×
Ad

ಹಿಲರಿಗೆ ಶೇ.8ರಷ್ಟು ಮುನ್ನಡೆ

Update: 2016-08-07 23:44 IST

ಟ್ರಂಪ್‌ಗೆ ತಿರುಗುಬಾಣವಾದ ವಿವಾದಾತ್ಮಕ ಹೇಳಿಕೆಗಳು; ಉಭಯ ಅಭ್ಯರ್ಥಿಗಳ ಬಗೆಗೂ ಮತದಾರರಲ್ಲಿ ಅತೃಪ್ತಿ

ವಾಶಿಂಗ್ಟನ್,ಆ.7: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾದ ಹಿಲರಿ ಕ್ಲಿಂಟನ್ ತನ್ನ ರಿಪಬ್ಲಿಕನ್ ಎದುರಾಳಿ ಡೊನಾಲ್ಡ್ ಟ್ರಂಪ್ ಅವರಿಗಿಂತ ಶೇ.8ರಷ್ಟು ಗಣನೀಯ ಮುನ್ನಡೆ ಸಾಧಿಸಿದ್ದಾರೆಂದು, ವಾಶಿಂಗ್ಟನ್‌ಪೋಸ್ಟ್-ಎಬಿಸಿ ನ್ಯೂಸ್ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆಯೊಂದು ರವಿವಾರ ಬಹಿರಂಗಪಡಿಸಿದೆ.

ನೋಂದಾಯಿತ ಮತದಾರರ ಪೈಕಿ ಶೇ.50ರಷ್ಟು ಮಂದಿ ಹಿಲರಿಯವರನ್ನು ಬೆಂಬಲಿಸಿದರೆ, ಶೇ.42ರಷ್ಟು ಮಂದಿ ಟ್ರಂಪ್ ಪರವಾಗಿದ್ದಾರೆಂದು ಸಮೀಕ್ಷೆಯು ತಿಳಿಸಿದೆ. ಆಗಸ್ಟ್ 1ರಿಂದ 4ರ ನಡುವೆ ದೂರವಾಣಿ ಮೂಲಕ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಿಲರಿ ಕ್ಲಿಂಟನ್ ಡೆಮಾಕ್ರಾಟಿಕ್ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾದಾಗಿನಿಂದ ಅವರ ಜನಪ್ರಿಯತೆಯಲ್ಲಿ ನಿರಂತರವಾದ ಏರಿಕೆ ಕಂಡುಬಂದಿದೆ. ಡೆಮಾಕ್ರಾಟಿಕ್ ಪಕ್ಷದಲ್ಲಿನ ಏಕತೆ ಹಾಗೂ ರಿಪಬ್ಲಿಕನ್ ಪಕ್ಷದಲ್ಲಿನ ಭಿನ್ನಮತ ಹಿಲರಿಗೆ ವರದಾನವಾಗಿದೆ. ಅದೇ ವೇಳೆ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗಳು ಕೂಡಾ ಹಿಲರಿಯ ಬಗ್ಗೆ ಮತದಾರರ ಒಲವು ಹೆಚ್ಚಾಗಲು ಕಾರಣವಾಗಿದೆ.

ಸಂಭವನೀಯ ಮತದಾರ ವರ್ಗದಲ್ಲಿ ಕ್ಲಿಂಟನ್ ಶೇ. 51ರಷ್ಟು ಮುನ್ನಡೆ ಪಡೆದಿದ್ದರೆ, ಟ್ರಂಪ್ ಶೇ.44 ಮತದಾರರ ಬೆಂಬಲದೊಂದಿಗೆ ಹಿನ್ನಡೆ ಸಾಧಿಸಿದ್ದಾರೆ. ಈ ಸಲದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಲಿಬರಟೇರಿಯನ್ ಪಕ್ಷದ ಅಭ್ಯರ್ಥಿ ಗ್ಯಾರಿ ಜಾನ್ಸನ್ ಹಾಗೂ ಜಿಲ್ ಸ್ಟೀನ್ ಕೂಡಾ ಕಣದಲ್ಲಿದ್ದಾರೆ. ಈ ನಾಲ್ವರು ಅಭ್ಯರ್ಥಿಗಳನ್ನು ಒಳಗೊಂಡ ಸಮೀಕ್ಷೆಯಲ್ಲಿ ಹಿಲರಿಗೆ ಶೇ.45, ಟ್ರಂಪ್‌ಗೆ ಶೇ.37, ಜಾನ್ಸನ್‌ಗೆ ಶೇ.8 ಹಾಗೂ ಸ್ಟೀನ್‌ಗೆ ಶೇ.4 ಮತದಾರರ ಬೆಂಬಲ ದೊರೆತಿದೆ.

