ಸುಳ್ಯ: ನಾಡಿನೆಲ್ಲೆಡೆ ನಾಗರ ಪಂಚಮಿ ಆಚರಣೆ
ಸುಳ್ಯ,ಆ.7: ತಾಲೂಕಿನ ಹಲವೆಡೆಗಳಲ್ಲಿ ನಾಗರ ಪಂಚಮಿಯನ್ನು ಭಕ್ತಿ ಶ್ರದ್ಧೆಯಿಂದ ಕೊಂಡಾಡಲಾಯಿತು.
ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ನಾಗನ ಕಟ್ಟೆಯಲ್ಲಿ ನಾಗರ ಪಂಚಮಿ ದಿನದಂದು ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಸಹಸ್ರಾರು ಭಕ್ತಾದಿಗಳು ಸರತಿ ಸಾಲಿನಲ್ಲಿ ನಿಂತು ನಾಗನಿಗೆ ಕ್ಷೀರಾಭಿಷೇಕ ಮಾಡಿಸಿ ಪ್ರಸಾದ ಸ್ವೀಕರಿಸಿದರು. ಸುಳ್ಯ ಶ್ರೀರಾಮ ಮಂದಿರದ ನಾಗನಕಟ್ಟೆಯಲ್ಲಿ ಕ್ಷೀರಾಭಿಷೇಕ ನಡೆಯಿತು. ಬೂಡು ಭಗವತಿ ದೇವಸ್ತಾನದ ಬಳಿ ಇರುವ ನಾಗ ಸಾನಿಧ್ಯದಲ್ಲೂ ನಾಗರ ಪಂಚಮಿ ಆಚರಣೆ ನಡೆಯಿತು. ಚೆನ್ನಕೇಶವ ದೇವಸ್ತಾನದ ಆನುವಂಶಿಕ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಬೂಡು ರಾಧಕೃಷ್ಣ ರೈ ಮೊದಲಾದವರಿದ್ದರು. ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದಲ್ಲಿರುವ ನಾಗಕಟ್ಟೆಗೆ ನಾಗರಪಂಚಮಿಯ ಪ್ರಯುಕ್ತ ಸೀಯಾಳ ಅಭಿಷೇಕ, ಹಾಲಾಭಿಷೇಕ ಹಾಗೂ ಪೂಜಾ ವಿಧಿಗಳು ನಡೆದವು. ಈ ಸಂದರ್ಭದಲ್ಲಿ ನಾಗಪಟ್ಟಣ ಶ್ರೀ ಸದಾಶಿವ ದೇವಸ್ಥಾನದ ಆಡಳಿತ ಸಮಿತಿಯ ನಿಕಟಪೂವಾಧ್ಯಕ್ಷರಾದ ದಾಮೋದರ ನಾರ್ಕೋಡು ಸದಸ್ಯರುಗಳಾದ ದಿನೇಶ್ ಕೊಲ್ಚಾರು, ಬಾಬು ಪಾರೆಸ್ಟರ್, ಆದರ್ಶ, ರಾಮ ಸುಂದರ, ಜತ್ತಪ್ಪ ಹಾಗೂ ಭಕ್ತಾಧಿಗಳು ಉಪಸ್ಥಿತರಿದ್ದರು.ಆಲೆಟ್ಟಿ ಶ್ರೀ ಸದಾಶಿವ ದೇವಸ್ಥಾನದಲ್ಲಿ ನಾಗರ ಪಂಚಮಿಯ ದಿನದಂದು ನಾಗನ ಕಟ್ಟೆಯಲ್ಲಿ ನಾಗನಿಗೆ ಹಾಲೆರೆದು ಪೂಜೆ ಸಲ್ಲಿಸಲಾಯಿತು. ಪ್ರಧಾನ ಅರ್ಚಕರಾದ ಸುಪ್ರೀಂ ಭಟ್ ವೈದಿಕ ಕಾರ್ಯಕ್ರಮ ನೆರವೇರಿಸಿದರು. ಸೇವಾ ಸಮಿತಿ ಅಧ್ಯಕ್ಷರು ಸದಸ್ಯರು ಗ್ರಾಮದ ಭಕ್ತಾದಿಗಳು ಭಾಗವಹಿಸಿದರು.