ಡಾನ್ಸ್ ರೊಬೊಟ್ ಡಾನ್ಸ್
ಬೀಜಿಂಗ್, ಆ.7: ಬರೋಬ್ಬರಿ 1007 ರೊಬೊಟ್‌ಗಳು ಒಂದೇ ಸ್ಥಳದಲ್ಲಿ ಸಾಮೂಹಿಕವಾಗಿ ನರ್ತಿಸುವ ಮೂಲಕ ಚೀನಾದಲ್ಲಿ ಹೊಸ ಗಿನ್ನೆಸ್ ದಾಖಲೆ ಸೃಷ್ಟಿಯಾಗಿದೆ. ತಲಾ 43.8 ಸೆಂ.ಮೀ. ಎತ್ತರದ ಈ ಡ್ಯಾನ್ಸಿಂಗ್ ರೊಬೊಟ್‌ಗಳು ಕ್ವಿಂಗ್‌ಡಾವೊನಲ್ಲಿ ರವಿವಾರ ನಡೆದ ಬಿಯರ್ ಉತ್ಸವದಲ್ಲಿ ಸಾಮೂಹಿಕವಾಗಿ ನರ್ತಿಸಿದವು. ಕೇವಲ ಒಂದು ಮೊಬೈಲ್ ಫೋನ್‌ಗಳ ಮೂಲಕ ಈ ರೊಬೊಟ್‌ಗಳನ್ನು ಸಂಪೂರ್ಣವಾಗಿ ನಿಯಂತ್ರಿಸಲಾಗಿತ್ತು.ಈ ರೊಬೊಟ್‌ಗಳು ಸರಿಯಾಗಿ ಒಂದು ನಿಮಿಷಗಳ ಕಾಲ ಕರಾರುವಕ್ಕಾಗಿ ನರ್ತಿಸಿದವು ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ಸಾಮೂಹಿಕ ನೃತ್ಯದಲ್ಲಿ ಪಾಲ್ಗೊಂಡಿದ್ದ ಕೆಲವು ರೊಬೊಟ್‌ಗಳಿಗೆ ನರ್ತಿಸಲು ಸಾಧ್ಯವಾಗದಿದ್ದರೆ, ಇನ್ನು ಕೆಲವು ಸ್ಥಳದಲ್ಲೇ ಬಿದ್ದುಬಿಟ್ಟವು. ಅವುಗಳನ್ನು ಸ್ಪರ್ಧೆಯಿಂದ ಅನರ್ಹಗೊಳಿಸಲಾಯಿತು. ಆದರೆ ಬಹುತೇಕ ರೊಬೊಟ್‌ಗಳು, ಲಯಬದ್ಧವಾಗಿ ನರ್ತಿಸಿದವು ಎಂದು ಮೂಲಗಳು ತಿಳಿಸಿವೆ. ಕ್ವಿಂಗ್‌ಡಾವೊ ಮೂಲದ ‘ಎವರ್ ವಿನ್’ ಕಂಪೆನಿಯು ಈ ಪ್ರದರ್ಶನವನ್ನು ಆಯೋಜಿಸಿತ್ತು. ಚೀನಾದ ಯುಬಿಟೆಕ್ ರಾಬೊಟಿಕ್ ಕಾರ್ಪೊರೇಶನ್ ಸಂಸ್ಥೆಯು ಈ ವರ್ಷದ ಆರಂಭದಲ್ಲಿ 540 ರೊಬೊಟ್‌ಗಳ ನರ್ತನವನ್ನು ಆಯೋಜಿಸಿ, ಹೊಸ ದಾಖಲೆಯನ್ನು ಸೃಷ್ಟಿಸಿತ್ತು. ಆದರೆ, ಕ್ವಿಂಗ್‌ಡಾವೊದಲ್ಲಿ ಅದಕ್ಕಿಂತ ಎರಡು ಪಟ್ಟು ಹೆಚ್ಚು ರೊಬೊಟ್‌ಗಳು ಸಾಮೂಹಿವಾಗಿ ನರ್ತಿಸಿ, ಹಿಂದಿನ ದಾಖಲೆಯನ್ನು ಮುರಿದುಹಾಕುವಲ್ಲಿ ಯಶಸ್ವಿಯಾಗಿದೆ.