×
Ad

ಪುತ್ತೂರಿಗೆ ಸರಕಾರಿ ಮೆಡಿಕಲ್ ಕಾಲೇಜು ಬೇಡಿಕೆ ಈಡೇರಿಕೆಗೆ ಆಗ್ರಹ

Update: 2016-08-06 21:44 IST

ಪುತ್ತೂರು, ಆ.6: ಸರಕಾರಿ ಮೆಡಿಕಲ್ ಕಾಲೇಜಿಗೆಂದು ಪುತ್ತೂರಿನಲ್ಲಿ 40 ಎಕರೆ ಸ್ಥಳ ಕಾದಿರಿಸಲಾಗಿದ್ದು, ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡುವ ಸಂದರ್ಭ ಅದನ್ನು ಪುತ್ತೂರಿಗೆ ನೀಡಬೇಕೆಂದು ಸರಕಾರದ ಮೇಲೆ ಒತ್ತಡ ತರುವ ಸಲುವಾಗಿ ಪುತ್ತೂರಿನಲ್ಲಿ ಹೋರಾಟ ಸಮಿತಿಯೊಂದನ್ನು ರಚಿಸಲಾಗಿದೆ.

ಪುತ್ತೂರಿನ ಮಾದೆ ದೇವುಸ್ ಚರ್ಚ್‌ನ ಸಭಾಂಗಣದಲ್ಲಿ ಪುತ್ತೂರು ಕೆನರಾ ಮತ್ತು ವಾಣಿಜ್ಯ ಸಂಘದ ಆಶ್ರಯದಲ್ಲಿ ಶುಕ್ರವಾರ ಸಂಜೆ ಶಾಸಕಿ ಶಕುಂತಳಾ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ನಾಗರಿಕರ ಸಮಾಲೋಚನಾ ಸಭೆ ನಡೆಯಿತು. ಮೆಡಿಕಲ್ ಕಾಲೇಜಿಗೆ ಸಂಬಂಧಿಸಿ ಸರಕಾರದ ಮಟ್ಟದಲ್ಲಿ ವ್ಯವಹರಿಸಲು ಶಾಸಕರ ಗೌರವಾಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಯಿತು.

ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವಪ್ರಸಾದ್ ಸೇಡಿಯಾಪು ವಿಷಯ ಮಂಡನೆ ಮಾಡಿ, ಜಿಲ್ಲೆಗೆ ಒಂದರ ಕೋಟಾದಂತೆ ದಕ್ಷಿಣ ಕನ್ನಡಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾದರೆ ಅದು ಅರ್ಹವಾಗಿಯೇ ಪುತ್ತೂರಿಗೆ ಸಿಗಬೇಕು ಎಂದರು.

ಮಂಗಳೂರಿನಲ್ಲಿ ಈಗಾಗಲೇ ಎಂಟು ಮೆಡಿಕಲ್ ಕಾಲೇಜುಗಳಿದ್ದು, ಅಲ್ಲಿನ ನಗರದ ಒತ್ತಡವೂ ವಿಪರೀತ ಹೆಚ್ಚಿದೆ. ಇಡೀ ಜಿಲ್ಲೆ ಪುತ್ತೂರು ಭಾಗದ ಕಡೆಗೆ ವಿಸ್ತರಿಸಿಕೊಂಡಿರುವ ಕಾರಣ ಜಿಲ್ಲೆಯ ಮಧ್ಯಭಾಗವಾದ ಪುತ್ತೂರಲ್ಲಿ ಆಗಬೇಕು ಎಂದು ಅಭಿಪ್ರಾಯಪಟ್ಟರು. ಶಾಸಕಿ ಶಕುಂತಳಾ ಶೆಟ್ಟಿ ಅವರು ಮಾತನಾಡಿ, 2013ರಲ್ಲಿ ಶಾಸಕಿಯಾಗಿ ಆಯ್ಕೆಯಾದ ಬಳಿಕ ಪುತ್ತೂರನ್ನು ಜಿಲ್ಲಾ ಕೇಂದ್ರ ಮಾಡಬೇಕೆಂಬ ಕನಸು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ ಎಂದರು.

ಸರಕಾರಿ ಮೆಡಿಕಲ್ ಕಾಲೇಜು, ಪೊಲೀಸ್ ತರಬೇತಿ ಕೇಂದ್ರ, ಕ್ರೀಡಾಂಗಣ ಸೇರಿದಂತೆ ಅತ್ಯಂತ ಅಗತ್ಯ ಸೌಲಭ್ಯವನ್ನು ಪುತ್ತೂರಿಗೆ ತರಲು ಯತ್ನಿಸುತ್ತಿದ್ದೇನೆ. ಇದಕ್ಕೆಲ್ಲ ಒಟ್ಟು 250 ಎಕರೆ ಜಮೀನು ಬೇಕಾದೀತು. ಮೆಡಿಕಲ್ ಕಾಲೇಜಿಗೆ ಈಗಾಗಲೇ ಪುತ್ತೂರು ಪೇಟೆಯಿಂದ ಏಳು ಕಿ.ಮೀ. ದೂರದ ಸೇಡಿಯಾಪು ಬಳಿ 40 ಎಕರೆ ಜಾಗ ಕಾದಿರಿಸಿದ್ದೇವೆ. ಪುತ್ತೂರಿಗೆ ಮೆಡಿಕಲ್ ಕಾಲೇಜು ಯಾಕೆ ಎಂಬುದರ ಬಗ್ಗೆ 8 ಪುಟಗಳ ಸುದೀರ್ಘ ವರದಿ ತಯಾರಿಸಿ ಸರಕಾರಕ್ಕೆ ಸಲ್ಲಿಸಿದ್ದೇನೆ ಎಂದರು.

