿವರು ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News