ಕೊಂಬಾರಿನಲ್ಲಿ ನಿರಂತರ ಕಾಡಾನೆ ದಾಳಿ: ಅಪಾರ ಕೃಷಿ ನಾಶ
ಕಡಬ, ಆ.9. ಕೊಂಬಾರು ಗ್ರಾಮದಲ್ಲಿ ಕಳೆದ ಒಂದು ವಾರದಿಂದ ನಿರಂತರವಾಗಿ ಕಾಡಾನೆ ಕೃಷಿ ತೋಟಗಳಿಗೆ ನುಗ್ಗಿ ಕೃಷಿ ನಾಶ ಮಾಡುತ್ತಿದ್ದು ಇದರಿಂದ ರೈತರಿಗೆ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ.
ಪರಿಸರದ ಪುಯಿಲ, ಮಿತ್ತಬೈಲ್, ಅಗಾರಿ, ಕಮರ್ಕಜೆ, ಕೋಲ್ಪೆ ಪ್ರದೇಶಗಳಿಗೆ ಕಾಡಾನೆ ದಾಳಿ ನಡೆಸುತ್ತಿದೆ. ಸೋಮವಾರ ತಡರಾತ್ರಿ ಮಿತ್ತಬೈಲ್ ಆನಂದ ಎಂಬವರಿಗೆ ಸೇರಿದ ಭತ್ತದ ಕೃಷಿಯನ್ನು ನಾಶಪಡಿಸಿದ ಕಾಡಾನೆ ಸುಮಾರು 1 ಎಕ್ರೆಯಲ್ಲಿದ್ದ ತೆನೆಬಿಡಲು ತಯಾರಾಗಿದ್ದ ಭತ್ತದ ಪೈರನ್ನು ನಾಶಪಡಿಸಿದೆ. ಇದರಿಂದಾಗಿ ಸುಮಾರು 25 ಸಾವಿರ ರೂ. ನಷ್ಟ ಉಂಟಾಗಿದೆ ಎಂದು ಆನಂದ ಮಿತ್ತಬೈಲ್ ತಿಳಿಸಿದ್ದಾರೆ.
ಸಮೀಪದ ಲಿಂಗಪ್ಪಗೌಡರ ಬಾಳೆಗಿಡಗಳು, ಸೋಮಪ್ಪ ಗೌಡರ ಭತ್ತದ ಪೈರು ಹಾಗೂ ಬಾಳೆಗಿಡಗಳನ್ನು ನಾಶಗೊಳಿಸಿದೆ. ಪೂಯಿಲ ಲಾವಪ್ಪ ಗೌಡರ 2 ಎಕ್ರೆ ಗದ್ದೆ ಪೈರು ಸಂಪೂರ್ಣ ನಾಶಗೊಳಿಸಿದ ಕಾಡಾನೆ 35 ಸಾವಿರಕ್ಕೂ ಹೆಚ್ಚಿನ ನಷ್ಟ ಉಂಟಾಗಿದೆ ಎಂದು ಲಾವಪ್ಪ ಗೌಡ ತಿಳಿಸಿದ್ದಾರೆ. ಅಗರಿ ದೇವಪ್ಪ ಗೌಡರ ತೋಟದ ಬಾಳೆ ಸಂಪೂರ್ಣ ನಾಶಮಾಡಿದೆ. ಕೋಲ್ಪೆ ಚಂದ್ರಪ್ಪಗೌಡರ ಭತ್ತದ ಪೈರು ನಾಶಗೊಂಡಿದೆ.
ಘಟನಾ ಸ್ಥಳಕ್ಕೆ ಕೊಂಬಾರು ಶಾಖಾ ಉಪವಲಯಾರಣ್ಯಾಧಿಕಾರಿ ಮಂಜುನಾಥ್ ಕಾಂಬ್ಲೆ, ಅರಣ್ಯ ರಕ್ಷಕ ಅಶೋಕ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.