ಬಯಲು ಮುಕ್ತ ಶೌಚಾಲಯದತ್ತ ದ.ಕ. ಜಿಲ್ಲೆ: ಶಾಹುಲ್ ಹಮೀದ್

Update: 2016-08-10 16:16 GMT

ಮಂಗಳೂರು,ಆ.10: ದಕ್ಷಿಣ ಕನ್ನಡ ಜಿಲ್ಲೆ ಬಯಲು ಮುಕ್ತ ಶೌಚಾಲಯದತ್ತ ಹೆಜ್ಜೆ ಇರಿಸುತ್ತಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಹೇಳಿದರು.

ರಾಷ್ಟ್ರೀಯ ಜಂತುಹುಳ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ ಮಕ್ಕಳಿಗೆ ಜಂತುಹುಳ ನಿವಾರಣಾ ಮಾತ್ರೆಗಳನ್ನು ವಿತರಿಸುವ ಕಾರ್ಯಕ್ರಮವನ್ನು ನಗರದ ಬಲ್ಮಠ ಸರಕಾರಿ ಶಿಕ್ಷಣ ಸಂಸ್ಥೆಗಳ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ಜಂತು ಹುಳ ನಿವಾರಣೆಯ ನಿಟ್ಟಿನಲ್ಲಿ ಸ್ವಚ್ಛತೆಗೂ ಹೆಚ್ಚಿನ ಮುತುವರ್ಜಿ ನೀಡಬೇಕಾಗುತ್ತದೆ. ಹಿಂದೆಲ್ಲಾ ಬಯಲು ಶೌಚಾಲಯಗಳಿಂದಾಗಿ ಸಾಂಕ್ರಾಮಿಕ ರೋಗಗಳು ಹಾಗೂ ಜಂತುಹುಳಗಳ ಹಾವಳಿ ಮಕ್ಕಳಲ್ಲಿ ತೀವ್ರವಾಗಿತ್ತು ಎಂದು ತಮ್ಮ ಬಾಲ್ಯದ ದಿನಗಳನ್ನು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮಕ್ಕಳಿಗೆ ವಿವರಿಸಿದರು.

ಮಕ್ಕಳಿಗೆ ಶಿಕ್ಷಕರ ಮೇಲೆ ಅತೀ ಹೆಚ್ಚು ಅಭಿಮಾನ ಹಾಗೂ ವಿಶ್ವಾಸವಿರುವುದರಿಂದ ಜಂತುಹುಳಗಳ ನಿವಾರಣೆಯನ್ನು ಅತ್ಯಂತ ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಸರಕಾರವು ಶಾಲೆಗಳಲ್ಲಿ ಶಿಕ್ಷಕರ ಮೂಲಕ ಮಕ್ಕಳಿಗೆ ಮಾತ್ರೆಗಳನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ ಎಂದವರು ಹೇಳಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಐ. ಶ್ರೀವಿದ್ಯಾ ಮಾತನಾಡಿ, ಜಂತುಹುಳಗಳ ತೊಂದರೆಯಿಂದ ಮಕ್ಕಳಿಗೆ ಭವಿಷ್ಯದಲ್ಲಿ ಆರೋಗ್ಯದಲ್ಲಿ ತೊಂದರೆಯಾಗುವ ಸಾಧ್ಯತೆಗಳಿರುವುದರಿಂದ ಸಾಮೂಹಿಕ ಮಾತ್ರೆ ವಿತರಣೆ ಮೂಲಕ ಜಂತುಹುಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಈ ಮಾತ್ರೆಗಳಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಅಂಗನವಾಡಿ ಕಾರ್ಯಕರ್ತೆಯರು, ಆಶಾ ಹಾಗೂ ಎಎನ್‌ಎಂ ಕಾರ್ಯಕರ್ತೆಯರ ಮೂಲಕವೂ ಮನೆಗಳಿಗೆ ಭೇಟಿ ನೀಡಿ ಮಕ್ಕಳಿಗೆ ಜಂತು ಹುಳ ಮಾತ್ರೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಸಾಮೂಹಿಕವಾಗಿ ವಿತರಿಸುವ ಕಾರ್ಯಕ್ರಮದಡಿ ಸರಕಾರಿ, ಅನುದಾನಿತ ಶಾಲೆ ಮತ್ತು ಪದವಿ ಪೂರ್ವ ಕಾಲೇಜುಗಳು ಮಾತ್ರವಲ್ಲದೆ ಅನುದಾನರಹಿತ ಶಾಲೆಗಳಿಗೂ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ದ.ಕ. ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್, 1ರಿಂದ 19 ವರ್ಷದೊಳಗಿನ ಮಕ್ಕಳಿಗೆ ಸಾಮೂಹಿಕವಾಗಿ ಅಂಗನವಾಡಿ ಶಾಲಾ ಕಾಲೇಜುಗಳ ಮೂಲಕ ಸಾಮೂಹಿಕ ಜಂತುಹುಳ ಮಾತ್ರೆಗಳನ್ನು ವಿತರಿಸಲಾಗುತ್ತಿದೆ ಎಂದರು. ಉಳಿದಂತೆ ಆ. 17ರಂದು ಮನೆಗಳಿಗೆ ಭೇಟಿ ನೀಡುವ ಮೂಲಕ ಮಾತ್ರೆ ವಿತರಣೆ ಕಾರ್ಯ ನಡೆಯಲಿದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಸುಂದರ ಪೂಜಾರಿ, ಕ್ಷೇತ್ರ ಶಿಕ್ಷಣಾಧಿಕಾರಿ ರಾಜಲಕ್ಷ್ಮಿ, ಪ್ರಾಂಶುಪಾಲೆ ಉಷಾ, ಆರ್‌ಸಿಎಚ್ ಅಧಿಕಾರಿ ಡಾ. ಸಿಕಂದರ್ ಪಾಷಾ ಉಪಸ್ಥಿತರಿದ್ದರು. ಬಲ್ಮಠ ಸರಕಾರಿ ಹೈಸ್ಕೂಲ್ ಮುಖ್ಯಪಾಧ್ಯಾಯ ಅಬ್ದುಲ್ ಖಾದರ್ ಸ್ವಾಗತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News