ಕೇರಳ: ‘ರಾಜ್ಯ ಫಲವಸ್ತು’ವಾಗಿ ಹಲಸು: ಆ.17ರಂದು ಘೋಷಿಸುವ ಸಾಧ್ಯತೆ

Update: 2016-08-07 18:18 GMT

ಕಾಸರಗೋಡು, ಆ.7: ಹಲಸನ್ನು ರಾಜ್ಯದ ಫಲವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಕೇರಳ ಸರಕಾರ ಮುಂದಾಗುತ್ತಿದೆ. ಕೃಷಿಕರ ದಿನವಾದ ಆ.17ರಂದು ಅಧಿಕೃತ ಘೋಷಣೆ ಹೊರಬೀಳುವ ಸಾಧ್ಯತೆ ಇದೆ. ಹಲಸನ್ನು ಫಲವಸ್ತುವನ್ನಾಗಿ ಘೋಷಿಸುವ ಮೊದಲ ರಾಜ್ಯ ಎಂಬ ಹೆಗ್ಗಳಿಕೆಯನ್ನು ಕೇರಳ ರಾಜ್ಯ ಪಡೆಯಲಿದೆ.

 ಮೌಲ್ಯವರ್ಧಿತ ಉತ್ಪನ್ನವಾದ ಹಲಸು ಕ್ಯಾನ್ಸರ್ ರೋಗ ತಡೆಗೂ ಸಹಕಾರಿ ಎನ್ನಲಾಗಿದೆ. ಅಲ್ಲದೆ, ಹಲವಾರು ಔಷಧೀಯ ಗುಣಗಳನ್ನು ಹಲಸು ಹೊಂದಿದೆ ಎಂಬುದು ಅಧ್ಯಯನದಿಂದ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಹಲಸನ್ನು ರಾಜ್ಯದ ಫಲವಸ್ತುವನ್ನಾಗಿ ಘೋಷಿಸುವ ನಿಟ್ಟಿನಲ್ಲಿ ಸರಕಾರ ಹೆಜ್ಜೆ ಇರಿಸಿದೆ. ವಿದೇಶದಲ್ಲಿ ಹಲಸಿಗೆ ಉತ್ತಮ ಬೇಡಿಕೆಯಿದ್ದು, ಒಂದು ಸಮೀಕ್ಷೆಯಂತೆ ರಾಜ್ಯದಲ್ಲಿ ಕೋಟ್ಯಂತರ ರೂ. ವೌಲ್ಯದ ಹಲಸು ಕೊಳೆತು ಹೋಗುತ್ತಿದೆ ಎನ್ನಲಾಗಿದೆ.
 

ಯಾವುದೇ ರೀತಿಯ ಕೀಟನಾಶಕ, ಗೊಬ್ಬರಗಳ ಬಳಕೆಯಿಲ್ಲದೆ ಲಭಿಸುವ ಹಲಸು ಔಷಧ ಗುಣ ಹೊಂದಿದೆ ಎಂಬ ಬಗ್ಗೆ ಯುವಜನತೆಗೆ ತಿಳುವಳಿಕೆ ಮೂಡಿಸಬೇಕಿದೆ. ಎಪ್ರಿಲ್ ತಿಂಗಳಿನಿಂದ ಜುಲೈ ಅಥವಾ ಆಗಸ್ಟ್ ತಿಂಗಳವರೆಗೆ ಸಿಗುವ ಹಲಸು ವಿಳಂಬವಾಗಿ ಕಾಯಿ ಬಿಟ್ಟಿದ್ದ ಮರಗಳಲ್ಲಿ ಮಾತ್ರ ಸೆಪ್ಟಂಬರ್ ತಿಂಗಳಿನವರೆಗೆ ಇರುತ್ತದೆ. ನಂತರ ತಿನ್ನಬೇಕೆಂದರೆ ಮುಂದಿನ ವರ್ಷ ಎಪ್ರಿಲ್‌ವರೆಗೂ ಕಾಯಬೇಕು.

ಮಳೆ ಬಿದ್ದ ಮೇಲೆ ಹಲಸಿನ ಹಣ್ಣನ್ನು ತಿಂದರೆ ಕಾಯಿಲೆ ಬರಬಹುದು ಎಂಬ ಭಯ ಅನೇಕರಲ್ಲಿದೆ. ಆದರೆ ಈ ಹಣ್ಣು ಕಾಯಿಲೆ ಹೋಗಲಾಡಿಸಲು ಸಹಕಾರಿಯಾಗಿದ್ದು, ಹತ್ತಕ್ಕೂ ಅಧಿಕ ರೋಗ ನಿರೋಧಕ ಶಕ್ತಿಯನ್ನು ಹೊಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News