×
Ad

ಉಪ್ಪಿನಂಗಡಿ: ದರೋಡೆಕೋರರ ಸೆರೆ: ಬೈಕ್ ಸವಾರನ ದರೋಡೆ

Update: 2016-08-07 23:41 IST


ಉಪ್ಪಿನಂಗಡಿ, ಆ.7: ಕಾರಿನಲ್ಲಿ ಬಂದು ಬೈಕ್ ಸವಾರನನ್ನು ದರೋಡೆಗೈದು ಪರಾರಿಯಾಗಲೆತ್ನಿಸುತ್ತಿದ್ದ ತಂಡವನ್ನು ಗೋಳಿತೊಟ್ಟು ಸಮೀಪದ ಕೋಲ್ಪೆ ಎಂಬಲ್ಲಿ ಯುವಕರು ಅಡ್ಡಗಟ್ಟಿ ಹಿಡಿದ ಘಟನೆ ಶನಿವಾರ ರಾತ್ರಿ ನಡೆದಿದೆ.
 ಬೆಂಗಳೂರಿನ ಸುಂಕದಕಟ್ಟೆ ನಿವಾಸಿಗಳಾದ ಪ್ರದೀಪ್ (20), ಗೌತಮ್(19), ಪೀಣ್ಯದ ನಾಗೇಶ್ (26), ಶಿವರಾಮ್ (27), ಸುಂಕದಕಟ್ಟೆಯ ದಿನೇಶ್ (24) ಹಾಗೂ ಸಂಜುಕುಮಾರ್ (22) ಸೆರೆ ಸಿಕ್ಕ ದರೋಡೆಕೋರರು.
 *ಪ್ರಕರಣದ ವಿವರ: ಉಪ್ಪಿನಂಗಡಿಯ ದಾವೂದ್ ಕಾಂಪ್ಲೆಕ್ಸ್‌ನಲ್ಲಿರುವ ಎಚ್.ಎಂ. ಸ್ವೀಟ್ಸ್ ಬೇಕರಿಯ ಮಾಲಕ ಅಬ್ದುಲ್ ಕರೀಂ ಎಂಬವರು ಶನಿವಾರ ರಾತ್ರಿ 9:30ಕ್ಕೆ ಬೆದ್ರೋಡಿಯಲ್ಲಿರುವ ತನ್ನ ಮನೆಗೆ ಬೈಕ್‌ನಲ್ಲಿ ತೆರಳುತ್ತಿದ್ದಾಗ ಉಪ್ಪಿನಂಗಡಿ ಕಡೆಯಿಂದ ಬೈಕನ್ನು ಹಿಂಬಾಲಿಸಿಕೊಂಡು ಬಂದ ಬಿಳಿ ಬಣ್ಣದ ಟೊಯೋಟಾ ಕಾರು ಪಂಜಳ ಎಂಬಲ್ಲಿ ಬೈಕ್‌ಗೆ ಢಿಕ್ಕಿ ಹೊಡೆಯಲು ಯತ್ನಿಸಿತು. ಅಪಾಯದ ಮುನ್ಸೂಚನೆ ಅರಿತ ಅಬ್ದುಲ್ ಕರೀಂ ತಕ್ಷಣ ಬೈಕನ್ನು ಅಲ್ಲೇ ನಿಲ್ಲಿಸಿ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರು. ಅಷ್ಟರಲ್ಲಿ ಕಾರಿನಿಂದ ಇಳಿದ ನಾಲ್ಕು ಮಂದಿ ಅಬ್ದುಲ್ ಕರೀಮ್‌ನನ್ನು ಹಿಡಿದು ಹಲ್ಲೆ ನಡೆಸಿ, ಹಣಕ್ಕಾಗಿ ಪೀಡಿಸಿದ್ದಾರೆ. ಆದರೂ ದರೋಡೆಕೋರರಿಂದ ತಪ್ಪಿಸಿಕೊಂಡ ಅಬ್ದುಲ್ ಕರೀಂ ಹೆದ್ದಾರಿ ಬದಿಯಲ್ಲಿರುವ ಪಂಜಳದ ಇಲ್ಯಾಸ್ ಎಂಬವರ ಮನೆಗೆ ಓಡಿದರು. ದರೋಡೆಕೋರರು ಇವರನ್ನು ಹಿಂಬಾಲಿಸಿದರೂ ಮನೆಯೊಂದರ ಕಡೆ ಹೋಗುತ್ತಿರುವುದನ್ನು ಕಂಡು ವಾಪಸ್ ಆಗಿತ್ತು. ಇತ್ತ ಅಬ್ದುಲ್ ಕರೀಂ ಘಟನೆಯನ್ನು ಇಲ್ಯಾಸ್‌ರ ಮನೆಯವರಿಗೆ ತಿಳಿಸಿ ಇತರ ಕೆಲ ಯುವಕರೊಂದಿಗೆ ಹೆದ್ದಾರಿಗೆ ಬಂದು ಹುಡುಕಾಟ ನಡೆಸಿದರು. ಆದರೆ ದರೋಡೆಕೋರರು ಅಬ್ದುಲ್ ಕರೀಂರ ಬೈಕ್‌ನ ಪೆಟ್ರೋಲ್ ಟ್ಯಾಂಕ್ ಬ್ಯಾಗ್‌ನಲ್ಲಿದ್ದ 20 ಸಾವಿರ ರೂ., ಹೆಲ್ಮೆಟ್, ಬೈಕಿನ ಕೀ ಸೇರಿದಂತೆ ಬೈಕ್‌ನಲ್ಲಿದ್ದ ದಿನಸಿ ಸಾಮಗ್ರಿಗಳನ್ನು ದೋಚಿದ್ದರು. ತಕ್ಷಣ ಅವರು ಈ ಮಾಹಿತಿಯನ್ನು ನೆಲ್ಯಾಡಿ ಪರಿಸರದ ತನ್ನ ಸ್ನೇಹಿತರಿಗೆ ಹಾಗೂ ಪೊಲೀಸರಿಗೆ ನೀಡಿದರು.
 ಅದರಂತೆ ಕಾರ್ಯಪ್ರವೃತ್ತರಾದ ಯುವಕರ ಗುಂಪು ಕೋಲ್ಪೆಬಳಿ ಹೆದ್ದಾರಿಗೆ ಅಡ್ಡವಾಗಿ ಲಾರಿಯೊಂದನ್ನು ನಿಲ್ಲಿಸಿ ಉಪ್ಪಿನಂಗಡಿ ಕಡೆಯಿಂದ ಬರುತ್ತಿದ್ದ ವಾಹನಗಳ ತಪಾಸಣೆ ಕೈಗೊಂಡರು. ಹಾಗೇ ಕೋಲ್ಪೆಯ ಯುವಕರಿಗೆ ಬಿಳಿ ಬಣ್ಣದ ಟೊಯೋಟಾ ಕಾರು ಬರುತ್ತಿರುವುದು ಕಂಡು ಬಂತು. ಕಾರಿನಲ್ಲಿದ್ದ ದರೋಡೆಕೋರರಿಗೆ ಅಪಾಯದ ಅರಿವಾಯಿತು. ಅಷ್ಟರಲ್ಲಿ ಮೂವರು ಕಾರಿನಿಂದ ಜಿಗಿದು ಪರಾರಿಯಾದರೆ ಮೂವರು ಯುವಕರ ಕೈಗೆ ಸಿಕ್ಕಿ ಬಿದ್ದರು.
ಬಳಿಕ ಈ ದರೋಡೆಕೋರರನ್ನು ನೆಲ್ಯಾಡಿ ಹೊರಠಾಣಾ ಪೊಲೀಸರಿಗೊಪ್ಪಿಸಲಾಯಿತು.

