ಉಚ್ಚಿಲ: ಸಂಕೊಳಿಗೆಯಲ್ಲಿ ಸರಣಿ ಅಪಘಾತ
Update: 2016-08-09 19:09 IST
ಉಳ್ಳಾಲ, ಆ.9: ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಉಚ್ಚಿಲ ಸಂಕೋಳಿಗೆ ಬಳಿ ಮಂಗಳವಾರ ಬೆಳಗ್ಗೆ ಟೆಂಪೋ, ಎರಡು ಮಹೀಂದ್ರಾ ಪಿಕ್ ಅಪ್ ಹಾಗೂ ಮಾರುತಿ 800 ವಾಹನಗಳ ನಡುವೆ ಸರಣಿ ಅಪಘಾತ ನಡೆದ ಘಟನೆ ನಡೆದಿದೆ.
ರಾ.ಹೆ. 66ರ ಉಚ್ಚಿಲ ಸಂಕೋಳಿಗೆ ಬಳಿ ತಂಪು ಪಾನೀಯ ಸಾಗಿಸುತ್ತಿದ್ದ ಟೆಂಪೊ, ನೇತಾಜಿ ರಸ್ತೆ ತಿರುವಿನಲ್ಲಿ ತಿರುಗುತ್ತಿದ್ದಾಗ ಟೆಂಪೊ ಹಿಂಬದಿಗೆ ಪಿಕ್‌ಅಪ್ ಢಿಕ್ಕಿ ಹೊಡೆಯಿತು. ಈ ವಾಹನಕ್ಕೆ ಹಿಂಬದಿಯಿಂದ ಬರುತ್ತಿದ್ದ ಮತ್ತೊಂದು ಪಿಕ್‌ಅಪ್ ಡಿಕ್ಕಿ ಹೊಡೆಯಿತು. ಈ ಮೂರು ವಾಹನಗಳ ಹಿಂದೆ ತಲಪಾಡಿ ಕಡೆಗೆ ಸಂಚರಿಸುತ್ತಿದ್ದ ಮಾರುತಿ 800 ಕಾರು ಕೂಡಾ ಪಿಕಪ್‌ನ ಹಿಂಭಾಗಕ್ಕೆ ಢಿಕ್ಕಿ ಹೊಡೆಯಿತು. ಹೀಗೆ ಒಂದರ ಹಿಂಬದಿಗೊಂದು ವಾಹನದಂತೆ ಮೂರು ವಾಹನ ಢಿಕ್ಕಿ ಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ಮಾರುತಿ-800ನಲ್ಲಿದ್ದ ಪ್ರಯಾಣಿಕರೊಬ್ಬರಿಗೆ ಸಣ್ಣ ಪುಟ್ಟ ಗಾಯವಾಗಿದ್ದು ಬಿಟ್ಟರೆ ಬೇರೆ ಯಾವುದೇ ಅಪಾಯ ಸಂಭವಿಸಿಲ್ಲ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.