×
Ad

ಆರೋಪಿ ನಿರಂಜನ್ ಭಟ್ ಬೇರೆ ಆಸ್ಪತ್ರೆಗೆ ದಾಖಲು?

Update: 2016-08-10 15:29 IST

ಉಡುಪಿ, ಆ.20: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರ ವಶದಲ್ಲಿದ್ದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾದ ಆರೋಪಿ ನಿರಂಜನ್ ಭಟ್‌ಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆಯಲ್ಲಿ ಆತನನ್ನು ಮಂಗಳೂರಿನ ವೆನ್ಲಾಕ್ ಅಥವಾ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಪೊಲೀಸರ ವಶದಲ್ಲಿದ್ದ ಆರೋಪಿ ನಿರಂಜನ್ ಭಟ್ ತನ್ನ ಕೈಯಲ್ಲಿದ್ದ ವಜ್ರದ ಉಂಗುರ ಮತ್ತು ಎರಡು ಕಿವಿಯೋಲೆಗಳನ್ನು ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಈತನನ್ನು ಅಜ್ಜರಕಾಡುವಿನಲ್ಲಿರುವ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನುಂಗಿದ್ದ ಸೊತ್ತುಗಳು ವಿಸರ್ಜನೆಯಾಗಲು ಚಿಕಿತ್ಸೆ ನೀಡಲಾಗಿತ್ತು. ಈತ ನುಂಗಿದ್ದ ವಜ್ರದ ಉಂಗುರ ಮತ್ತು ಒಂದು ಕಿವಿಯ ಓಲೆ ಇಂದು ಬೆಳಗ್ಗೆ ಶೌಚದೊಂದಿಗೆ ಹೊರಬಂದಿದೆ. ಇನ್ನೊಂದು ಓಲೆಯು ಹೊಟ್ಟೆ ಸೇರಿದಾಗ ಯಾವ ಸ್ಥಳದಲ್ಲಿತ್ತೋ, ಈಗಲೂ ಅಲ್ಲೇ ಇದೆ. ಅದನ್ನು ಹೊರತೆಗೆಯಲು ಹೆಚ್ಚುವರಿ ಚಿಕಿತ್ಸೆ ಅಗತ್ಯವಾಗಿದ್ದು, ಮಂಗಳೂರಿನ ಸರಕಾರಿ ಆಸ್ಪತ್ರೆ ಅಥವಾ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆರೋಪಿಯನ್ನು ಬೇರೆ ಆಸ್ಪತ್ರೆಗೆ ವರ್ಗಾಯಿಸಲು ಪ್ರಕರಣದ ತನಿಖಾಧಿಕಾರಿ ಗಿರೀಶ್ ನೇತೃತ್ವದ ಪೊಲೀಸರ ತಂಡವು ನ್ಯಾಯಾಲಯದ ಅನುಮತಿ ಕೇಳಿದ್ದು, ಅನುಮತಿ ಲಭಿಸಿದ ಕೂಡಲೇ ಅಜ್ಜರಕಾಡು ಆಸ್ಪತ್ರೆಯಿಂದ ಬೇರೆ ಆಸ್ಪತ್ರೆಗೆ ಆರೋಪಿ ನಿರಂಜನ್ ಭಟ್‌ನನ್ನು ದಾಖಲು ಮಾಡಲಾಗುವುದು ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News