ಪೊಲೀಸರ ಕಾರ್ಯಾಚರಣೆ: ಈ ಬಗ್ಗೆ ಮಾಹಿತಿ ಪಡೆದ ಉಪ್ಪಿನಂಗಡಿ ಎಸ್ಸೈ ತಿಮ್ಮಪ್ಪನಾಯ್ಕ ನೇತೃತ್ವದ ಪೊಲೀಸರ ತಂಡ ಪರಾರಿಯಾಗಿರುವ ಮೂವರು ದರೋಡೆಕೋರರನ್ನು ಹಿಡಿಯಲು ಕಾರ್ಯಯೋಜನೆ ರೂಪಿಸಿದರು. ಕಾಡಿನೊಳಗೆ ಓಡಿದ ದರೋಡೆಕೋರರಲ್ಲಿ ಓರ್ವನನ್ನು ತಡರಾತ್ರಿ ಪೊಲೀಸರು ಬೆನ್ನಟ್ಟಿ ಹಿಡಿದರಾದರೂ, ಉಳಿದಿಬ್ಬರನ್ನು ರವಿವಾರ ನಸುಕಿನ ಜಾವ ಹಿಡಿಯುವಲ್ಲಿ ಯಶಸ್ವಿಯಾದರು. ಒಟ್ಟಿನಲ್ಲಿ ದರೋಡೆ ಕೃತ್ಯದಲ್ಲಿ ಭಾಗಿಯಾದ ಆರು ಮಂದಿ ದರೋಡೆಕೋರರನ್ನು ಉಪ್ಪಿನಂಗಡಿ ಪೊಲೀಸರು ನಾಗರಿಕರ ಸಹಾಯದಿಂದ ಶೀಘ್ರಗತಿಯಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದರೋಡೆಕೋರರ ಕಾರಿನಲ್ಲಿ ಮದ್ಯ ತುಂಬಿದ ಬಾಟ್ಲಿಗಳು, ಮಾರಕಾಯುಧಗಳು ಪತ್ತೆಯಾಗಿವೆ. ಇವರದ್ದು ದರೋಡೆಗೈಯುವ ವೃತ್ತಿಪರ ತಂಡವಾಗಿದ್ದು, ಇವರ ಮೇಲೆ ಈಗಾಗಲೇ ಹಲವಾರು ಅಪರಾಧ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾದ ಬಗ್ಗೆ ಮಾಹಿತಿ ಲಭಿಸಿದೆ. ದರೋಡೆಕೋರರು ಬಳಸಿದ್ದ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಬಂಧಿತರನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.

‘ರಂಗಚಟುವಟಿಕೆಗಳಿಂದ ರಾಷ್ಟ್ರೀಯತೆ ಬೆಳೆಯಲು ಸಾಧ್ಯ’
ಉಡುಪಿ, ಆ.7: ರಂಗ ಚಟುವಟಿಕೆಗಳ ಮೂಲಕ ಮಕ್ಕಳಲ್ಲಿ ರಾಷ್ಟ್ರೀಯತೆಯನ್ನು ಬೆಳೆಸಲು ಸಾಧ್ಯವಿದೆ. ರಂಗಭೂಮಿ ಸತ್ಯವನ್ನು ಸತ್ಯದೊಂದಿಗೆ ಮುಖಾಮುಖಿಯಾಗಿಸಿ ಸತ್ಯದರ್ಶನ ಮಾಡುತ್ತದೆ ಎಂದು ಹಿರಿಯ ರಂಗ ನಿರ್ದೇಶಕ ಉದ್ಯಾವರ ನಾಗೇಶ್ ಕುಮಾರ್ ಹೇಳಿದ್ದಾರೆ.

ಕಟಪಾಡಿ ಎಸ್‌ವಿಎಸ್ ಪದವಿ ಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಪ್ರೌಢಶಾಲಾ ವಿಭಾಗದ ಬಾಲರಂಗ ಮಕ್ಕಳ ರಂಗ ಶಾಲೆಯ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.


ಈ ಶೈಕ್ಷಣಿಕ ವರ್ಷದಲ್ಲಿ ‘ಹುತಾತ್ಮ ಭಗತ್ ಸಿಂಗ್’ ಮತ್ತು ‘ಧರಣಿ ಮಂಡಲ ಮಧ್ಯದೊಳಗೆ’ ಎಂಬ ಎರಡು ನಾಟಕಗಳ ತರಬೇತಿ ಮತ್ತು ಪ್ರದರ್ಶನ ನಡೆಯಲಿದೆ ಎಂದು ನಿರ್ದೇಶಕ ಸಂತೋಷ್ ನಾಯಕ್ ಪಟ್ಲ ತಿಳಿಸಿದ್ದಾರೆ. ಶಾಲಾ ಸಂಚಾಲಕ ವಸಂತ ಮಾಧವ ಭಟ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಪ್ರಕಾಶ್ ಸುವರ್ಣ ಕಟಪಾಡಿ, ಮುಖ್ಯ ಶಿಕ್ಷಕ ಶೇಖರ್ ಅಂಚನ್ ಭಾಗವಹಿಸಿದ್ದರು. ವಿದ್ಯಾರ್ಥಿ ಕಾರ್ಯದರ್ಶಿ ಎನ್ಸಿಯಾ ಅಲ್ವಿಟಾ ವಂದಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News