ಚಲಿಸುತ್ತಿರುವ ರೈಲಿನಲ್ಲಿ ಕೋಟ್ಯಂತರ ರೂ.ಗೆ ಯಶಸ್ವೀ ಕನ್ನ !
ಚೆನ್ನೈ,ಆ.9: ಸಿನಿಮೀಯ ಘಟನೆಯೊಂದರಲ್ಲಿ ಚೋರ ಶಿಖಾಮಣಿಗಳು ಚಲಿಸುತ್ತಿದ್ದ ರೈಲಿನಲ್ಲಿದ್ದ ಭಾರತೀಯ ರಿಸರ್ವ್ ಬ್ಯಾಂಕಿಗೆ ಸೇರಿದ ಕೋಟ್ಯಾಂತರ ರೂ.ಗಳನ್ನು ದೋಚಿದ್ದಾರೆ. ತಮಿಳುನಾಡಿನ ಸೇಲಮ್‌ನಿಂದ ಚೆನ್ನೈಗೆ ಆಗಮಿಸುತ್ತಿದ್ದ ರೈಲಿನಲ್ಲಿ ಈ ಘಟನೆ ನಡೆದಿದೆ. ಕಳ್ಳರ ಪಾಲಾಗಿರುವ ಹಣವೆಷ್ಟು ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.
ಈ ರೈಲಿನ ಬೋಗಿಯೊಂದನ್ನು ಹಣ ಸಾಗಾಟಕ್ಕಾಗಿಯೇ ಆರ್‌ಬಿಐ ಪಡೆದುಕೊಂಡಿತ್ತು. ಸೇಲಮ್‌ನಿಂದ ಸೋಮವಾರ ರಾತ್ರಿ ಹೊರಟಿದ್ದ ರೈಲಿನ ಬೋಗಿಯಲ್ಲಿ 342 ಕೋ.ರೂ.ಗಳಿದ್ದ 228 ಪೆಟ್ಟಿಗೆಗಳನ್ನು ಇರಿಸಲಾಗಿತ್ತು. ಈ ಎಲ್ಲ ನೋಟುಗಳು ಸುಮಾರು 23 ಟನ್ ತೂಗುತ್ತಿದ್ದವು. ಆರ್‌ಬಿಐ ಸೇಲಮ್‌ನ ಐದು ಬ್ಯಾಂಕುಗಳಿಂದ ಈ ಹಣವನ್ನು ಸಂಗ್ರಹಿಸಿತ್ತು.
ಚಲಿಸುತ್ತಿರುವ ರೈಲಿನಲ್ಲಿ ಇಂತಹ ದರೋಡೆ ಮೊದಲ ಬಾರಿಗೆ ನಡೆದಿದೆ ಎಂದು ರೈಲ್ವೈ ಡಿಐಜಿ ಭಾಸ್ಕರನ್ ತಿಳಿಸಿದರು.
ಮಂಗಳವಾರ ನಸುಕಿನ 4:40ರ ಸುಮಾರಿಗೆ ರೈಲು ಚೆನ್ನೈ ನಿಲ್ದಾಣಕ್ಕೆ ಆಗಮಿಸಿದಾಗಷ್ಟೇ ಆರ್‌ಬಿಐ ಅಧಿಕಾರಿಗಳಿಗೆ ದರೋಡೆ ನಡೆದಿರುವುದು ಗೊತ್ತಾಗಿದೆ. ಸದ್ರಿ ಬೋಗಿಯೊಳಗಿನಿಂದ ಹಣವಿದ್ದ ಎರಡು ಪೆಟ್ಟಿಗೆಗಳನ್ನು ತೆರೆಯಲಾಗಿದ್ದು,ಎಷ್ಟು ಹಣ ಹೋಗಿದೆ ಎನ್ನುವುದು ತಕ್ಷಣಕ್ಕೆ ಗೊತ್ತಾಗಿಲ್ಲ.
ಮಾರ್ಗಮಧ್ಯೆ ರೈಲನ್ನೇರಿದ ದರೋಡೆಕೋರರು ಹಣವಿದ್ದ ಬೋಗಿಯ ಮೇಲಕ್ಕೆ ಹತ್ತಿ ಸ್ಟೀಲ್ ಕಟರ್‌ಗಳು ಮತ್ತು ವೆಲ್ಡಿಂಗ್ ಯಂತ್ರದ ನೆರವಿನಿಂದ ಛಾವಣಿಗೆ ಕನ್ನ ಕೊರೆದು ಕೆಳಗಿಳಿದಿದ್ದಾರೆ. ತಮ್ಮ ಕೆಲಸವನ್ನು ಪೂರೈಸಿಕೊಂಡು ವಿರುಧಾಚಲಮ್‌ನಲ್ಲಿ ಇಳಿದು ಹೋಗಿದ್ದಾರೆ ಎಂದು ತನಿಖಾ ತಂಡವು ಹೇಳಿದೆ. ನಸುಕಿನ 1:30 ರ ಸುಮಾರಿಗೆ ವಿರುಧಾಚಲಮ್‌ನಲ್ಲಿ ರೈಲು ಕೆಲಸಮಯ ನಿಂತುಕೊಂಡಿತ್ತು.
ಕೆಲವು ಜನರು ಒಳಗೆ ಯಾರೂ ಇಲ್ಲದಿದ್ದ, ಹೊರಗಿನಿಂದ ಬೀಗ ಹಾಕಿದ್ದ ಬೋಗಿಯೊಂದರ ವೆಂಟಿಲೇಟರ್‌ನ್ನು ಬಲವಂತದಿಂದ ಕಿತ್ತು ತೆಗೆಯಲು ಪ್ರಯತ್ನಿಸುತ್ತಿದ್ದ ದೃಶ್ಯ ನಿಲ್ದಾಣದಲ್ಲಿಯ ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದೆ.