ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ ತನಿಖೆಗೆ ವಿಶೇಷ ತಂಡ ರಚನೆ: ಸಚಿವ ಪ್ರಮೋದ್ ಮಧ್ವರಾಜ್

Update: 2016-08-10 16:36 GMT

ಉಡುಪಿ, ಆ.10: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಸಲು ಕಟಿಬದ್ಧರಾಗಿದ್ದು, ಅದಕ್ಕಾಗಿ ವಿಶೇಷ ತಂಡ ರಚಿಸುವ ಬಗ್ಗೆ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಸೂಚನೆ ನೀಡಲಾಗುವುದು ಎಂದು ರಾಜ್ಯ ಮೀನುಗಾರಿಕೆ, ಯುವಜನ ಸೇವೆ ಮತ್ತು ಕ್ರೀಡೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದ್ದಾರೆ.

ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣವನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ತನಿಖೆ ನಡೆಸುವಂತೆ ಆಗ್ರಹಿಸಿ ಬುಧವಾರ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಆಯೋಜಿಸಲಾದ ಪ್ರತಿಭಟನಾ ಸಭೆಯಲ್ಲಿ ಉಡುಪಿ ಜಿಲ್ಲಾ ಸಮಸ್ತ ಬಂಟರ ಸಂಘಟನೆಗಳಿಂದ ಮನವಿ ಸ್ವೀಕರಿಸಿ ಅವರು ಮಾತನಾಡುತಿದ್ದರು.

ಕೊಲೆಯಾದ ಭಾಸ್ಕರ್ ಶೆಟ್ಟಿ ಅವರ ಬ್ಯಾಂಕ್ ಖಾತೆಯಿಂದ ಹಣ ಡ್ರಾ ಮಾಡಿರುವ ಬಗ್ಗೆ ಹಾಗೂ ಆ ಹಣ ಎಲ್ಲಿಗೆಲ್ಲ ಹೋಗಿವೆ ಎಂಬುದರ ಬಗ್ಗೆಯೂ ವಿಶೇಷ ತನಿಖೆ ನಡೆಸಲಾಗುವುದು. ಇದರಿಂದ ಈ ಪ್ರಕರಣದ ಹಿಂದೆ ಇರುವವರು ಸಿಕ್ಕಿ ಹಾಕಿಕೊಳ್ಳುತ್ತಾರೆ. ಈ ಪ್ರಕರಣದ ತನಿಖೆ ತೃಪ್ತಿ ದಾಯಕವಾಗದಿದ್ದರೆ ಅದನ್ನು ಸಿಐಡಿ ಅಥವಾ ಸಿಬಿಐಗೆ ಒಪ್ಪಿಸಲು ಸರಕಾರವನ್ನು ಒತ್ತಾಯಿಸಲಾಗುವುದು ಎಂದರು.

ಪ್ರಕರಣದ ತನಿಖೆಯನ್ನು ನಿಷ್ಪಕ್ಷಪಾತವಾಗಿ ನಡೆಸುವ ನಿಟ್ಟಿನಲ್ಲಿ ಪ್ರಕರಣದ ಪ್ರಸ್ತುತ ತನಿಖಾಧಿಕಾರಿಯಾಗಿರುವ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ಅವರನ್ನು ಆ ಜವಾಬ್ದಾರಿಯಿಂದ ಕಿತ್ತು ಹಾಕಿ, ಆ ಸ್ಥಾನಕ್ಕೆ ಕಾರ್ಕಳ ಉಪ ವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕಿ ಸುಮನಾ ಐಪಿಎಸ್ ಅವರನ್ನು ನೇಮಕ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಉಡುಪಿ ಜಿಲ್ಲೆಗೆ ಹೊಸದಾಗಿ ನೇಮಕಗೊಂಡಿರುವ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ನಾಳೆ ಅಧಿಕಾರ ವಹಿಸಿಕೊಳ್ಳಲಿದ್ದು, ಈಗಾಗಲೇ ಬೇರೆ ಜಿಲ್ಲೆಗೆ ವರ್ಗಾವಣೆಗೊಂಡಿರುವ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರಿಗೆ ಈ ಪ್ರಕರಣದ ತನಿಖೆಯ ಜವಾಬ್ದಾರಿ ನೀಡಲು ಸಾಧ್ಯವೇ ಎಂಬುದರ ಬಗ್ಗೆ ಗೃಹ ಸಚಿವರು ಹಾಗೂ ಹಿರಿಯ ಪೊಲೀಸ್ ಅಧಿಕಾರಿ ಗಳೊಂದಿಗೆ ಚರ್ಚಿಸಲಾಗುವುದು ಎಂದು ಅವರು ಹೇಳಿದರು.

