ಜಾನುವಾರು ಸಾಗಾಟ: ಇಬ್ಬರ ಸೆರೆ
ಬಂಟ್ವಾಳ, ಆ. 10: ವಾಹನವೊಂದರಲ್ಲಿ ದನ ಸಾಗಾಟ ಮಾಡುವ ಖಚಿತ ಮಾಹಿತಿ ಮೇರೆಗೆ ವಿಟ್ಲ ಪೊಲೀಸರು ದಾಳಿ ನಡೆಸಿ ವಾಹನ ಸಹಿತ ಇಬ್ಬರು ಆರೋಪಿಗಳ ಜೊತೆಗೆ 5 ಎತ್ತು, 1 ದನವನ್ನು ವಶಕ್ಕೆ ಪಡೆದ ಘಟನೆ ಮಾಣಿ ಜಂಕ್ಷನ್‌ನಲ್ಲಿ ಬುಧವಾರ ನಡೆದಿದೆ.
ಹಾಸನ ಮೂಲದ ಅರಸೀಕೆರೆ ನಿವಾಸಿಗಳಾದ ಶಿವಶಂಕರ (27), ಸಂತೋಷ (30) ಬಂಧಿತ ಆರೋಪಿಗಳಾಗಿದ್ದಾರೆ. ಉದನೆ ಬಳಿ ವಾಹನ ಸಂಚಾರ ಸುಗಮಗೊಳಿಸುತ್ತಿದ್ದ ಪೊಲೀಸರ ತಂಡಕ್ಕೆ ಹಾಸನ ಕಡೆಯಿಂದ 5 ಜಾನುವಾರುಗಳನ್ನು ಹಿಂಸಾತ್ಮಕವಾಗಿ ರೀತಿಯಲ್ಲಿ ವಾಹನವೊಂದರಲ್ಲಿ ಸಾಗಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಜಾನುವಾರುಗಳನ್ನು ಹಾಸನ ಸಂತೆಯಿಂದ ಫರಂಗಿಪೇಟೆಗೆ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ ಮಾಹಿತಿ ನೀಡಿದ್ದಾರೆನ್ನಲಾಗಿದೆ.
ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ. ಕಾರ್ಯಾಚರಣೆಯಲ್ಲಿ ವಿಟ್ಲ ಠಾಣಾ ಪೊಲೀಸ್ ಸಹಾಯಕ ಉಪನಿರೀಕ್ಷಕ ಕೊರಗಪ್ಪ, ಸಿಬ್ಬಂದಿಯಾದ ಚಿದಾನಂದ ರೈ, ಭವಿತ್ ರೈ, ಗೃಹರಕ್ಷಕ ದಳದ ಸಿಬ್ಬಂದಿ ಜಯಂತ ಭಾಗವಹಿಸಿದ್ದಾರೆ.