ಮೊಗೇರ ಜನಾಂಗ ಪರಿಸರದ ಆರಾಧಕರು : ಡಾ.ಪೆರಾಜೆ
ಸುಳ್ಯ,ಆ.7: ಮೊಗೇರ ಜನಾಂಗ ಪರಿಸರದ ಆರಾಧಕರು. ಕಾಲಕಾಲಕ್ಕೆ ಬದಲಾವಣೆ ಹೊಂದುತ್ತಾ ಬಂದರೂ ಸಂಸ್ಕೃತಿಯನ್ನು ಉಳಿಸಿಕೊಂಡೇ ಬಂದಿದೆ. ಪಾಡ್ದಣ ಸಂಧಿಗಳ ಮೂಲಕ ತನ್ನ ಪರಂಪರೆಯನ್ನು ಹೊಸ ಜನಾಂಗಕ್ಕೆ ಬದಲಾಯಿಸುತ್ತಾ ಬಂದಿದೆ ಎಂದು ಹಂಪಿ ವಿಶ್ವವಿದ್ಯಾನಿಲಯದ ಕನ್ನಡ ಪ್ರಾಧ್ಯಾಪಕರಾದ ಡಾ.ಮಾಧವ ಪೆರಾಜೆ ಹೇಳಿದರು.
ಅವರು ಅರಂತೋಡು ಮೊಗೇರ ಸಂಘ ಹಾಗೂ ಮೊಗೇರ ಯುವ ವೇದಿಕೆ ವತಿಯಿಂದ ತೆಕ್ಕಿಲ್ ಸಭಾಭವನದಲ್ಲಿ ನಡೆದ ಆಟಿಡೊಂಜಿ ದಿನ, ಸನ್ಮಾನ ಪ್ರತಿಭಾ ಪುರಸ್ಕಾರದಲ್ಲಿ ಪ್ರಧಾನ ಭಾಷಣ ಮಾಡಿದರು. ಕಾರ್ಯಕ್ರಮವನ್ನು ಪಾಡ್ದನಗಳ ಕೋಗಿಲೆ ರಾಜ್ಯ ಪ್ರಶಸ್ತಿ ವಿಜೇತೆ ಗಿಡಿಗೆರೆ ರಾಮಕ್ಕ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಗಿಡಿಗೆರೆ ರಾಮಕ್ಕ, ಪುತ್ತೂರು ಪುರಸಭಾ ಸದಸ್ಯ ಮುಖೇಶ್ ಕೆಮ್ಮಿಂಜೆ ಹಾಗೂ ಚಲನಚಿತ್ರ ನಟ ಮಾಸ್ಟರ್ ಜಗದೀಶ್‌ರನ್ನು ಸನ್ಮಾನಿಸಲಾಯಿತು. ಸುಳ್ಯ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಶಂಕರ್ ಪೆರಾಜೆ ಅಧ್ಯಕ್ಷತೆ ವಹಿಸಿದ್ದರು. ಪುತ್ತೂರು ಮೊಗೇರ ಯುವ ವೇದಿಕೆಯ ಅಧ್ಯಕ್ಷ ಶೇಖರ ಮಾಡಾವು, ಸುಳ್ಯ ಮೊಗೇರ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಪಲ್ಲತ್ತಡ್ಕ, ಮೊಗೇರ ಸಂಘದ ಗೌರವ ಸಲಹೆಗಾರ ನಂದರಾಜ್ ಸಂಕೇಶ, ಕೇಶವ ಮಾಸ್ತರ್ ಹೊಸಗದ್ದೆ, ಮೊಗೇರ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಂಗ್ಲೆಗುಡ್ಡೆ, ಅರಂತೋಡು ಗ್ರಾಮ ಮೊಗೇರ ಸಂಘದ ಅಧ್ಯಕ್ಷ ಬಾಬು ಮಾಡದಕಾನ, ಕಾರ್ಯದರ್ಶಿ ಪುಟ್ಟ ಅಡ್ಯಡ್ಕ ವೇದಿಕೆಯಲ್ಲಿದ್ದರು. ತಾಲೂಕು ಸಂಘದ ಗೌರವಾಧ್ಯಕ್ಷ ದೇವಪ್ಪ ಹೈದಂಗೂರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಚಿದಾನಂದ ಕಟ್ಟಕೋಡಿ ಸ್ವಾಗತಿಸಿದರು. ಸವಿತಾ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು. ಕು.ಜಯಲಕ್ಷ್ಮಿ ವಂದಿಸಿದರು.
ಸಭಾ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅರಂತೋಡು ಗ್ರಾಮ ಸಮಿತಿ, ಮಂಜು ಸುಳ್ಯ, ರಮೇಶ್ ಮೆಟ್ಟಿನಡ್ಕ ತಂಡದಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಅರಂತೋಡು ಗ್ರಾಮ ಯುವ ವೇದಿಕೆ ಅಧ್ಯಕ್ಷ ಮೋಹನಪ್ರಸಾದ್, ಕಾರ್ಯದರ್ಶಿ ಯತೀಶ್ ಅಡ್ಯಡ್ಕ, ಪುರುಷೋತ್ತಮ ಕಟ್ಟಕೋಡಿ, ಚಂದ್ರಕುಮಾರ್ ಅಡ್ಕಬಳೆ, ಜಯಲಕ್ಷ್ಮಿ ಕಟ್ಟಕೋಡಿ, ರಕ್ಷಿತಾ ಅಡ್ಯಡ್ಕ, ಚೌಕಾರು ಕಟ್ಟಕೋಡಿ, ಮನ್ಸ ಮುಗೇರ ಅಡ್ಕಬಳೆ, ಶಂಕರನಾರಾಯಣ ಕಟ್ಟಕೋಡಿ ಮತ್ತಿತರರು ಸಹಕರಿಸಿದರು.