ಪುತ್ತೂರು: ತಾಯಿ, ಮಗು ಕೊಲೆ ಪ್ರಕರಣ: ಅಪರಾಧ ಸಾಬೀತು
ಪುತ್ತೂರು, ಆ.10: ಎಂಟು ವರ್ಷಗಳ ಹಿಂದೆ ನಡೆದ ತಾಯಿ, ಮಗು ಕೊಲೆ ಪ್ರಕರಣದಲ್ಲಿ ಆರೋಪ ಎದುರಿಸುತ್ತಿದ್ದ ವ್ಯಕ್ತಿ ತಪ್ಪಿತಸ್ಥ ಎಂದು ಪುತ್ತೂರಿನ ಐದನೆ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದಲ್ಲಿ ಸಾಬೀತಾಗಿದೆ. ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಅ.12ಕ್ಕೆ ನ್ಯಾಯಾಲಯ ಕಾದಿರಿಸಿದೆ.
ಪುತ್ತೂರು ತಾಲೂಕಿನ ಸಿರಿಬಾಗಿಲು ಗ್ರಾಮದ ಪೊಲ್ಯೊಟ್ಟು ಎಂಬಲ್ಲಿ 2008ರ ಆಗಸ್ಟ್ 2ರಂದು ನಡೆದ ಸೌಮ್ಯಾ ಮತ್ತು ಆಕೆಯ ಮಗು 9 ವರ್ಷ ಪ್ರಾಯದ ಜಿಷ್ಣು ಎಂಬಿಬ್ಬರ ಕೊಲೆ ಪ್ರಕರಣ ಇದಾಗಿದ್ದು, ಆರೋಪಿ ಜಯೇಶ್ ಈ ಕೊಲೆ ಮಾಡಿದ್ದ ಎಂಬುದು ಸಾಬೀತಾಗಿದೆ.
ಪೊಲೀಸರ ವಶದಲ್ಲಿದ್ದ ಜಯೇಶ್ ಯಾನೆ ಜಯೇಶ್ ಕಾಂತ ಕಳೆದ ಏಪ್ರಿಲ್ 5ರಂದು ಪುತ್ತೂರು ನ್ಯಾಯಾಲಯದ ಆವರಣದಿಂದ ತಪ್ಪಿಸಿಕೊಂಡಿದ್ದ. ವಿಚಾರಣೆಗೆಂದು ಕರೆ ತಂದಿದ್ದ ಸಂದರ್ದಲ್ಲಿ ಈತ ತಪ್ಪಿಸಿಕೊಂಡಿದ್ದು, ಬಳಿಕ ಪೊಲೀಸರು ಸಾರ್ವಜನಿಕರ ನೆರವು ಪಡೆದುಕೊಂಡು ಆತನನ್ನು ಮತ್ತೆ ಬಂಧಿಸಿದ್ದರು. ತಪ್ಪಿಸಿಕೊಳ್ಳಲು ಯತ್ನಿಸಿದ ಪ್ರಕರಣದ ವಿಚಾರಣೆ ಪ್ರತ್ಯೇಕವಾಗಿ ನಡೆಯುತ್ತಿದ್ದು, ಕೊಲೆ ಪ್ರಕರಣದ ವಿಚಾರಣೆ ಮುಗಿದು ತೀರ್ಪು ಕಾದಿರಿಸಲಾಗಿದೆ.
2008ರ ಆಗಸ್ಟ್ 2ರಂದು ರಾತ್ರಿ ಹತ್ತು ಗಂಟೆ ಸುಮಾರಿಗೆ ಸೌಮ್ಯ ಅವರ ಮನೆಗೆ ನುಗ್ಗಿದ ಆಗಂತುಕ ಚೂರಿಯಿಂದ ಇರಿದು ಗಂಭೀರ ಗಾಯಗೊಳಿಸಿದ್ದ. ಈ ಸಂದರ್ಭದಲ್ಲಿ ಅವರ 9 ವರ್ಷದ ಮಗ ಜಿಷ್ಣು ಓಡಿ ಬಂದಾಗ ಮಗುವಿಗೂ ಯದ್ವಾತದ್ವಾ ತಿವಿಯಲಾಗಿತ್ತು. ಸೌಮ್ಯ ಅವರಲ್ಲಿದ್ದ ಹತ್ತು ಗ್ರಾಂ ತೂಕದ ಮಾಂಗಲ್ಯ ಮತ್ತು ಬೆಂಡೊಲೆಯನ್ನು ಸೆಳೆದುಕೊಂಡು ಆರೋಪಿ ಪರಾರಿಯಾಗಿದ್ದ.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರು ಇದೇ ಪರಿಸರದವನಾದ ಜಯೇಶ್‌ನನ್ನು ಬಂಧಿಸಿದ್ದರು. ಪ್ರಕರಣದ ನಡೆದ ಬಳಿಕ ತಲೆಮರೆಸಿಕೊಂಡಿದ್ದ ಜಯೇಶ್ ಕೇರಳದ ಆಲಪ್ಪುಳದಲ್ಲಿ ಸೆರೆ ಸಿಕ್ಕಿದ್ದ. ಈ ನಡುವೆ ವಿಚಾರಣಾ ಹಂತದಲ್ಲಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿ ಮತ್ತೆ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದ.