×
Ad

ಬಾಲಿವುಡ್‌ನಲ್ಲಿ ಸಂಚಲನ ಸೃಷ್ಟಿಸಲಿದೆ... ಸಾರಾಘರ್‌ಹಿ

Update: 2016-08-08 12:05 IST

ಸರಬ್‌ಜಿತ್ ಚಿತ್ರದಲ್ಲಿ ಸಣಕಲು ದೇಹದೊಂದಿಗೆ ಪಾತ್ರಕ್ಕೆ ಅತ್ಯಂತ ನೈಜವಾಗಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳನ್ನು ಸ್ತಂಭೀಭೂತಗೊಳಿಸಿದ್ದ ಬಾಲಿವುಡ್‌ನ ಪ್ರತಿಭಾವಂತ ನಟ ರಣದೀಪ್ ಹೂಡಾ, ಇದೀಗ ಇನ್ನೊಂದು ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲು ಸಿದ್ಧರಾಗುತ್ತಿದ್ದಾರೆ.

  ಸ್ವಾತಂತ್ರ ಸಂಗ್ರಾಮ ಕಾಲದ ಸಾರಾಘರ್‌ಹಿ ಯುದ್ಧದ ಕತೆ ಹೇಳುವ ಪೀರಿಯಡ್ ಚಿತ್ರದ ನಾಯಕ ಪಾತ್ರಕ್ಕೆ ಹೂಡಾರನ್ನು ನಿರ್ದೇಶಕ ರಾಜ್‌ಕುಮಾರ್ ಸಂತೋಷಿ ಆಯ್ಕೆ ಮಾಡಿದ್ದಾರೆ. ಈ ಚಿತ್ರದಲ್ಲಿ ಹೂಡಾ, 36ನೆ ಸಿಖ್ಖ್ ರೆಜಿಮೆಂಟ್‌ನ ಮಿಲಿಟರಿ ಕಮಾಂಡರ್ ಈಶರ್‌ಸಿಂಗ್‌ನ ಪಾತ್ರದಲ್ಲಿ ನಟಿಸಲಿದ್ದಾರೆ.

ಭಾರೀ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರಕ್ಕೆ ಹೂಡಾ ಈಗಾಗಲೇ ಫೀಲ್ಡ್ ವರ್ಕ್ ಆರಂಭಿಸಿದ್ದಾರೆ. ಮುಂದಿನ 45 ದಿನಗಳ ಕಾಲ ಅವರು ಸಿಖ್ ಇತಿಹಾಸದ ಅಧ್ಯಯನ ನಡೆಸಲಿದ್ದಾರೆ. ಜೊತೆಗೆ ಕತ್ತಿಕಾಳಗ ಹಾಗೂ ಬ್ರಿಟಿಶ್ ಕಾಲದ ರೈಫಲ್‌ಗಳ ಶೂಟಿಂಗ್ ತರಬೇತಿ ಪಡೆಯಲಿದ್ದಾರೆ.

ಅಂದಹಾಗೆ ರಣದೀಪ್ ಈಗಾಗಲೇ ಕುದುರೆ ಸವಾರಿ ಯಲ್ಲಿ ಪಳಗಿದ್ದಾರೆ. ರಣದೀಪ್ ಅವರು ಈ ಚಿತ್ರದ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಅವರ ಬಾಡಿಲಾಂಗ್ವೆಜ್ ಯೋಧನ ಪಾತ್ರಕ್ಕೆ ತಕ್ಕುದ್ದಾಗಿದೆ ಎಂದು ಚಿತ್ರದ ನಿರ್ಮಾಪಕ ರಾದ ವೇವ್ ಸಿನೆಮಾದ ಸಿಇಒ ರಾಹುಲ್ ಮಿತ್ರ ಹೇಳುತ್ತಾರೆ. ವೇವ್ ಸಿನೆಮಾ ಈಗಾಗಲೇ ರಣದೀಪ್ ಜೊತೆಗೆ ಮೂರು ಚಿತ್ರಗಳ ಕರಾರನ್ನು ಮಾಡಿಕೊಂಡಿದೆ. ‘ಚಿತ್ರದಲ್ಲಿ ಸಿಖ್ ಸಮುದಾಯದ ಭಾವನೆಗಳಿಗೆ ಧಕ್ಕೆ ಬಾರದ ಹಾಗೆ ಎಚ್ಚರಿಕೆ ವಹಿಸಲಾಗುವುದು.ರಣದೀಪ್ ಅಂತೂ ಈ ಚಿತ್ರ ತನ್ನ ಸಿನೆಮಾ ಬದುಕಿನ ಒಂದು ದೊಡ್ಡ ಮೈಲುಗಲ್ಲಾಗಲಿದೆಯೆಂಬ ಭರವಸೆಯಲ್ಲಿದ್ದಾರೆ. ಕಥಾನಾಯಕ ಹವಾಲ್ದಾರ್ ಇಶರ್‌ಸಿಂಗ್‌ನ ಪಾತ್ರದಲ್ಲಿ ಸಂಪೂರ್ಣವಾಗಿ ಪರಾಕಾಯ ಪ್ರವೇಶ ಮಾಡಲಿದ್ದಾರೆಂದು ಮಿತ್ರಾ ಹೇಳುತ್ತಾರೆ.

