ವರದಕ್ಷಿಣೆಗಾಗಿ ಪತ್ನಿಗೆ ಹಲ್ಲೆ: ಆರೋಪಿ ಪತಿಯ ಬಂಧನ
Update: 2016-08-10 18:31 IST
ಪುತ್ತೂರು, ಆ.10: ಪುತ್ತೂರು ನಗರದ ಹೊರವಲಯದ ಬನ್ನೂರು ಗ್ರಾಮದ ಜೈನರಗುರಿ ಎಂಬಲ್ಲಿ ವರದಕ್ಷಿಣೆಗಾಗಿ ಪೀಡಿಸಿ ಪತ್ನಿಯ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ ಆರೋಪಿಯನ್ನು ಬುಧವಾರ ಪುತ್ತೂರು ಪೊಲೀಸರು ಬಂಧಿಸಿದ್ದಾರೆ.
ಪುತ್ತೂರು ತಾಲೂಕಿನ ಬನ್ನೂರು ಗ್ರಾಮದ ಜೈನರಗುರಿ ನಿವಾಸಿ ವಿಶ್ವನಾಥ ಹೆಗ್ಡೆ ಅವರ ಪುತ್ರ ರವಿರಾಜ್ ಹೆಗ್ಡೆ (27) ಬಂಧಿತ ಆರೋಪಿ.
ಐದು ವರ್ಷಗಳ ಹಿಂದೆ ರೇಷ್ಮಾ ಎಂಬವರನ್ನು ವಿವಾಹವಾಗಿದ್ದ ರವಿರಾಜ್ ಹೆಗ್ಡೆ, ವರದಕ್ಷಿಣೆ ತರುವಂತೆ ನಿರಂತರ ಕಿರುಕುಳ ನೀಡುತ್ತಿದ್ದು, ಕಳೆದ ಸೋಮವಾರ ರೇಷ್ಮಾ ಹೆಗ್ಡೆ ಅವರ ಹುಟ್ಟುಹಬ್ಬ ಆಚರಣೆ ಕಾರ್ಯಕ್ರಮವಿತ್ತು. ಈ ಸಂದರ್ಭದಲ್ಲಿ ರವಿರಾಜ್ ಪಾನಮತ್ತನಾಗಿ ಬಂದು ಗಲಾಟೆ ಮಾಡಿದ್ದಲ್ಲದೆ, ಪತ್ನಿಗೆ ಹಲ್ಲೆ ನಡೆಸಿದ್ದ ಎಂದು ಆರೋಪಿಸಲಾಗಿತ್ತು.
ಘಟನೆಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಆರೋಪಿ ರವಿರಾಜ್ ಹೆಗ್ಡೆಯನ್ನು ಬಂಧಿಸಿದ್ದಾರೆ.