ಬಂಟರ ಯಾನೆ ನಾಡವರ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ವಾಚಿಸಿದ ಮನವಿಯನ್ನು ಮೃತ ಭಾಸ್ಕರ್ ಶೆಟ್ಟಿಯವರ ತಾಯಿ ಗುಲಾಬಿ ಶೆಡ್ತಿ ಸಚಿವ ಪ್ರಮೋದ್ ಮಧ್ವರಾಜ್‌ಗೆ ಅರ್ಪಿಸಿದರು. ಸಭೆಯ ಅಧ್ಯಕ್ಷತೆಯನ್ನು ಉಡುಪಿ ತಾಲೂಕು ಬಂಟರ ಸಂಘದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಹಿಸಿದ್ದರು.

ವೇದಿಕೆಯಲ್ಲಿ ಬಂಟ ಸಮುದಾಯದ ಮುಖಂಡರಾದ ಅಪ್ಪಣ್ಣ ಹೆಗ್ಡೆ, ಪುರುಷೋತ್ತಮ ಶೆಟ್ಟಿ, ಮನೋಹರ್ ಶೆಟ್ಟಿ, ರವೀಂದ್ರನಾಥ್ ಹೆಗ್ಡೆ, ಶೀಲಾ ಕೆ.ಶೆಟ್ಟಿ, ರೋಹಿತ್ ಕುಮಾರ್ ಕಟೀಲು, ಮಾಜಿ ಶಾಸಕ ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಬ್ರಾಹ್ಮಣರ ಸಂಘದ ಅಧ್ಯಕ್ಷ ಮಂಜುನಾಥ ಉಪಾಧ್ಯಕ್ಷ, ಧರ್ಮಗುರು ಫಾ. ವಿಲಿಯಂ ಮಾರ್ಟಿಸ್, ನಂದಳಿಕೆ ಸುಹಾಸ್ ಹೆಗ್ಡೆ, ವಿನಯ ಬಲ್ಲಾಳ್, ನವೀನ್‌ಚಂದ್ರ ಶೆಟ್ಟಿ, ಕಾಪು ಲೀಲಾಧರ ಶೆಟ್ಟಿ, ರಾಜೇಶ್ ಶೆಟ್ಟಿ ಬಿರ್ತಿ ಮೊದಲಾದವರು ಉಪಸ್ಥಿತರಿದ್ದರು.

ಕುದಿ ವಸಂತ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉದಯ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ವಾಹನ ರ್ಯಾಲಿ ಮೂಲಕ ಸಾಗಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಜಿಲ್ಲಾಧಿ ಕಾರಿಗಳಿಗೆ ಈ ಕುರಿತು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಲಾಯಿತು.

ತನಿಖಾಧಿಕಾರಿ ಗಿರೀಶ್ ವಿರುದ್ಧ ಕ್ರಮ

ಪ್ರಕರಣದ ತನಿಖೆ ಸಂದರ್ಭದಲ್ಲಿ ತನಿಖಾಧಿಕಾರಿಯಾಗಿರುವ ಮಣಿಪಾಲ ಪೊಲೀಸ್ ನಿರೀಕ್ಷಕ ಗಿರೀಶ್ ತನ್ನ ಜೀಪಿನ ಮುಂದಿನ ಸೀಟಿನಲ್ಲಿ ಆರೋಪಿ ನವನೀತ್‌ನನ್ನು ಕುಳ್ಳಿರಿಸಿ ಕರೆದುಕೊಂಡು ಹೋಗಿರುವ ವಿಡಿಯೋವನ್ನು ನಾನು ವಿಕ್ಷೀಸಿದ್ದೇನೆ. ಅದನ್ನು ಮಂಗಳೂರು ಪಶ್ಚಿಮ ವಲಯ ಐಜಿಪಿ ಅರುಣ್ ಚಕ್ರವರ್ತಿ ಅವರಿಗೂ ಕಳುಹಿಸಿದ್ದೇನೆ. ಅಲ್ಲದೆ ಅವರಿಗೆ ದೂರವಾಣಿ ಕರೆ ಮಾಡಿ ಗಿರೀಶ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News