ನಾನೊಬ್ಬಳೇ ಒತ್ತಡ ತಂದರೆ ಸಾಲದು. ಸಂಘ ಸಂಸ್ಥೆಗಳು, ಸಾರ್ವಜನಿಕರು ಕೂಡ ಸರಕಾರಕ್ಕೆ ಒತ್ತಡ ತರಬೇಕು. ಆದರೆ ಇದೆಲ್ಲ ಪ್ರತಿಭಟನೆಗಳ ಮೂಲಕ ನಡೆಯುವಂಥದ್ದಲ್ಲ. ಸರಕಾರಕ್ಕೆ ಮನವರಿಕೆ ಮಾಡಿ, ಮನಸು ಗೆದ್ದು ಪ್ರೀತಿಯಿಂದ ಮಾಡಿಸಬೇಕು. ರಾಜಕೀಯ ಮರೆತು ಮಾಡೋಣ. ರಾಜಕೀಯ ತಂದರೆ ಉದ್ದೇಶ ಹಾಳಾದೀತು ಎಂದು ಅವರು ತಿಳಿಸಿದರು.

ಪುತ್ತೂರಿನ ಬಳಕೆದಾರರ ಹಿತರಕ್ಷಣಾ ವೇದಿಕೆಯ ಸಂಚಾಲಕ ದಿನೇಶ್ ಭಟ್, ಈ ಹಿಂದೆ ಕಾರವಾರಕ್ಕೆ ಸರಕಾರಿ ಮೆಡಿಕಲ್ ಕಾಲೇಜು ಹೇಗೆ ಮಂಜೂರಾಯಿತು ಮತ್ತು ಪುತ್ತೂರಿನ ವಿಷಯದಲ್ಲಿ ಯಾವ ರೀತಿ ಹೋರಾಟ ಮಾಡಬಹುದು ಎಂಬ ಬಗ್ಗೆ ಮಾಹಿತಿ ನೀಡಿದರು.

ವಕೀಲ ಬಿ. ಪುರಂದರ ಭಟ್, ಸಾಮೆತ್ತಡ್ಕ ಗೋಪಾಲಕೃಷ್ಣ ಭಟ್, ಸುಭಾಷ್ ರೈ ಬೆಳ್ಳಿಪ್ಪಾಡಿ, ಮುಹಮ್ಮದ್ ದಾರಿಮಿ, ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ ಮತ್ತಿತರರು ಸಲಹೆ ಸೂಚನೆ ನೀಡಿದರು. ಮಾದೆ ದೇವುಸ್ ಚರ್ಚ್‌ನ ಧರ್ಮಗುರು ಅಲ್ಫ್ರೆಡ್ ಜೆ. ಪಿಂಟೊ, ಪುತ್ತೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪ್ರಮುಖರಾದ ಭಾಸ್ಕರ ಬಾರ್ಯ ಮತ್ತು ಜೇಮ್ಸ್ ಜೆ. ಮಾಡ್ತಾ ಮತ್ತಿತರರು ಉಪಸ್ಥಿತರಿದ್ದರು.

ಸಮಿತಿ ಪದಾಧಿಕಾರಿಗಳು ಅಧ್ಯಕ್ಷರಾಗಿ ಎಂ.ಎಸ್. ರಘುನಾಥ ರಾವ್ , ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವಪ್ರಸಾದ್ ಸೇಡಿಯಾಪು, ಸಂಚಾಲಕರಾಗಿ ದಿನೇಶ್ ಭಟ್, ಉಪಾಧ್ಯಕ್ಷರಾಗಿ ಹುಸೇನ್ ದಾರಿಮಿ, ಅಲ್ಫ್ರೆಡ್ ಜೆ. ಪಿಂಟೋ ಮತ್ತು ಎನ್. ಸುಧಾಕರ ಶೆಟ್ಟಿ, ಕಾರ್ಯದರ್ಶಿಗಳಾಗಿ ಡೀಕಯ್ಯ ಪೆರ್ವೋಡಿ, ಚಂದ್ರಹಾಸ ರೈ ಮತ್ತು ರವಿ ಮುಂಗ್ಲಿಮನೆ ಆಯ್ಕೆ ಮಾಡಲಾಯಿತು. 15 ಮಂದಿಯನ್ನು ಸದಸ್ಯರಾಗಿ ಹಾಗೂ ಸಂಘ ಸಂಸ್ಥೆಗಳನ್ನು ಸಾಂಸ್ಥಿಕ ಸದಸ್ಯರಾಗಿ ಆರಿಸಲಾಯಿತು.

   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News