ಕುಮಾರಧಾರ ನದಿಗೆ ಉರುಳಿದ ಗ್ಯಾಸ್ ಟ್ಯಾಂಕರ್
ಮಂಗಳೂರು, ಆ.7: ಉಪ್ಪಿನಂಗಡಿ ಸಮೀಪದ ಉದನೆ ನರ್ಸರಿ ಇಂದು ಸಂಜೆ ಸುಮಾರು 4 ಗಂಟೆ ಹೊತ್ತಿಗೆ ಚಾಲಕನ ನಿಯಂತ್ರಣ ಕಳೆದುಕೊಂಡ ಗ್ಯಾಸ್ ಟ್ಯಾಂಕರ್‌ವೊಂದು ಸೇತುವೆಯಿಂದ ಕುಮಾರಧಾರ ನದಿಗೆ ಉರುಳಿ ಬಿದ್ದಿದೆ. ಪರಿಣಾಮವಾಗಿ ಟ್ಯಾಂಕರ್‌ನಿಂದ ನದಿಗೆ ಗ್ಯಾಸ್ ಸೋರಿಕೆಯಾಗಿದ್ದು, ಸಾರ್ವಜನಿಕರು ಕೆಲವು ತಾಸುಗಳ ಕಾಲ ನದಿಯ ನೀರು ಬಳಕೆ ಮಾಡದಂತೆ ಪುತ್ತೂರು ಪೊಲೀಸ್ ಸಹಾಯಕ ಅಧೀಕ್ಷಕ ಸಿ.ಬಿ.ರಿಷ್ಯಂತ್ ಸೂಚನೆ ನೀಡಿದ್ದಾರೆ.
ಮಂಗಳೂರಿನಿಂದ ಬೆಂಗಳೂರು ಕಡೆಗೆ ಗ್ಯಾಸ್ ತುಂಬಿಸಿಕೊಂಡು ಹೋಗುತ್ತಿದ್ದ ಟ್ಯಾಂಕರ್ ಉದನೆ ನರ್ಸರಿ ಬಳಿ ಸೇತುವೆಯಿಂದ ಹಾದುಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ಕಳೆದುಕೊಂಡು ಕುಮಾರಧಾರ ನದಿಗೆ ಉರುಳಿ ಬಿದ್ದಿದೆ. ಈ ಸಂದರ್ಭದಲ್ಲಿ ನೀರಿನಲ್ಲಿ ಮುಳುಗಿದ್ದ ಟ್ಯಾಂಕರ್ ಮುಚ್ಚಳ ತೆರೆದುಕೊಂಡಿದ್ದು, ಅನಿಲ ನೀರಿನಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗಿದೆ.
ಅನಿಲ ಮಿಶ್ರಿತ ನೀರು ದೇಹಕ್ಕೆ ದೇರಿಕೊಂಡರೆ ವ್ಯತಿರಿಕ್ತ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ಕೆಲವು ತಾಸುಗಳ ಕಾಲ ನೀರು ಬಳಸದಂತೆ ಪುತ್ತೂರು ಎಎಸ್ಪಿ ರಿಷ್ಯಂತ್ ಸಲಹೆ ನೀಡಿದ್ದಾರೆ.
ಮಂಗಳೂರು ಹಾಗೂ ಪುತ್ತೂರಿನಿಂದ ಅಗ್ನಿಶಾಮಕ ದಳವು ಸ್ಥಳಕ್ಕೆ ದೌಡಾಯಿಸಿದ್ದು, ಕಾರ್ಯಾಚರಣೆ ಕೈಗೊಂಡಿದೆ.