ಕಲ್ಲಬೆಟ್ಟು-ಜ್ಯೋತಿನಗರ ವಸತಿ ಶಾಲೆಗಳಿಗೆ ಶಾಸಕ ಅಭಯಚಂದ್ರ ಭೇಟಿ

Update: 2016-08-09 11:58 GMT

ಮೂಡುಬಿದಿರೆ, ಆ.9: ಇಲ್ಲಿನ ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ಹೆಣ್ಣು ಮಕ್ಕಳ ವಸತಿ ಶಾಲೆ ಮತ್ತು ಜ್ಯೋತಿನಗರದಲ್ಲಿರುವ ಮೆಟ್ರಿಕ್ ಪೂರ್ವ ಬಾಲಕ ಹಾಗೂ ಬಾಲಕಿಯರ ವಸತಿ ಶಾಲೆಗಳಿಗೆ ಕ್ಷೇತ್ರದ ಶಾಸಕ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಲ್ಲಬೆಟ್ಟು ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಆವರಣದ ಬಳಿ ಜೋತುಬಿದ್ದಿರುವ ವಿದ್ಯುತ್ ಬಾಕ್ಸ್‌ನ ವಯರ್‌ನ ಬಗ್ಗೆ, ಶಾಲೆಗೆ ಆವರಣ ಗೋಡೆ, ಆಟದ ಮೈದಾನ, ಉರಿಯದಿರುವ ದಾರಿದೀಪ ಹಾಗೂ ವಿದ್ಯುತ್ ಕೈಕೊಟ್ಟರೆ ಇನ್‌ವರ್ಟರ್ ವ್ಯವಸ್ಥೆ ಇಲ್ಲದಿರುವ ಬಗ್ಗೆ ಶಾಲಾ ಮುಖ್ಯ ಶಿಕ್ಷಕಿ ಶ್ವೇತಾ ಜಿ.ಎಸ್. ಶಾಸಕರ ಗಮನಕ್ಕೆ ತಂದರು.

ಇದಕ್ಕೆ ತಕ್ಷಣ ಸ್ಪಂದಿಸಿದ ಶಾಸಕರು ಇನ್‌ವರ್ಟರ್ ವ್ಯವಸ್ಥೆ, ಸಮರ್ಪಕ ದಾರಿದೀಪದ ವ್ಯವಸ್ಥೆಗೆ ಸಂಬಂಧಪಟ್ಟವರಿಗೆ ಹಾಗೂ ವಿದ್ಯುತ್ ಬಾಕ್ಸ್ ಬದಲಾಯಿಸುವಂತೆ ಮೆಸ್ಕಾಂ ಅಧಿಕಾರಿಗಳಿಗೆ ಮೊಬೈಲ್ ಕರೆ ಮಾಡಿ ತಿಳಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಮೆಸ್ಕಾಂ ಅಧಿಕಾರಿಗಳು ಸುರಕ್ಷತೆ ಕ್ರಮವನ್ನು ಕೈಗೊಂಡರು.ಉಳಿದಂತೆ ಶಾಲೆಗೆ ಆವರಣ ಗೋಡೆ ಮತ್ತು ಆಟದ ಮೈದಾನದ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವುದಾಗಿ ಶಾಲಾ ಮುಖ್ಯಸ್ಥರಿಗೆ ತಿಳಿಸಿದರು.

ನಂತರ ಜ್ಯೋತಿನಗರದಲ್ಲಿರುವ ವಸತಿ ಶಾಲೆಗೆ ಭೇಟಿ ನೀಡಿದ ಜೈನ್, ದುರಸ್ತಿಯಾಗುತ್ತಿರುವ ಕಟ್ಟಡವನ್ನು ಪರಿಶೀಲಿಸಿದರು. ನಂತರ ಮಕ್ಕಳಲ್ಲಿ ವಸತಿ ಶಾಲೆಯಲ್ಲಿ ನೀಡುತ್ತಿರುವ ಆಹಾರ ಪದಾರ್ಥಗಳ ಬಗ್ಗೆ, ವಾರ್ಡ್‌ನ್‌ಗಳು ಯಾವ ರೀತಿಯಾಗಿ ತಮ್ಮನ್ನು ನೋಡಿಕೊಳ್ಳುತ್ತಿದ್ದಾರೆಂಬುದನ್ನು ವಿಚಾರಿಸಿದರು.

ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷೆ ರೂಪಾ.ಎಸ್ ಶೆಟ್ಟಿ, ಉಪಾಧ್ಯಕ್ಷೆ ಶಕುಂತಲಾ ದೇವಾಡಿಗ, ಸ್ಥಾಯಿ ಸಮಿತಿ ಅಧ್ಯಕ್ಷ ಕೊರಗಪ್ಪ, ಮೂಡಾ ಅಧ್ಯಕ್ಷ ಸುರೇಶ್ ಕೋಟ್ಯಾನ್, ಮೊರಾರ್ಜಿ ದೇಸಾಯಿ ಶಾಲೆಯ ಹಿರಿಯ ಶಿಕ್ಷಕಿ ವಿದ್ಯಾ, ದೈಹಿಕ ಶಿಕ್ಷಕಿ ವಿನಯ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News