ನಾಳೆ ಮಾಯಿಪ್ಪಾಡಿ ಡಯೆಟ್‌ನಲ್ಲಿ ಆಟಿಡೊಂಜಿ ದಿನ

Update: 2016-08-07 04:38 GMT

ಕಾಸರಗೋಡು, ಆ.7: ಮಾಯಿಪ್ಪಾಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಕಾಸರಗೋಡು ಡಯೆಟಿನಲ್ಲಿ ಆ.8ರಂದು ಮೂರನೆ ವರ್ಷದ ’ಆಟಿಡೊಂಜಿ ದಿನ’ ಕಾರ್ಯಕ್ರಮ ನಡೆಯಲಿದೆ.
ದ್ವಿತಿಯ ವರ್ಷದ ಕನ್ನಡ ವಿಭಾಗದ ಅಧ್ಯಾಪಕ ವಿದ್ಯಾರ್ಥಿ-ವಿದ್ಯಾರ್ಥಿನಿಯರ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಬೆಳಗ್ಗೆ 11 ಗಂಟೆಗೆ ಆರಂಭಗೊಳ್ಳಲಿದೆ. ತುಳುನಾಡಿನ ಜನರ ವಿಶಿಷ್ಟ ಆಹಾರ ಪದಾರ್ಥಗಳನ್ನು ವಿದ್ಯಾರ್ಥಿಗಳೇ ಸ್ವತಃ ತಯಾರಿಸಿ ಪ್ರದರ್ಶಿಸಲಿರುವರು. ವಿವಿಧ ವಿಭಾಗಗಳಲ್ಲಿ ನೂರಕ್ಕಿಂತಲೂ ಹೆಚ್ಚಿನ ತಿಂಡಿ ತಿನಸುಗಳನ್ನು ತಯಾರಿಸಿ ಪ್ರದರ್ಶಿಸುವುದರ ಜೊತೆಗೆ ಆ ಆಹಾರ ಪದಾರ್ಥಗಳನ್ನು ಮಾಡುವ ವಿಧಾನದ ಕುರಿತಾದ ಪ್ರಾತ್ಯಕ್ಷಿಕೆಗಳನ್ನೂ ಅಧ್ಯಾಪಕ ವಿದ್ಯಾರ್ಥಿಗಳು ನಡೆಸಿಕೊಡಲಿರುವರು. ಮಾತ್ರವಲ್ಲದೆ ಅದನ್ನು ತಯಾರಿಸಲು ಉಪಯೋಗಿಸಿದ ಕಚ್ಚಾ ವಸ್ತುಗಳ ಪ್ರದರ್ಶನ, ಮಾಡುವ ವಿಧಾನದ ಕುರಿತಾದ ಲಿಖಿತ ರೂಪದ ಮಾಹಿತಿ ಇತ್ಯಾದಿ ವಿಚಾರಗಳೂ ಪ್ರದರ್ಶನದಲ್ಲಿ ಇರಲಿವೆ. ತುಳುನಾಡಿನ ಸಂಸ್ಕೃತಿಯ ಭಾಗವಾದ ವಸ್ತುಗಳ ಪ್ರದರ್ಶನ, ತುಳುನಾಡಿನ ವೈಶಿಷ್ಟಗಳ ಕುರಿತಾದ ವೀಡಿಯೊ ಪ್ರದರ್ಶನ, ಪ್ರಬಂಧ ಮಂಡನೆ, ವಿಚಾರ ವಿನಿಮಯ ಇತ್ಯಾದಿ ಕಾರ್ಯಕ್ರಮಗಳನ್ನೂ ಇದರ ಭಾಗವಾಗಿ ವ್ಯವಸ್ಥೆಗೊಳಿಸಲಾಗಿದೆ.
ಅಪರಾಹ್ನ 2 ಗಂಟೆಗೆ ’ತುಳುನಾಡ ಸಂಸ್ಕೃತಿ, ನಂಬಿಕೆ ಮತ್ತು ನಡವಳಿಕೆಗಳು’ ಎಂಬ ಆಶಯದ ಹಿನ್ನೆಲೆಯಲ್ಲಿ ಸಂಪೂರ್ಣ ತುಳುಭಾಷೆಯಲ್ಲಿ ಸಾಹಿತ್ಯ ಸಭೆಯು ನಡೆಯಲಿರುವುದು. ಈ ಕಾರ್ಯಕ್ರಮದಲ್ಲಿ ನಮ್ಮ ತುಳುನಾಡಿನ ಸಂಸ್ಕೃತಿಯನ್ನು ಅನಾವರಣಗೊಳಿಸುವ ಪಾಡ್ದನ, ಶೋಭಾನೆ ಹಾಡುಗಳು, ಜನಪದ ನೃತ್ಯ ಮೊದಲಾದ ವಿವಿಧ ವೈವಿಧ್ಯಮಯ ಕಾರ್ಯಕ್ರಮಗಳನ್ನು ಅಧ್ಯಾಪಕ ವಿದ್ಯಾರ್ಥಿಗಳು ನಡೆಸಿಕೊಡಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News