ಬಂಟ್ವಾಳ ಅರಣ್ಯ ಇಲಾಖೆಯಿಂದ ಜಿಪಂ ದಲಿತ ಸದಸ್ಯೆಗೆ ಅವಮಾನ: ತಾ.ಪಂ.ಸಭೆಯಲ್ಲಿ ಆಕ್ರೋಶ
ಬಂಟ್ವಾಳ, ಆ. 10: ಕೋಟಿ ವೃಕ್ಷ ಆಂದೋಲನದ ಪ್ರಯುಕ್ತ ಬಂಟ್ವಾಳ ವಲಯ ಅರಣ್ಯ ಇಲಾಖೆ ಸೋಮವಾರ ಬಿ.ಸಿ.ರೋಡಿನಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಅಹ್ವಾನಿಸದೆ ಪರಿಶಿಷ್ಟ ಪಂಗಡಕ್ಕೆ ಸೇರಿದ ತಾಲೂಕಿನ ಜಿಲ್ಲಾ ಪಂಚಾಯತ್ ಸದಸ್ಯೆಯೊಬ್ಬರನ್ನು ಕಡೆಗಣಿಸುವ ಮೂಲಕ ಅರಣ್ಯ ಇಲಾಖೆ ದಲಿತ ಸಮುದಾಯವನ್ನು ಅವಮಾನಿಸಿದೆ ಎಂದು ಬುಧವಾರ ನಡೆದ ಬಂಟ್ವಾಳ ತಾಲೂಕು ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
ಸಬೆಯಲ್ಲಿ ಕಾರ್ಯಕ್ರಮದ ಆಹ್ವಾನ ಪತ್ರವನ್ನು ಪ್ರದರ್ಶಿಸಿದ ಸದಸ್ಯ ಪದ್ಮನಾಭ ನಾಯ್ಕಾ ಅಳಿಕೆ, ಬಂಟ್ವಾಳ ವಲಯ ಅರಣ್ಯಾಧಿಕಾರಿ ತಾಲೂಕಿನ ಒಟ್ಟು 9 ಮಂದಿ ಜಿಪಂ ಸದಸ್ಯರ ಪೈಕಿ 8 ಮಂದಿಯ ಹೆಸರನ್ನು ಅಹ್ವಾನ ಪತ್ರದಲ್ಲಿ ಮುದ್ರಿಸಿದ್ದಾರೆ. ಪಪಂಕ್ಕೆ ಸೇರಿದ ಜಿಪಂ ಸದಸ್ಯೆ ಜಯಶ್ರೀ ಕೋಡಂದೂರುರ ಹೆಸರನ್ನು ಕೈ ಬಿಟ್ಟಿರುವುದು ದಲಿತ ಸಮುದಾಯಕ್ಕೆ ಮಾಡಿರುವ ಅವಮಾನ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪಕ್ಷಬೇಧ ಮರೆತು ಧ್ವನಿಗೂಡಿಸಿದ ತಾಪಂ, ಜಿಪಂ ಸದಸ್ಯರು ಸಭೆಗೆ ಹಾಜರಾಗಿದ್ದ ಅರಣ್ಯ ಇಲಾಖೆಯ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಪಂ ಸದಸ್ಯ ರವೀಂದ್ರ ಕಂಬಳಿ, ಈ ಹಿಂದೆ ಕೂಡ ಕೆಲವು ಇಲಾಖಾ ಅಧಿಕಾರಿಗಳು ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸಿದ್ದಾರೆ. ಮುಂದಿನ ದಿನದಲ್ಲಿ ಇದೇ ರೀತಿ ಮುಂದುವರಿದರೆ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್ ಪ್ರತಿಕ್ರಿಯಿಸಿ ಅಧಿಕಾರಿಗಳು ಅನಗತ್ಯವಾಗಿ ಇಂತಹ ಸಣ್ಣಪುಟ್ಟ ವಿವಾದವನ್ನು ಮೈಮೇಲೆ ಎಳೆದುಕೊಳ್ಳದೆ ತಮ್ಮ ಕನಿಷ್ಠ ಜ್ಞಾನದೊಂದಿಗೆ ವ್ಯವಹರಿಸಬೇಕೆಂದರೆ, ಮುಂದಿನ ದಿನಗಳಲ್ಲಿ ಯಾವುದೇ ಇಲಾಖೆಯ ಕಾರ್ಯಕ್ರಮಗಳ ಆಹ್ವಾನ ಪತ್ರದ ಕರಡು ಪ್ರತಿಯನ್ನು ಕಾರ್ಯನಿರ್ವಹಣಾಧಿಕಾರಿ ಪರಿಶೀಲಿಸಿ ಬಳಿಕ ಅಂತಿಮ ಮುದ್ರಣಗೊಳಿಸಬೇಕೆಂದು ಸದಸ್ಯೆ ಮಮತಾ ಗಟ್ಟಿ ಸಲಹೆ ನೀಡಿದರು. ಭವಿಷ್ಯದಲ್ಲಿ ಈ ರೀತಿಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಅಧ್ಯಕ್ಷ ಚಂದ್ರಹಾಸ ಕರ್ಕೇರ ಭರವಸೆ ನೀಡಿ ಚರ್ಚೆಗೆ ತೆರೆ ಎಳೆದರು.
