×
Ad

ಪಾಕಿಸ್ತಾನದ ಜೈಲಲ್ಲಿರುವ ಭಗ್ನ ಪ್ರೇಮಿ ಹಾಮಿದ್‌ನ ಬಿಡುಗಡೆಗಾಗಿ ಪ್ರಧಾನಿಯ ಮೊರೆಹೋದ ಆತನ ತಾಯಿ

Update: 2016-08-10 17:27 IST

  ಹೊಸದಿಲ್ಲಿ, ಆ.10: ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶ ಸಚಿವೆ ಸುಷ್ಮಾಸ್ವರಾಜ್‌ರನ್ನು ಭೇಟಿಯಾಗಿ ಪಾಕಿಸ್ತಾನದ ಜೈಲಿನಲ್ಲಿರುವ ತನ್ನ ಮಗ ಹಾಮಿದ್ ಅನ್ಸಾರಿಯನ್ನು ಬಿಡುಗಡೆಗೊಳಿಸಲು ನೆರವಾಗುವಂತೆ ವಿನಂತಿಸಲು ಆತನ ತಾಯಿ ಫೌಝಿಯಾ ಅನ್ಸಾರಿ ಬುಧವಾರ ಮುಂಬೈಯಿಂದ ದಿಲ್ಲಿಗೆ ಬಂದಿದ್ದಾರೆ ಎಂದು ವರದಿಯಾಗಿದೆ. ಆದರೆ ಪ್ರಧಾನಿ ಮತ್ತು ವಿದೇಶ ಸಚಿವೆಯನ್ನು ಭೇಟಿಯಾಗಲು ಈವರೆಗೂ ಅನುಮತಿ ಸಿಕ್ಕಿಲ್ಲ. ಪಾಕಿಸ್ತಾನದಲ್ಲಿ ಹಾಮಿದ್‌ನ ಶಿಕ್ಷೆಯ ಅವಧಿ ಪೂರ್ಣಗೊಂಡು ಒಂದು ವರ್ಷ ಕಳೆದಿದ್ದರೂ ಆತನನ್ನು ಬಿಡುಗಡೆಗೊಳಿಸಿಲ್ಲ ಎಂದು ಪೌಝಿಯಾ ಅನ್ಸಾರಿ ಹೇಳಿದ್ದಾರೆ. ಹಲವು ಬಾರಿ ಪಾಕಿಸ್ತಾನಕ್ಕೆ ತೆರಳಲು ಪ್ರಯತ್ನಿಸಿದರೂ ವೀಸಾ ದೊರಕಲಿಲ್ಲ ಎಂದು ಅವರು ದೂರಿದ್ದಾರೆ.

ಫೇಸ್‌ಬುಕ್ ಮೂಲಕ ಪಾಕಿಸ್ತಾನಿ ಹುಡುಗಿಯನ್ನು ಪ್ರೀತಿಸಿದ ಹಾಮಿದ್ ಅನ್ಸಾರಿ ಅವಳನ್ನು ಭೇಟಿಯಾಗಲು ನಕಲಿ ದಾಖಲೆ ಸೃಷ್ಟಿಸಿ ಪಾಕಿಸ್ತಾನಕ್ಕೆ ನುಸುಳಿದ್ದ. ನಂತರ ಅಲ್ಲಿ ಸೆರೆಸಿಕ್ಕಿದ್ದ. ಅಲ್ಲಿನ ಸೇನಾ ನ್ಯಾಯಾಲಯ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿತ್ತು. ಆದರೆ ನಾಲ್ಕುವರ್ಷ ಕಳೆದರೂ ಅವನು ಪಾಕಿಸ್ತಾನದ ಜೈಲಿನಿಂದ ಬಿಡುಗಡೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಪ್ರಧಾನಿ ಮತ್ತು ವಿದೇಶ ಸಚಿವೆಯ ನೆರವನ್ನು ಪಡೆಯಲು ಹಾಮಿದ್ ತಾಯಿ ದಿಲ್ಲಿಗೆ ಬಂದಿದ್ದಾರೆಎಂದು ವರದಿ ತಿಳಿಸಿದೆ.

 ಭಾರತೀಯನಾದ್ದರಿಂದ ಜೈಲಿನ ಇತರ ಕೈದಿಗಳು ಹಾಮಿದ್‌ಗೆ ಹಿಂಸೆ ನೀಡುತ್ತಿದ್ದಾರೆ. ಜೈಲು ಅಧಿಕಾರಿಗಳು ಪ್ರತಿದಿವಸವೂ ಕಪಾಲಮೋಕ್ಷ ನಡೆಸುತ್ತಿದ್ದಾರೆ. ಆದ್ದರಿಂದ ಪ್ರಧಾನಿ ಮತ್ತು ವಿದೇಶ ಸಚಿವರು ಹಾಮಿದ್‌ನ ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲು ಸಹಕರಿಸುವರೆಂಬ ನಿರೀಕ್ಷೆಯಲ್ಲಿದ್ದೇನೆ ಎಂದು ಹಾಮಿದ್‌ನ ತಾಯಿ ಹೇಳಿಕೊಂಡಿದ್ದಾರೆ. ಇದಕ್ಕಿಂತ ಮೊದಲು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ರಲ್ಲಿ ಅವರು ನೆರವು ಯಾಚಿಸಿದ್ದು, ನೆರವು ನೀಡುವುದಾಗಿ ಅವರು ಕೂಡ ಭರವಸೆ ನೀಡಿದ್ದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News