ಜುಲೈ 25ರಿಂದ 28ರವರೆಗೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿ ನಡೆದ ಡೆಮಾಕ್ರಾಟಿಕ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಹಿಲರಿ ಕ್ಲಿಂಟನ್ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಯಾಗಿ ಘೋಷಿಸಲ್ಪಟ್ಟಿದ್ದರು. ಉಪಾಧ್ಯಕ್ಷ ಅಭ್ಯರ್ಥಿಯಾಗಿ ಸೆನೆಟರ್ ಟಿಮ್ ಕೆನ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಟ್ರಂಪ್ ಹಾಗೂ ಅವರ ಉಪಾಧ್ಯಕ್ಷೀಯ ಅಭ್ಯರ್ಥಿ ಮೈಕ್ ಪೆನ್ಸ್ ಅವರನ್ನು ಜುಲೈ 18-21ರವರೆಗೆ ನಡೆದ ರಿಪಬ್ಲಿಕನ್ ಪಕ್ಷದ ಸಮಾವೇಶದಲ್ಲಿ ನಾಮಕರಣಗೊಳಿಸಲಾಗಿತ್ತು. ಹಿಲರಿ ಕ್ಲಿಂಟನ್ ವಿದೇಶಾಂಗ ಕಾರ್ಯದರ್ಶಿ ಯಾಗಿದ್ದಾಗ ಅವರ ಖಾಸಗಿ ಸರ್ವರ್‌ನಿಂದ ನಾಪತ್ತೆಯಾದ ಇಮೇಲ್‌ಗಳನ್ನು ಸೋರಿಕೆ ಮಾಡುವಂತೆ ಟ್ರಂಪ್ ರಶ್ಯವನ್ನು ಆಗ್ರಹಿಸಿದ್ದುದು, ಭಾರೀ ವಿವಾದಕ್ಕೆ ಗ್ರಾಸವಾಗಿತ್ತು. ಇದಾದ ಬಳಿಕ ಟ್ರಂಪ್ ಜನಪ್ರಿಯತೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿತ್ತು. ಇರಾಕ್ ಯುದ್ಧದಲ್ಲಿ ಸಾವಿಗೀಡಾದ ಅಮೆರಿಕನ್ ಮುಸ್ಲಿಂ ಯೋಧನ ಕುಟುಂಬವನ್ನು ಟ್ರಂಪ್ ನಿಂಧಿಸಿದ್ದುದು, ರಾಷ್ಟ್ರಾದ್ಯಂತ ವ್ಯಾಪಕ ಆಕ್ರೋಶವನ್ನು ಸೃಷ್ಟಿಸಿತ್ತು.

ಆದಾಗ್ಯೂ ಈ ಇಬ್ಬರೂ ಅಭ್ಯರ್ಥಿಗಳ ಬಗ್ಗೆ ಮತದಾರರ ಸಂತೃಪ್ತಿಯ ಪ್ರಮಾಣವು ಅತ್ಯಂತ ಕೆಳಮಟ್ಟದಲ್ಲಿರುವುದು ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ಕ್ಲಿಂಟನ್ ಹಾಗೂ ಟ್ರಂಪ್ ಅವರು ಅಭ್ಯರ್ಥಿಗಳಾಗಿರುವ ಬಗ್ಗೆ ತಮಗೆ ಅಸಮಾಧಾನವಿರುವುದಾಗಿ ಶೇ.6ರಿಂದ 10ರಷ್ಟು ನೋಂದಾಯಿತ ಮತದಾರರು ಸಮೀಕ್ಷೆಯಲ್ಲಿ ಹೇಳಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News