ಮೋದಿ ಸರಕಾರಕ್ಕೆ ಮುಷ್ಕರದ ಬಿಸಿ: ಸೆ.2ಕ್ಕೆ ‘ಭಾರತ್ ಬಂದ್’

Update: 2016-08-09 13:35 GMT


 ಬೆಂಗಳೂರು, ಆ.9: ಕಾರ್ಮಿಕರ ಹಿತಾಸಕ್ತಿಗಾಗಿ ರೂಪಿಸಿರುವ ಕಾನೂನುಗಳನ್ನು ಬದಲಾವಣೆ ಸೇರಿದಂತೆ ಇನ್ನಿತರೆ ಬೇಡಿಕೆಗಳನ್ನು ಮೋದಿ ನೇತೃತ್ವದ ಕೇಂದ್ರ ಸರಕಾರ ಈಡೇರಿಸಬೇಕೆಂದು ಆಗ್ರಹಿಸಿ ಸೆ.2ರಂದು ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ (ಭಾರತ್‌ಬಂದ್)ಕರೆ ನೀಡಲಾಗಿದೆ ಎಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಹೇಳಿದೆ.


ಮಂಗಳವಾರ ನಗರದ ಸಂಗೊಳ್ಳಿರಾಯಣ್ಣ ರೈಲ್ವೆ ನಿಲ್ದಾಣದಿಂದ ಫ್ರೀಡಂ ಪಾರ್ಕ್‌ವರೆಗೂ ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ನೇತೃತ್ವದಲ್ಲಿ ‘ಸೆ.2ರ ಅಖಿಲ ಭಾರತ ಸಾರ್ವತ್ರಿಕ ಮುಷ್ಕರ’ ಬೆಂಬಲಿಸಿ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಲಾಯಿತು.


   ಸೆ.2ರ ಕಾರ್ಮಿಕರ ಮುಷ್ಕರವನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ಮುಖಂಡ ವಿಜೆಕೆ ನಾಯರ್, ಕೇಂದ್ರ ಮತ್ತು ರಾಜ್ಯ ಸರಕಾರಗಳ ಕಾರ್ಮಿಕ ವಿರೋಧಿ ನೀತಿಗಳನ್ನು ಖಂಡಿಸಿ ಕಾರ್ಮಿಕರ ಸಂಘಟನೆಗಳು ಒಗ್ಗೂಡಿ ಸೆ.2ರಂದು ಭಾರತ್ ಬಂದ್‌ಗೆ ಕರೆ ನೀಡಲಾಗಿದೆ. ಇದರಿಂದ ಮೋದಿ ಸರಕಾರಕ್ಕೆ ಮುಷ್ಕರದ ಬಿಸಿ ತಟ್ಟಲಿದೆ ಎಂದು ತಿಳಿಸಿದರು.


 ಮೋದಿ ಸರಕಾರದ ಆಡಳಿತದಲ್ಲಿ ಕಾರ್ಮಿಕರಷ್ಟೆ ಅಲ್ಲದೆ, ಜನ ಸಾಮಾನ್ಯರಿಗೂ ಸಂಕಷ್ಟದ ದಿನಗಳು ಎದುರಾಗಿವೆ. ದಿನನಿತ್ಯ ಬಳಕೆ ಸಾಮಗ್ರಿಗಳ ಬೆಲೆ ಗಗನಕ್ಕೇರುತ್ತಿವೆ ಎಂದ ಅವರು, ವರ್ಷಕ್ಕೆ ಒಂದು ಕೋಟಿಯಷ್ಟು ಉದ್ಯೋಗ ಸೃಷ್ಟಿ ಮಾಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಇದೀಗ ನಿರುದ್ಯೋಗ ತಾಂಡವವಾಡುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.


  ಎಐಟಿಯುಸಿ ರಾಜ್ಯ ಸಮಿತಿ ಅಧ್ಯಕ್ಷ ಎಚ್.ವಿ.ಅನಂತಸುಬ್ಬರಾವ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಅಸಂಘಟಿತ ವಲಯದಲ್ಲಿರುವ ಕಾರ್ಮಿಕರಿಗೆ ಕನಿಷ್ಠ 18 ಸಾರವಿ ರೂ. ಮಾಸಿಕ ವೇತನ ನೀಡಬೇಕು. ಅದೇರೀತಿ, ಕೆಲ ನೌಕಕರಿಗೆ ಯಾವುದೇ ಸಾಮಾಜಿಕ ಭದ್ರತೆಗಳಿಲ್ಲ, ಈ ನಿಟ್ಟಿನಲೂ ್ಲ ಕಾರ್ಮಿಕರೆಲ್ಲ ಒಗ್ಗೂಡಿ ಸರಕಾರಗಳ ನೀತಿಗಳನ್ನು ವಿರೋಧಿಸಬೇಕೆಂದು ಕರೆ ನೀಡಿದರು.


 ಜೆಸಿಟಿಯು(ಕರ್ನಾಟಕ) ಪ್ರಧಾನ ಸಂಚಾಲಕಿ ವರಲಕ್ಷ್ಮೀ ಮಾತನಾಡಿ, ಕೇಂದ್ರ ಸರಕಾರ ಬೆಲೆ ಏರಿಕೆಯನ್ನು ತಡೆಗಟ್ಟಬೇಕು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ ಕಲ್ಪಿಸಿ ಪಿಂಚಣಿ ನೀಡಬೇಕು. ಅದೇರೀತಿ, ಕಾರ್ಮಿಕ ವಿರೋಧಿ ಕಾಯ್ದೆಗಳ ತಿದ್ದುಪಡಿ ನಿಲ್ಲಿಸಬೇಕೆಂದು ಒತ್ತಾಯಿಸಿದರು.


ರ್ಯಾಲಿಯಲ್ಲಿ ಐಎನ್‌ಟಿಯುಸಿ, ಎಚ್‌ಎಂಎಸ್, ಟಿಯುಸಿಸಿ, ಬ್ಯಾಂಕ್ ಕಾರ್ಮಿಕರ ಸಂಘಟನೆ ಸೇರಿ ವಿವಿಧ ಸಂಘಟನೆಗಳ ಪ್ರಧಾನ ಸಂಚಾಲಕರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News