1897ರ ಸೆಪ್ಟ್ಟಂಬರ್ 12ರಂದು ನಡೆದ ಸಾರಾಘರ್‌ಹಿ ಕದನದ ಹಿನ್ನೆಲೆಯೊಂದಿಗೆ ಚಿತ್ರದ ಕಥೆಯು ಸಾಗುತ್ತದೆ. ಸಾರಾಘರ್‌ಹಿಯಲ್ಲಿ ಸುಮಾರು 10 ಸಾವಿರದಷ್ಟಿದ್ದ ಓರ್ಕಾಝಿ ಬುಡಕಟ್ಟಿನ ಅಫ್ಘನ್ನರ ಸೇನೆಯು, ಈಗ ಪಾಕಿಸ್ತಾನದಲ್ಲಿರುವ ವಾಯವ್ಯ ಮುಂಚೂಣಿ ಪ್ರಾಂತ್ಯ (ಈಗ ಖೈಬರ್-ಪಖ್ತೂನ್‌ಖ್ವಾ) ದಲ್ಲಿ ಭಾರತೀಯ ಬ್ರಿಟಿಷ್ ಸೇನಾತುಕಡಿ 21ನೆ ಸಿಖ್ ರೆಜಿಮೆಂಟ್‌ನ ಮೇಲೆ ದಾಳಿ ನಡೆಸುತ್ತದೆ. ಆಗ ನಡೆದ ಭೀಕರ ಕಾಳಗದಲ್ಲಿ ಹವಾಲ್ದಾರ್ ಇಶರ್‌ಸಿಂಗ್ ಗಂಭೀರ ಗಾಯಗೊಳ್ಳುತ್ತಾನಾದರೂ ಶರಣಾಗಲು ನಿರಾಕರಿಸುತ್ತಾನೆ. ಅತ್ಯಂತ ವೀರಾವೇಶದಿಂದ ಹೋರಾಡಿ ಸಾವನ್ನಪ್ಪುತ್ತಾನೆ.

ಆತನ ಬಲಿದಾನದ ನೆನಪಿಗಾಗಿ ಬ್ರಿಟಿಷ್ ಸಂಸತ್ ಇಶರ್‌ಸಿಂಗ್‌ಗೆ ಮರಣೋತ್ತರ ಪುರಸ್ಕಾರವನ್ನು ನೀಡಿ ಗೌರವಿಸುತ್ತದೆ. ಯುದ್ಧದಲ್ಲಿ ವೀರಮರಣವನ್ನಪ್ಪಿದ ಯೋಧರ ಸ್ಮರಣಾರ್ಥವಾಗಿ ಸಾರಾಘರ್‌ಹಿನಲ್ಲಿ ಎರಡು ಗುರುದ್ವಾರಗಳನ್ನು ನಿರ್ಮಿಸಲಾಗಿದೆ. 1897ರಲ್ಲಿ ಸಾರಾಘರ್‌ಹಿ ಕದನ ಆರಂಭಗೊಂಡ ದಿನವಾದ ಸೆಪ್ಟಂಬರ್ 12ರಂದೇ ಚಿತ್ರದ ಮುಹೂರ್ತ ನಡೆಯಲಿದೆ. ಚಿತ್ರದ ಉಳಿದ ಪಾತ್ರವರ್ಗ ಹಾಗೂ ತಂತ್ರಜ್ಞರ ಆಯ್ಕೆ ಸಾಗುತ್ತಿದೆ. ಹಾಲಿವುಡ್‌ಗೆ ಸರಿಸಾಟಿಯಾದ ತಂತ್ರಜ್ಞಾನ ಈ ಚಿತ್ರದಲ್ಲಿ ಮೇಳೈಸಲಿದೆಯೆಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News