ಮಿತ್ತನಡ್ಕ ಶಾಲೆಗೆ ಮಧ್ಯಾಹ್ನದ ಬಿಸಿಯೂಟಕ್ಕೆ ಮನುಷ್ಯರು ತಿನ್ನಲು ಅಯೋಗ್ಯವಾದಂತ ಕಳಪೆ ಗುಣಮಟ್ಟದ ಧಾನ್ಯ ಪೂರೈಕೆಯಾಗಿದೆ ಎಂದು ಸಭೆಯ ಗಮನ ಸೆಳೆದ ಸದಸ್ಯ ಉಸ್ಮಾನ್ ಕರೋಪಾಡಿ, ಇಂತಹ ಕಳಪೆ ಧಾನ್ಯವನ್ನು ಮಕ್ಕಳು ಸೇವಿಸಿ ಅಸ್ವಸ್ಥರಾದರೆ ಯಾರು ಹೊಣೆ ಎಂದು ಕಳವಳ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಧ್ವನಿಗೂಡಿಸಿದ ಸದಸ್ಯ ಪ್ರಭಾಕರ ಪ್ರಭು, ಈ ವಿಚಾರವನ್ನು ಗಂಭೀರ ಪರಿಗಣಿಸಬೇಕು ಮತ್ತು ಈ ಕಳಪೆ ಧಾನ್ಯವನ್ನು ಪೂರೈಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಿಕ್ಷಣ ಇಲಾಖೆಯ ಅಧಿಕಾರಿ ಒಂದು ಗೋಣಿಚೀಲದಲ್ಲಿ ಸುಮಾರು 12 ಕೆ.ಜಿ.ಯಷ್ಟು ಧಾನ್ಯ ಕಳಪೆಯಾಗಿದ್ದು ಪತ್ತೆಯಾಗಿದೆ. ಇದನ್ನು ಚೀಲದಿಂದ ಪ್ರತ್ಯೇಕವಾಗಿ ವಿಂಗಡಿಸಲಾಗಿದ್ದು, ಕಳೆದ ಜೂನ್ ತಿಂಗಳಲ್ಲಿ ಈ ಧಾನ್ಯ ಪೂರೈಕೆಯಾಗಿತ್ತು. ಧಾನ್ಯಗಳು ರಾಜ್ಯಮಟ್ಟದಿಂದಲೇ ಪ್ರತಿ ಶಾಲೆಗಳಿಗೆ ಪೂರೈಕೆಯಾಗುತ್ತಿದೆ ಎಂದು ಉತ್ತರಿಸಿದರು. ಬಿಸಿಯೂಟದ ಸಾಮಗ್ರಿಗಳು ಪ್ರತಿ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಸಂದರ್ದಲ್ಲಿ ಪರಿಶೀಲಿಸುವಂತೆ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸೂಚಿಸಿದರು.
ಸಾಮಾನ್ಯ ಸಭೆಯ ಕಲಾಪದಲ್ಲಿ ಭಾಗವಹಿಸಿ ಮಾತನಾಡಿದ ವಿಧಾನ ಪರಿಷತ್‌ನ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಸ್ಥಳೀಯಾಡಳಿತ ಜನಪ್ರತಿನಿಧಿಗಳು ಸಾಮಾನ್ಯ ಸಭೆಯಲ್ಲಿ ಇಲಾಖೆಯ ಸಮಸ್ಯೆಯ ಬಗ್ಗೆ ಮಾಹಿತಿ ಕೇಳಿದರೆ ಅಧಿಕಾರಿಗಳು ಒಂದೊಮ್ಮೆ ತಬ್ಬಿಬ್ಬಾಗುತ್ತಾರೆ. ಅದಕ್ಕಾಗಿ ಸಾಮಾನ್ಯ ಸಭೆಯ 15 ದಿನಗಳಿಗೆ ಮೊದಲು ತಮ್ಮ ಕ್ಷೇತ್ರದ ಸಮಸ್ಯೆ, ಇಲಾಖಾವಾರು ಮಾಹಿತಿ ಕುರಿತಂತೆ ಲಿಖಿತ ಅರ್ಜಿ ಸಲ್ಲಿಸುವ ಮೂಲಕ ಅಧಿಕಾರಿಗಳಿಂದ ಉತ್ತರವನ್ನು ಲಿಖಿತ ರೂಪದಲ್ಲಿ ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಚರ್ಚೆಯಲ್ಲಿ ಪಾಲ್ಗೊಂಡ ಅವರು ಇತರ ಇಲಾಖೆಗಳಿಗಿಂತ ಹೆಚ್ಚು ಸವಲತ್ತುಗಳು ಕಾರ್ಮಿಕ ಇಲಾಖೆಯಲ್ಲಿದೆ. ಈ ಬಗ್ಗೆ ಸದಸ್ಯರಿಗೆ ಮಾಹಿತಿ ಇಲ್ಲ. ಈ ನಿಟ್ಟಿನಲ್ಲಿ ಗ್ರಾಪಂ ವ್ಯಾಪ್ತಿಯಲ್ಲಿ ಸದಸ್ಯರು ಕಾರ್ಮಿಕ ಇಲಾಖೆಗೆ ಸಂಬಂಧಿಸಿದ ಮಾಹಿತಿ ಶಿಬಿರವನ್ನು ಆಯೋಜಿಸಿ ಕಾರ್ಮಿಕ ಇಲಾಖೆಯ ಸವಲತ್ತುಗಳನ್ನು ಅರ್ಹ ಕಾರ್ಮಿಕರು ಪಡೆದುಕೊಳ್ಳುವಂತಾಗಬೇಕು ಎಂದರು.
ಉಪಾಧ್ಯಕ್ಷ ಅಬ್ಬಾಸ್ ಅಲಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಧನಲಕ್ಷ್ಮೀ ಸಿ. ಬಂಗೇರ ವೇದಿಕೆಯಲ್ಲಿದ್ದರು. ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಸ್ವಾಗತಿಸಿ ವಂದಿಸಿದರು. ಸದಸ್ಯರಾದ ಆದಂ ಕುಂಞಿ, ರಮೇಶ್ ಕುಡ್ಮೇರ್, ಹೈದರ್ ಕೈರಂಗಳ, ಯಶವಂತ ಪೂಜಾರಿ, ಪದ್ಮಶ್ರೀ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು. ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು ತಮ್ಮ ಇಲಾಖೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.
ಆ.15ರಿಂದ ತಾಲೂಕನ್ನು ಬಾಲಕಾರ್ಮಿಕ ಮುಕ್ತ ತಾಲೂಕನ್ನಾಗಿ ಘೋಷಿಸಲು ನಿರ್ಧರಿಸಲಾಗಿದೆ. ಹಾಗೆಯೇ ಪಂಚಾಯತ್ ವ್ಯಾಪ್ತಿಯನ್ನು ಕೂಡ ಬಾಲಕಾರ್ಮಿಕ ಮುಕ್ತ ಗ್ರಾಮ ಪಂಚಾಯತನ್ನಾಗಿ ಘೋಷಿಸಲಾಗುತ್ತಿದೆ ಎಂದು ಸಾಮಾನ್ಯ ಸಭೆಯ ಗಮನ ಸೆಳೆದ ಕಾರ್ಯನಿರ್ವಹಣಾಧಿಕಾರಿ ಸಿಪ್ರಿಯನ್ ಮಿರಾಂದ ಹೊಟೇಲ್, ಅಂಗಡಿ ಸಹಿತ ಯಾವುದೇ ಸಂಸ್ಥೆಯಲ್ಲಿ ಬಾಲಕಾರ್ಮಿಕರಿದ್ದರೆ ತಕ್ಷಣ ಸಾರ್ವಜನಿಕರು ಸಂಬಂಧಿಸಿದ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಿದರು.