ನರೇಶ್ ಶೆಣೈ ಜಾಮೀನು ಅರ್ಜಿ ತಿರಸ್ಕೃತ
ಮಂಗಳೂರು, ಆ. 9: ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿರುವ ನಮೋ ಬ್ರಿಗೇಡ್‌ನ ಸಂಸ್ಥಾಪಕ ನರೇಶ್ ಶೆಣೈಗೆ ಇಲ್ಲಿನ ಎರಡನೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯವು ಜಾಮೀನು ನೀಡಲು ನಿರಾಕರಿಸಿದೆ. ಮಂಗಳವಾರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ಜಾಮೀನು ಅರ್ಜಿಯನ್ನು ತಿರಸ್ಕರಿಸಿದೆ.
ವಿನಾಯಕ ಬಾಳಿಗಾರವರು ಕೊಲೆಯಾದ ಬಳಿಕ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ ನರೇಶ್ ಶೆಣೈಯನ್ನು ಕೊನೆಗೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ತಲೆಮರೆಸಿಕೊಂಡಿದ್ದ ಸಂದರ್ಭದಲ್ಲಿ ಜಿಲ್ಲಾ ಮತ್ತು ಹೈಕೋರ್ಟ್‌ನಲ್ಲಿ ಜಾಮೀನು ಪಡೆಯಲು ವಿಫಲವಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿ ಬಂಧಿತ 7 ಮಂದಿಯ ಪೈಕಿ ಮಂಜು ನಿರೇಶ್ವಾಲ್ಯ ಹಾಗೂ ಶೈಲೇಶ್‌ಗೆ ಜಿಲ್ಲಾ ನ್ಯಾಯಾಲಯ ಜಾಮೀನು ನೀಡಿತ್ತು. ಈ ಪೈಕಿ ಶೈಲೇಶ್‌ಗೆ ಜಾಮೀನು ನೀಡಿರುವ ಜಿಲ್ಲಾ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ತನಿಖಾಧಿಕಾರಿಗಳು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. ಅಲ್ಲದೇ ಬಂಧಿತ ಶಿವ ಹಾಗೂ ಶ್ರೀಕಾಂತ್ ಜಿಲ್ಲಾ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಇನ್ನಷ್ಟೇ ನಡೆಸಬೇಕು.
ಸಿಐಡಿಯಿಂದ ಮುಂದುವರಿದ ತನಿಖೆ
ಮಂಗಳೂರು, ಆ. 9: ಮಡಿಕೇರಿಯ ವಸತಿಗೃಹವೊಂದರಲ್ಲಿ ಆತ್ಮಹತ್ಯೆ ಮಾಡಿಕೊಂಡ ಮಂಗಳೂರು ಐಜಿ ಕಚೇರಿಯ ಡಿವೈಎಸ್ಪಿ ಎಂ.ಕೆ. ಗಣಪತಿ ಆತ್ಮಹತ್ಯೆ ಪ್ರಕರಣ ಸಂಬಂಧದ ಸಿಐಡಿ ಅಧಿಕಾರಿಗಳು ಮಂಗಳವಾರವೂ ತನಿಖೆಯನ್ನು ಮುಂದುವರಿಸಿದ್ದಾರೆ.
ಎಂ.ಕೆ.ಗಣಪತಿ ಅವರ ಪತ್ನಿ ಮತ್ತು ಮಕ್ಕಳಿಂದ ಹೆಚ್ಚಿನ ಮಾಹಿತಿ ಕಲೆಹಾಕಿದ ಸಿಐಡಿ ಡಿಐಜಿ ಸೋನಿಯಾ ನಾರಂಗ್, ಎಸ್ಪಿ ಕುಮಾರಸ್ವಾಮಿ ನೇತೃತ್ವದ ತಂಡ ಸಮೀಪದ ಮನೆಗಳಿಂದಲೂ ಮಾಹಿತಿ ಸಂಗ್ರಹಿಸಿದೆ ಎಂದು ತಿಳಿದುಬಂದಿದೆ.