ತುಳುನಾಡಿನ ಸಂಸ್ಕೃತಿ ಉಳಿಸುವಲ್ಲಿ ಒಂದಾಗೋಣ : ಸಂತೋಷ್‌ಕುಮಾರ್
ಮುಲ್ಕಿ, ಆ.10: ತಾಯಿಯ ಸ್ಥಾನಮಾನವನ್ನು ನೀಡುವ ತುಳುನಾಡಿನ ಪರಂಪರೆಯನ್ನು ಉಳಿಸಿ ಬೆಳೆಸುವಲ್ಲಿ ತುಳುವರು ಒಂದಾಗಬೇಕು, ಮುಲ್ಕಿಯಲ್ಲಿ ನಡೆಯಲಿರುವ ತುಳು ಸಮ್ಮೇಳನವು ತುಳುನಾಡಿನ ಆಶಯಗಳಿಗೆ ವೇದಿಕೆಯಾಗಿ ಸಂಸ್ಕೃತಿ ಮತ್ತು ಸಂಸ್ಕಾರ ಉಳಿಸುವಲ್ಲಿ ಒಂದಾಗಿ ಸಾಗೋಣ ಇಲ್ಲಿನ ಪರಂಪರೆಯನ್ನು ಕಟ್ಟಿ ಬೆಳೆಸುವಲ್ಲಿ ಸಾಮರಸ್ಯದ ವಾತಾವರಣವನ್ನು ನಿರ್ಮಿಸಲು ಪಣತೊಡೋಣ ಎಂದು ಶ್ರೀ ಮಾತಾ ಡೆವಲಪರ್ಸ್‌ನ ಮಾಲಕ ಸಂತೋಷ್‌ಕುಮಾರ್ ಶೆಟ್ಟಿ ಹೇಳಿದರು.
ಅವರು ಮುಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮುಲ್ಕಿ ತುಳು ಸಮ್ಮೇಳನ ಸಮಿತಿಯ ಸಂಯೋಜನೆಯಲ್ಲಿ ಟೈಮ್ಸ್ ಆಫ್ ಕುಡ್ಲ ತುಳು ಪತ್ರಿಕೆಯ ನಾಲ್ಕನೆ ವರ್ಷದ ನೆನಪಿಗಾಗಿ ಬಪ್ಪನಾಡುವಿನಲ್ಲಿ ಆಗಸ್ಟ್ 13 ಮತ್ತು 14ರಂದು ನಡೆಯುವ ತುಳು ಐಸಿರದ ಐಸ್ರ ತುಳು ಸಮ್ಮೇಳನದ ಪ್ರಚಾರಾರ್ಥವಾಗಿ ಸಾಗಲಿರುವ ವಿಶೇಷ ವಾಹನಕ್ಕೆ ಚಾಲನೆ ನೀಡಿ ಮಾತನಾಡಿದರು.
ಬಿಜೆಪಿಯ ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ ಕಟೀಲು ತುಳುನಾಡಿನ ಬಾವುಟವನ್ನು ಉಪ ಸಮಿತಿಯ ಸಂಚಾಲಕ ದೇವಪ್ರಸಾದ್ ಪುನರೂರುರವರಿಗೆ ಹಸ್ತಾಂತರಿಸಿ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು, ತುಳು ಸಮ್ಮೇಳನವು ಮನೆ ಮನದ ಸಮ್ಮೇಳನ ಆಗಬೇಕು, ತುಳುನಾಡಿನ ಎಲ್ಲಾ ಬಾಂಧವರು ನಮ್ಮ ಮನೆಯ ಕಾರ್ಯಕ್ರಮ ಎಂದು ಆಗಮಿಸಿ ಯಶಸ್ಸುಗೊಳಿಸಿದಲ್ಲಿ ಸಂಘಟನೆಯ ಶ್ರಮ ಸಾರ್ಥಕತೆಯನ್ನು ಕಾಣುತ್ತದೆ ಎಂದರು.
ಸಮಿತಿಯ ಪ್ರಧಾನ ಸಂಚಾಲಕ ಎಸ್.ಆರ್.ಬಂಡಿಮಾರ್, ಸಂಚಾಲಕ ವಾಮನ ಇಡ್ಯಾ, ಪ್ರಧಾನ ಕಾರ್ಯದರ್ಶಿ ಯಶೋದಾ ಕೇಶವ್ ಮಲ್ಪೆ, ಕೋಶಾಧಿಕಾರಿ ರತ್ನಾ ರಂಜನ್, ಉಪ ಸಮಿತಿಯ ಸಂಚಾಲಕ ದೇವಪ್ರಸಾದ ಪುನರೂರು, ಗೌರವ ಸಲಹೆಗಾರರಾದ ನಾಗೇಶ್ ಬಪ್ಪನಾಡು, ವಿವಿಧ ಸಮಿತಿಯ ಸಂದೀಪ್ ಶೆಟ್ಟಿ ಮರವೂರು, ವಿ.ಕೆ.ಯಾದವ, ಶಾಂಭವಿ ಎಸ್. ಶೆಟ್ಟಿ, ಭಾರತಿ ರೈ, ಉದಯ ಪೂಂಜಾ ತಾಳಿಪಾಡಿ, ಪ್ರಚಾರ ಸಮಿತಿಯ ಅಧ್ಯಕ್ಷ ನರೇಂದ್ರ ಕೆರೆಕಾಡು, ಐಕಳ ಜಯಪಾಲ ಶೆಟ್ಟಿ, ಸ್ವಾತಿ ಪಡುಬಿದ್ರಿ, ಸ್ವಾತಿ ಮೂಲ್ಕಿ, ಪೃಥ್ವಿರಾಜ್ ಕೆರೆಕಾಡು, ಮತ್ತಿತರರು ಉಪಸ್ಥಿತರಿದ್ದರು.