ಅರುಣಾಚಲದ ಮಾಜಿ ಮುಖ್ಯಮಂತ್ರಿ ಖಾಲಿಕೊ ಆತ್ಮಹತ್ಯೆ
ಇಟಾನಗರ್, ಆ.9: ಅರುಣಾಚಲಪ್ರದೇಶದ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ ಕೆಲವೇ ವಾರಗಳ ಬಳಿಕ, ಇಂದು ಮುಂಜಾನೆ ಮಾಜಿ ಮುಖ್ಯಮಂತ್ರಿ ಕಾಲಿಖೊ ಪುಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರಿಗೆ 47 ವರ್ಷ ವಯಸ್ಸಾಗಿತ್ತು.
ಇಟಾನಗರದಲ್ಲಿರುವ ಮುಖ್ಯಮಂತ್ರಿಯ ಅಧಿಕೃತ ನಿವಾಸದಲ್ಲಿ ಅವರು ನೇಣು ಹಾಕಿಕೊಂಡಿದ್ದಾರೆ. ಕಾಲಿಖೊರ ನಿವಾಸ ನವೀಕರಣಗೊಳ್ಳುತ್ತಿರುವುದರಿಂದ ಅವರು ಮುಖ್ಯಮಂತ್ರಿಯ ನಿವಾಸವನ್ನು ತೆರವುಗೊಳಿಸಿರಲಿಲ್ಲ.
ಅವರು ಡೈರಿಯೊಂದನ್ನು ಅಲ್ಲಿ ಬಿಟ್ಟಿದ್ದು, ಪೊಲೀಸರು ಅದನ್ನು ಪರಿಶೀಲಿಸುತ್ತಿದ್ದಾರೆಂದು ಮೂಲಗಳು ತಿಳಿಸಿವೆ.
ಖಾಲಿಕೊರ ಮೃತದೇಹ ಪತ್ತೆಯಾದ ಕೆಲವೇ ತಾಸುಗಳಲ್ಲಿ ಅವರ ಆಕ್ರೋಶಿತ ಬೆಂಬಲಿಗರು ಮುಖ್ಯಮಂತ್ರಿ ಪೆಮಾ ಖಂಡು ಅವರ ನಿವಾಸದ ಹೊರಗೆ ಸೇರಿದರು. ಉಪ ಮುಖ್ಯಮಂತ್ರಿ ಚೌನಾ ಮೆಯಿನ್ ಹಾಗೂ ಇನ್ನೊಬ್ಬ ಸಚಿವನ ನಿವಾಸಗಳಿಗೆ ದಾಳಿ ಮಾಡಲಾಗಿದೆಯೆಂದು ವರದಿಗಳು ಹೇಳಿವೆ.
ಅಧಿಕಾರದಲ್ಲಿದ್ದ ಸರಕಾರವೊಂದನ್ನು ಸುಪ್ರೀಂ ಕೋರ್ಟ್ ಕಳೆದ ತಿಂಗಳು ಮೊದಲ ಬಾರಿಗೆ ಕೆಳಗಿಳಿಸಿತ್ತು ಹಾಗೂ ಅರುಣಾಚಲದಲ್ಲಿ ಕಾಂಗ್ರೆಸ್ ಸರಕಾರವನ್ನು ಪುನಃ ಸ್ಥಾಪಿಸುವಂತೆ ಆದೇಶಿಸಿತ್ತು.
2015ರ ಅಂತ್ಯದ ವರೆಗೆ ಕಾಂಗ್ರೆಸ್‌ನಲ್ಲೇ ಇದ್ದ ಖಾಲಿಕೊ ಪುಲ್, ಫೆಬ್ರವರಿಯಲ್ಲಿ ಪಕ್ಷ ದ ಹಲವು ಶಾಸಕರೊಂದಿಗೆ ಮುಖ್ಯಮಂತ್ರಿಯಾಗಿದ್ದ ನಬಂ ಟುಕಿ ವಿರುದ್ಧ ಬಂಡೆದಿದ್ದರು. ಅವರು ಬಿಜೆಪಿಯ ಬೆಂಬಲದಿಂದ ಮುಖ್ಯಮಂತ್ರಿಯಾಗಿದ್ದರು.
ರಾಜ್ಯ ಸರಕಾರವನ್ನು ಉಲ್ಲಂಘಿಸಿ ವಿಧಾನಸಭಾಧಿವೇಶನ ಕರೆಯುವ ಅಧಿಕಾರ ರಾಜ್ಯಪಾಲರಿಗಿಲ್ಲ. ಆದುದರಿಂದ ಕಾಲಿಖೊರ ನೇಮಕಾತಿ ಕಾನೂನುಬಾಹಿರಬೆಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು.