ಸಸಿಹಿತ್ಲು: ದೇವಸ್ಥಾನಕ್ಕೆ ನುಗ್ಗಿ ಕಳವಿಗೆ ವಿಫಲ ಯತ್ನ
ಮಂಗಳೂರು, ಆ. 7: ಇತಿಹಾಸ ಪ್ರಸಿದ್ಧ ಸಸಿಹಿತ್ಲು ಶ್ರೀಭಗವತೀ ದೇವಸ್ಥಾನಕ್ಕೆ ಇಂದು ನಸುಕಿನ ಜಾವ ನುಗ್ಗಿದ ಕಳ್ಳರು ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.
ಗೋಪುರದಿಂದ ಹಾರಿ ಒಳ ಬಂದು ಗರ್ಭಗುಡಿಯ ಮುಂದಿನ ಬಾಗಿಲಿನಿಂದ ನುಸುಳಿ ಒಳ ಪ್ರವೇಶಿಸಿದ ಕಳ್ಳರು ಗರ್ಭಗುಡಿಯ ಮುಖ್ಯ ಬಾಗಿಲನ್ನು ತೆರೆಯುವ ಸಂದರ್ಭದಲ್ಲಿ ಭಯಗೊಂಡಂತೆ ಕಂಡು ಬಂದಿದ್ದು, ಬಳಿಕ ಕಳ್ಳರು ತನ್ನ ಪ್ರಯತ್ನವನ್ನು ಕೈ ಬಿಟ್ಟು ಹಿಂದಿರುಗಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ದಾಖಲಾಗಿದೆ.
ದೇವಸ್ಥಾನ ಪ್ರವೇಶಿಸಿದ ಕಳ್ಳರು ಗರ್ಭಗುಡಿಯ ಸಮೀಪದವರೆಗೆ ಸಾಗಿದ್ದಾದರೂ ಅಲ್ಲಿಂದ ಕಾಣಿಕೆ ಡಬ್ಬ ಸಹಿತ ಯಾವುದೇ ವಸ್ತುಗಳನ್ನು ಮುಟ್ಟದೆ ಹಿಂದಿರುಗಿ ಹೋಗಿರುವುದು ಕ್ಯಾಮರಾದಲ್ಲಿ ದಾಖಲಾಗಿದೆ ಎಂದು ಹೇಳಲಾಗಿದೆ.
ನಸುಕಿನ ಜಾವ ಒಂದು ಗಂಟೆ ಒಂಭತ್ತು ನಿಮಿಷಕ್ಕೆ ದೇವಸ್ಥಾನದ ಉತ್ತರ ಭಾಗದ ಬಾಗಿಲಿನ ಸಮೀಪ ಕಳ್ಳನೋರ್ವ ಗೋಪುರ ಮೇಲಕ್ಕೆ ಹತ್ತಿ ಅಲ್ಲಿಂದ ದೇವಸ್ಥಾನದ ಪ್ರಾಂಗಣದೊಳಗೆ ಜಿಗಿದು, ಉತ್ತರ ಬದಿಯ ಬಾಗಿಲನ್ನು ತೆರೆದು ಮತ್ತೊರ್ವ ತನ್ನ ಸಹಚರನನ್ನು ಒಳ ಬರುವಂತೆ ಮಾಡಿದ್ದಾನೆ. ಇಬ್ಬರೂ ರೈನ್‌ಕೋಟ್ ಧರಿಸಿದ್ದರು. ಒಳ ಬಂದ ಬಳಿಕ ನೇರವಾಗಿ ಮುಖ್ಯ ದ್ವಾರದ ಬಳಿ ಅಳವಡಿಸಿದ್ದ ಸಿಸಿ ಕ್ಯಾಮರಾದ ವಯರನ್ನು ತುಂಡರಿಸಿದ್ದಾರೆ. ತೀರ್ಥ ಮಂಟಪದ ಬಳಿ ಇದ್ದ ಸಿಸಿ ಕ್ಯಾಮರಾದ ವಯರ್ ತುಂಡರಿಸಿ, ಯಾವುದೋ ಆಯುಧ ಬಳಸಿ ಗರ್ಭಗುಡಿಯ ಮುಂದಿನ ಬಾಗಿಲನ್ನು ತೆರೆಯುವ ಯತ್ನ ನಡೆಸಿದ್ದಾರೆ. ಬೀಗ ತೆರೆದುಕೊಂಡಿತ್ತಾದರೂ ಸಂಕಲೆಯನ್ನು ತೆಗೆಯಲು ಸಾಧ್ಯವಾಗದ ಕಾರಣ ಓರ್ವ ಕಳ್ಳ ತೆರೆದ ಬಾಗಿಲ ಮೂಲಕ ಒಳ ನುಸುಳಿದ್ದಾನೆ. ದೇವಸ್ಥಾನದ ಗುಡಿಯ ಒಳ ಭಾಗದಲ್ಲೂ ಸಿಸಿ ಕ್ಯಾಮರಾ ಇರುವುದನ್ನು ಗಮನಿಸಿ ಅದಕ್ಕೆ ತನ್ನಲ್ಲಿದ್ದ ಟಾರ್ಚ್ ಲೈಟ್ ಹಾಕುತ್ತಲೆ ಗರ್ಭಗುಡಿಯ ಮುಖ್ಯ ಬಾಗಿಲು ತೆರೆಯಲು ಯತ್ನಿಸಿದ್ದಾನೆ. ಅನಂತರ ಭಯಗೊಂಡಂತೆ ಕಂಡ ಆತ ಹಿಂದಿರುಗಿ ಬಾಗಿಲ ಮೂಲಕ ನುಸುಳಿ ಹೊರ ಬಂದು ಉತ್ತರ ಭಾಗದ ಗೋಪುರ ಬಾಗಿಲ ಮೂಲಕ ಹೊರ ಹೋಗಿದ್ದಾನೆ. ಇವೆಲ್ಲಾ ದೃಶ್ಯ ಒಳಭಾಗದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ ಎಂದು ಹೇಳಲಾಗಿದೆ.
ದೇವಸ್ಥಾನದ ಗರ್ಭಗುಡಿಯಲ್ಲಿ ದೇವರ ನಿತ್ಯ ಅಲಂಕಾರದ ಬಂಗಾರ ಮತ್ತು ಯಕ್ಷಗಾನ ಮೇಳದ ಆಭರಣಗಳಿದ್ದವು. ಅಲ್ಲದೆ ಹೊರ ಭಾಗದಲ್ಲಿ ಮೂರು ಕಾಣಿಕೆ ಡಬ್ಬಿ ಇದ್ದು ಯಾವುದನ್ನೂ ಮುಟ್ಟಿಲ್ಲ. ನಿತ್ಯ ಪೂಜೆಗಾಗಿ ಅರ್ಚಕರು ದೇವಸ್ಥಾನಕ್ಕೆ ಬಂದಾಗ ಕಳ್ಳರು ದೇವಸ್ಥಾನಕ್ಕೆ ನುಗ್ಗಿದ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸುರತ್ಕಲ್ ಪೊಲೀಸರಿಗೆ ದೂರು ನೀಡಲಾಗಿದ್ದು, ಪೊಲೀಸರು, ಬೆರಳಚ್ಚು ತಜ್ಞರು, ಶ್ವಾನದಳ ಸ್ಥಳಕ್ಕೆ ಆಗಮಿಸಿ, ಘಟನೆಯ ಬಗ್ಗೆ ಮಾಹಿತಿ ಪಡೆದಿದೆ. ಡಿಸಿಪಿ ಡಾ.ಸಂಜೀವ್ ಎಂ. ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಹಿಂದೆಯೂ ದೇವಸ್ಥಾನಕ್ಕೆ ಕಳ್ಳರು ನುಗ್ಗುವ ಪ್ರಯತ್ನ ನಡೆಸಿದ್ದು, ಯಾವ ವಸ್ತುವನ್ನೂ ಕಳವು ಮಾಡದೆ ಹಿಂದಿರುಗಿದ್ದರು ಎಂದು ಹೇಳಲಾಗಿದೆ.