×
Ad

ಗಾಯಕರ ನಟಿಸುವ ಚಟ

Update: 2016-08-08 12:24 IST

ಬಾಲಿವುಡ್‌ನ ಖ್ಯಾತ ಹಾಡುಗಾರರ ಹಿನ್ನೆಲೆಯನ್ನು ಕೆದಕಿದರೆ, ಅವರು ಕಾಲಿಟ್ಟದ್ದು ನಟನೆಗಾಗಿ. ಆದರೆ ನಟನೆಯಲ್ಲಿ ವಿಫಲರಾದ ಬಳಿಕ ಅವರು ಖ್ಯಾತ ಹಾಡುಗಾರರಾಗಿ ಗುರುತಿಸಲ್ಪಟ್ಟರು. ಇದಕ್ಕೆ ಒಂದು ಉದಾಹರಣೆಯಾಗಿ ನಾವು ಮುಖೇಶ್ ಅವರನ್ನು ತೆಗೆದುಕೊಳ್ಳಬಹುದು. ನಟನಾಗುವ ಅವರ ಪ್ರಯತ್ನ ವಿಫಲವಾದ ಕಾರಣಕ್ಕಾಗಿಯೇ ನಮಗೊಬ್ಬ ಶ್ರೇಷ್ಠ ಗಾಯಕನೊಬ್ಬ ದೊರಕಿದ. ಹೀಗೆ ನಟರಾಗಲು ಯತ್ನಿಸಿ ವಿಫಲರಾಗಿ ಗಾಯಕರಾದವರ ಹಲವರ ಹೆಸರನ್ನು ಕೊಡಬಹುದು. ಇದೇ ಸಂದರ್ಭ ದಲ್ಲಿ ಹಾಡುತ್ತಾ ಹಾಡುತ್ತಾ, ನಟನೆಯ ಕುರಿತಂತೆ ಆಸಕ್ತಿ ತೋರಿಸಿದ ಹತ್ತು ಹಲವರನ್ನು ನಾವು ನೋಡುತ್ತಿದ್ದೇವೆ. ಸೋನು ನಿಗಮ್ ಈಗಾಗಲೇ ಮೂರು ಚಿತ್ರಗಳಲ್ಲಿ ಅಭಿನಯಿಸಿ, ಇದು ತನಗಲ್ಲ ಎಂದು ಮತ್ತೆ ಹಾಡುವ ಕಾಯಕದಲ್ಲಿ ಮಗ್ನರಾಗಿದ್ದಾರೆ.

ಇದೇ ಸಂದರ್ಭದಲ್ಲಿ, ತನ್ನ ವಿಭಿನ್ನ ಊಳಿಡುವ ಸ್ವರದಲ್ಲಿ ಗುರುತಿಸಲ್ಪಟ್ಟ, ಹಿಮೇಶ್ ರೇಶಾಮಿಯ ಅವರ ಸ್ಥಿತಿಯಂತೂ ಅನುಕಂಪಕ್ಕೆ ಅರ್ಹವಾದದ್ದು. ಗಾಯನ ಕ್ಷೇತ್ರದಲ್ಲಿ ವಿಭಿನ್ನವಾಗಿ ಗುರುತಿಸಲ್ಪಟ್ಟದ್ದು ಮಾತ್ರವಲ್ಲ, ಅವರ ಆಲ್ಬಂಗಳಲ್ಲಿ ಅವರೇ ನಟರಾಗಿ ಕಾಣಿಸಿಕೊಳ್ಳತೊಡಗಿದರು. ಇದು ಯಶಸ್ವಿಯೂ ಆಯಿತು. ಆದರೆ ನಿಧಾನಕ್ಕೆ ಅವರಿಗೆ ನಟನೆಯ ಮೇಲೆ ಆಸಕ್ತಿ ಹುಟ್ಟಿತು. ಹಾಡುವುದನ್ನು ಬಿಟ್ಟು ನಟನೆಗಿಳಿದರು. ಬೆನ್ನು ಬೆನ್ನಿಗೆ ಚಿತ್ರಗಳು ಸೋತರೂ ತಮ್ಮ ಹಟ ಬಿಡಲಿಲ್ಲ. ಪ್ರೇಕ್ಷಕರಂತೂ ಅವರ ಚಿತ್ರಗಳಕಡೆಗೆ ತಲೆ ಹೊರಳಿಸಿಯೂ ನೋಡಲಿಲ್ಲ. ಪರಿಣಾಮವಾಗಿ ಹಿಮೇಶ್ ಅತ್ತ ಗಾಯನ ಕ್ಷೇತ್ರದಲ್ಲೂ ನೆಲೆ ಕಳೆದುಕೊಂಡು, ನಟನಾಗಿಯೂ ಮಿಂಚದೆ ಅತಂತ್ರರಾಗಿದ್ದಾರೆ. ತಮ್ಮ ತಮ್ಮ ಕ್ಷೇತ್ರ ಯಾವುದು ಎನ್ನುವುದನ್ನು ಅರಿತುಕೊಂಡು ಅದರಲ್ಲಿ ಇನ್ನಷ್ಟು ಬೇರೂರುವುದರ ಕಡೆ ಗಮನ ಹರಿಸದೆ, ಜನಪ್ರಿಯತೆಯ ಬೆನ್ನು ಹತ್ತಿದಾಗ ಇಂತಹ ದುರಂತ ಸಂಭವಿಸುತ್ತದೆ. ಇದೀಗ ಇನ್ನೊಬ್ಬ ಗಾಯಕಿ ತನ್ನ ನಟಿಸುವ ಹಂಬಲವನ್ನು ಬಹಿರಂಗಪಡಿಸಿದ್ದಾರೆ. ಸುನಿಧಿ ಚೌಹಾಣ್ ಅವರು ಇದೀಗ ನಟನೆಯ ಕಡೆ ಎಷ್ಟು ಆಸಕ್ತಿ ಹೊಂದಿ ದ್ದಾರೆ ಎಂದರೆ ‘‘ಬಾಲ್ಯ ದಿಂದಲೇ ತನಗೆ ನಟಿಸುವ ಕುರಿತಂತೆ ಹಂಬಲವಿತ್ತು’’ ಎಂದು ಹೇಳಿಕೊಂಡಿದ್ದಾರೆ. ತನಗೆ 19ನೆ ವರ್ಷದಲ್ಲಿದ್ದಾಗಲೇ ನಟಿಸಲು ಆಹ್ವಾನ ಬಂದಿತ್ತು ಎಂದೂ ಅವರು ಬಹಿರಂಗಪಡಿಸಿದ್ದಾರೆ. ಆದರೆ ಗಾಯನಕ್ಕಾಗಿ ಅದನ್ನು ತಿರಸ್ಕರಿಸಿದೆ ಎಂದಿದ್ದಾರೆ. ಸುನಿಧಿ ಅವರು ಈಗಾಗಲೇ ಒಂದು ಕಿರುಚಿತ್ರದಲ್ಲಿ ನಟಿಸಿ ಗಮನ ಸೆಳೆದಿದ್ದಾರೆ. 32 ವರ್ಷದ ಸುನಿಧಿಯನ್ನು ಬಾಲಿವುಡ್ ಸ್ವಾಗತಿಸುವುದು ತೀರಾ ಕಷ್ಟ. ಆದರೆ ಸದ್ಯಕ್ಕಂತೂ ಸುನಿಧಿ ನಟನೆಯ ಬಗ್ಗೆ ಭಾರೀ ನಿರೀಕ್ಷೆಯನ್ನು ಹೊಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News