ಪುತ್ತೂರು: ಶಾಲಾ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಲ್ಲಿ ಕ್ಯಾಬ್ ಸಮಿತಿ ರಚನೆ

Update: 2016-08-09 17:59 GMT

ಪುತ್ತೂರು, ಆ.9: ಕುಂದಾಪುರ ತಾಲೂಕಿನ ತ್ರಾಸಿಯಲ್ಲಿ ನಡೆದ ಸ್ಕೂಲ್ ಬಸ್ ಅಪಘಾತ ಪ್ರಕರಣದ ಬಳಿಕ ಜಿಲ್ಲಾಡಳಿತದ ಸೂಚನೆಯಂತೆ ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ತಾಲೂಕು ಮಟ್ಟದಲ್ಲಿ ನಾನಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಇದೀಗ ಶಾಲೆಗಳಲ್ಲಿ ಕ್ಯಾಬ್ ಕಮಿಟಿ ರಚನೆ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ.

ಪ್ರತೀ ಶಾಲೆಗಳಲ್ಲಿ ಈಗಾಗಲೇ ಇರುವ ಮಕ್ಕಳ ಸುರಕ್ಷಾ ಸಮಿತಿಯು ಸಭೆ ಸೇರಿ ಸ್ಕೂಲ್ ಬಸ್‌ಗಳಲ್ಲಿ ಬರುವ ಮಕ್ಕಳ ಬಗ್ಗೆ ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮಗಳನ್ನು ಪರಿಶೀಲಿಸಿದ್ದು, ಮುಂದಿನ ಹಂತದಲ್ಲಿ ಕ್ಯಾಬ್ ಕಮಿಟಿ ರಚನೆ ಪ್ರಕ್ರಿಯೆ ಆರಂಗೊಂಡಿದೆ. ತಾಲೂಕಿನ ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ನಡದ ಪೋಷಕರ ಸಭೆಯಲ್ಲಿ ಕ್ಯಾಬ್ ಕಮಿಟಿ ರಚನೆಗೆ ಚಾಲನೆ ನೀಡಲಾಯಿತು.

ಸ್ಕೂಲ್ ಬಸ್‌ಗಳಲ್ಲಿ ಬರುವ ಮಕ್ಕಳ ಪೋಷಕರು ಈ ಸಭೆಯಲ್ಲಿ ಭಾಗವಹಿಸಿದ್ದರು. ಶಾಲೆಯ ಸಂಚಾಲಕ ಭಾಸ್ಕರ ಆಚಾರ್ ಹಿಂದಾರ್ ಮಾತನಾಡಿ, ತ್ರಾಸಿ ಘಟನೆಯ ಬಳಿಕ ಸರಕಾರ ಕಾನೂನು ಬಿಗಿಗೊಳಿಸಿದೆ. ಸ್ಕೂಲ್ ಬಸ್‌ಗಳಲ್ಲಿ ಬರುವ ಮಕ್ಕಳ ಸಮಗ್ರ ವಿವರ, ಅದರ ಜತೆಗೆ ಸರಕಾರಿ ಬಸ್‌ಗಳು, ಆಟೊ ರಿಕ್ಷಾಗಳು ಮತ್ತಿತರ ಖಾಸಗಿ ವಾಹನಗಳಲ್ಲಿ ಬರುವ ಮಕ್ಕಳು ಹಾಗೂ ಪೋಷಕರೇ ಬಂದು ಬಿಟ್ಟು ಹೋಗುವ ಮಕ್ಕಳ ವಿವರವನ್ನೂ ಕೇಳಿದೆ. ಇದೆಲ್ಲವನ್ನೂ ಒದಗಿಸಲಾಗುತ್ತಿದೆ. ಇದೀಗ ಸರಕಾರದ ಸೂಚನೆಯಂತೆ ಸ್ಕೂಲ್ ಬಸ್‌ಗಳಲ್ಲಿ ಬರುವ ಮಕ್ಕಳ ಪೋಷಕರಲ್ಲೇ ಸಮಿತಿ ರಚಿಸಬೇಕಾಗಿದೆ ಎಂದರು.

ಅದರಂತೆ ಪ್ರತೀ ಸ್ಕೂಲ್ ಬಸ್‌ಗಳ ಪೋಷಕರಿಂದ ತಲಾ ಮೂವರಂತೆ ಸದಸ್ಯರನ್ನು ಆರಿಸಲಾಯಿತು. ಶಾಲೆಯಲ್ಲಿ ಒಟ್ಟು 9 ಸ್ಕೂಲ್ ಬಸ್‌ಗಳಿದ್ದು, 27 ಸದಸ್ಯರ ಸಮಿತಿ ರಚಿಸಲಾಗುತ್ತದೆ. ಈ ಸಮಿತಿಯು ತಿಂಗಳಿಗೊಮ್ಮೆ ಸಭೆ ಸೇರಿ ಸ್ಕೂಲ್ ಬಸ್‌ಗಳ ನಿರ್ವಹಣೆ ಮತ್ತು ಮಕ್ಕಳ ಸುರಕ್ಷತೆ ವಿಚಾರದಲ್ಲಿ ಚರ್ಚೆ ನಡೆಸಲಿದೆ. ನಿಯಮಗಳ ಪಾಲನೆಯನ್ನು ಪರಾಮರ್ಶೆ ನಡೆಸಲಿದೆ ಎಂದರು.

ನಮ್ಮ ಸಂಸ್ಥೆಯ ಸ್ಕೂಲ್ ಬಸ್‌ಗಳಲ್ಲಿ ಎಲ್ಲ ನಿಯಮ ಪಾಲಿಸಲಾಗುತ್ತಿದೆ. ಪ್ರಸ್ತುತ ಜಿಪಿಎಸ್ ಕೂಡ ಅಳವಡಿಸಲಾಗುತ್ತಿದೆ. ಶಾಲೆಯಿಂದ ಸ್ಕೂಲ್ ಬಸ್‌ಗಳು ಬಿಟ್ಟ ಕೂಡಲೇ ಹೆತ್ತವರಿಗೆ ಮೆಸೇಜ್ ಹೋಗುವ ವ್ಯವಸ್ಥೆಯನ್ನೂ ಮಾಡಲಾಗುತ್ತದೆ ಎಂದವರು ನುಡಿದರು.

ಶಾಲೆಯ ಮುಖ್ಯ ಶಿಕ್ಷಕಿ ಜಯಮಾಲಾ ಮತ್ತು ಶಿಕ್ಷಕಿ ಗೀತಾ ಎಚ್.ಎಸ್. ಪೂರಕ ಮಾಹಿತಿ ನೀಡಿದರು. ಮಕ್ಕಳನ್ನು ಬೆಳಗ್ಗೆ ಸ್ಕೂಲ್ ಬಸ್‌ಗೆ ಹತ್ತಿಸುವ ಸಂದರ್ಭ ಮತ್ತು ಸಂಜೆ ಇಳಿಸುವ ಸಂದರ್ಭ ಪೋಷಕರು ಸ್ಥಳದಲ್ಲಿ ಇದ್ದು ಸಹಕರಿಸಬೇಕು ಎಂದು ಮುಖ್ಯ ಶಿಕ್ಷಕರು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News