×
Ad

ಸಜೀಪನಡು ಗ್ರಾಮೋತ್ಸವ ಪ್ರಯುಕ್ತ ಮಕ್ಕಳ, ಹಿಜಾಮ ಚಿಕಿತ್ಸೆ ಶಿಬಿರ

Update: 2016-08-07 18:11 IST

ಬಂಟ್ವಾಳ, ಆ. 7: ಸಜೀಪನಡು ಗ್ರಾಮ ಪಂಚಾಯತ್ ಸಾಧನೆಯ ಹಾದಿಯಲ್ಲಿ ಗ್ರಾಮೋತ್ಸವ-2016ರ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ, ಹಿಜಾಮ ಚಿಕಿತ್ಸೆ ಹಾಗೂ ಸ್ವಚ್ಛತಾ ಆಂದೋಲನ ಕಾರ್ಯಕ್ರಮ ರವಿವಾರ ಬೆಳಗ್ಗೆ ಪಂಚಾಯತ್ ಕಚೇರಿಯಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ಬಂದರಿನ ಶಾಫಿ ಕ್ಲಿನಿಕ್‌ನ ಯುನಾನಿ ವೈದ್ಯ ಡಾ. ಝಾಹಿದ್ ಹುಸೈನ್, ದೇಹದಲ್ಲಿ ಅಡಗಿರುವ ಕಲ್ಮಶ ರಕ್ತವನ್ನು ದೇಹದಿಂದ ಬೇರ್ಪಡಿಸಲು ಹಿಜಾಮ ಚಿಕಿತ್ಸೆಯು ಸಹಕಾರಿಯಾಗಿದ್ದು ವರ್ಷದಲ್ಲಿ ಒಂದು ಬಾರಿಯಾದರೂ ಈ ಚಿಕಿತ್ಸೆಯನ್ನು ಮಾಡುವುದರ ಮೂಲಕ ಆರೋಗ್ಯವಂತ ಬದುಕು ಸಾಗಿಸಬಹುದಾಗಿದೆ. ಹಿಜಾಮ ಚಿಕಿತ್ಸೆಗೆ ಸಾವಿರಾರು ವರ್ಷಗಳ ಇತಿಹಾಸವಿದ್ದು ಹೃದಯ ಕಾಯಿಲೆ ಸೇರಿದಂತೆ ಮೊದಲಾದ ರೋಗಗಳನ್ನು ಗುಣಪಡಿಸಬಹುದಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗ್ರಾಮ ಪಂಚಾಯತ್ ಅಧ್ಯಕ್ಷ ಸಜೀಪ ಮುಹಮ್ಮದ್ ನಾಸೀರ್, ಗ್ರಾಮವೊಂದು ಸಂಪೂರ್ಣ ಅಭಿವೃದ್ಧಿ ಹೊಂದಬೇಕಾದರೆ ಸ್ವಚ್ಛತೆ ಹಾಗೂ ಜನರ ಆರೋಗ್ಯ ಅತೀ ಮುಖ್ಯವಾಗಿದ್ದು ಈ ಹಿನ್ನೆಲೆಯಲ್ಲಿ ಗ್ರಾಮೋತ್ಸವದ ಪ್ರಯುಕ್ತ ಮಕ್ಕಳ ಉಚಿತ ವೈದ್ಯಕೀಯ ಶಿಬಿರ ಮತ್ತು ಸ್ವಚ್ಛತಾ ಅಂದೋಲನ ಹಮ್ಮಿಕೊಳ್ಳಲಾಗಿದೆ. ಎಲ್ಲಿ ಸ್ವಚ್ಛತೆ ಇರುವುದೋ ಅಲ್ಲಿ ಆರೋಗ್ಯವಿರುತ್ತದೆ ಎಂದ ಅವರು ಗ್ರಾಮದ ಅಭಿವೃದ್ಧಿಯಲ್ಲಿ ಜನಪ್ರತಿಗಳೊಂದಿಗೆ ಗ್ರಾಮಸ್ಥರ ಸಹಕಾರ ಅತ್ಯಗತ್ಯವಾಗಿದೆ ಎಂದರು.

ಸ್ವಚ್ಛತಾ ಅಂದೋಲನ ಪ್ರಯುಕ್ತ ಗ್ರಾಮದ ಯುವಕರು ಗ್ರಾಮದ ವಿವಿಧೆಡೆ ಗುಡಿಸಿ ಸ್ವಚ್ಛತೆ ನಡೆಸಿದರು. ಮಕ್ಕಳ ಉಚಿತ ವೈದ್ಯಕೀಯ ಶಿಬಿರ ಹಾಗೂ ಹಿಜಾಮ ಚಿಕಿತ್ಸೆಯ ಪ್ರಯೋಜನವನ್ನು ಗ್ರಾಮದ ಹಾಗೂ ಹೊರ ಗ್ರಾಮದ ಜನರು ಪಡೆದರು.

ದೇರಳಕಟ್ಟೆ ಯೇನೆಪೋಯ ಆಸ್ಪತ್ರೆಯ ಶಿಬಿರ ಮುಖ್ಯಸ್ಥ ಅಬ್ದುಲ್ ರಝಾಕ್ ಮಾತನಾಡಿ ಆಸ್ಪತ್ರೆಯಲ್ಲಿ ದೊರೆಯುವ ವಿವಿಧ ಸೌಲಭ್ಯಗಳ ಬಗ್ಗೆ ವಿವರಿಸಿದರು. ಸಜೀಪನಡು ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಹಾಜಿ ಅಬ್ದುಲ್ ರಝಾಕ್, ಪ್ರಧಾನ ಕಾರ್ಯದರ್ಶಿ ಎಸ್.ಕೆ.ಮುಹಮ್ಮದ್, ಸಜೀಪ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಎಸ್.ಎನ್.ಅಬ್ದುಲ್ ರಹಿಮಾನ್, ಯೇನೆಪೋಯ ಆಸ್ಪತ್ರೆಯ ವೈದ್ಯ ಡಾ. ನಿಯಾರ್, ಆಸ್ಪತ್ರೆಯ ವೈದ್ಯಕೀಯ ಕ್ಷೇತ್ರದ ಸಮಾಜ ಸೇವಕಿ ವೇದಾವತಿ, ಸಜೀಪನಡು ಮುಳ್ಳಿಂಜೆ ಸಮಾಜ ಸೇವಕ ಜೆರ್ರಿ ರಾಬರ್ಟ್ ಮೊರಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಪಂಚಾಯತ್ ಸಿಬ್ಬಂದಿ ಮುಝಮ್ಮಿಲ್ ಸ್ವಾಗತಿಸಿದರು. ಸಜೀಪನಡು ಸರಕಾರಿ ಶಾಲೆಯ ಅಧ್ಯಪಕ ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News