ಬಾಂಗ್ಲಾದೇಶ: ಮಾಜಿ ಜಮಾಅತ್ ನಾಯಕನಿಗೆ ಗಲ್ಲುಶಿಕ್ಷೆ ತೀರ್ಪು
ಢಾಕ,ಆ.11: ಯುದ್ಧ ಅಪರಾಧ ಆರೋಪಿಸಿ ಬಾಂಗ್ಲಾದೇಶದ ಮಾಜಿ ಜಮಾಅತೆ ಇಸ್ಲಾಮಿ ನಾಯಕ, ಹಾಲಿ ಸಂಸತ್ಸದಸ್ಯರೂ ಆದ ಶೇಖಾವತ್ ಹುಸೈನ್‌ರಿಗೆ ಗಲ್ಲುಶಿಕ್ಷೆ ವಿಧಿಸಿ ವಿಶೇಷ ಟ್ರಿಬ್ಯುನಲ್ ತೀರ್ಪು ನೀಡಿದೆ. ಅವರ ವಿರುದ್ಧ 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ವಿಮೋಚನಾ ಯುದ್ಧದ ವೇಳೆ ಅಪರಾಧಕೃತ್ಯ ನಡೆಸಿದ್ದಾರೆಂದು ಆರೋಪಿಸಲಾಗಿತ್ತು. ಇದೇ ಪ್ರಕರಣದಲ್ಲಿ ಇತರ ಏಳು ಮಂದಿಗೆ ಜೀವಾವಧಿ ಜೈಲು ಶಿಕ್ಷೆ ವಿಧಿಸಲಾಗಿದೆ. ಅಪಹರಣ, ಹಿಂಸೆ, ಅತ್ಯಾಚಾರ. ಕೊಲೆ ಇತ್ಯಾದಿ ಆರೋಪಗಳನ್ನು ಶೇಖಾವತ್ ಮತ್ತು ಇತರ ಏಳು ಮಂದಿಯ ವಿರುದ್ಧ ಅಪಾದಿಸಲಾಗಿದೆ ಎಂದು ವರದಿ ತಿಳಿಸಿದೆ.
ಶೇಖಾವತ್‌ರನ್ನು ಗಲ್ಲಿಗೇರಿಸಿ ಅಥವಾ ಗುಂಡು ಹಾರಿಸಿ ಕೊಲ್ಲುವ ಮೂಲಕ ಶಿಕ್ಷೆ ಜಾರಿಗೊಳಿಸಬೇಕೆಂದು ಜಸ್ಟಿಸ್ ಅನ್ವರುಲ್ ಹಕ್ ನೇತೃತ್ವದ ಬಾಂಗ್ಲಾದೇಶ್ ಇಂಟರ್‌ನ್ಯಾಶನಲ್ ಕ್ರೈಮ್ಸ್ ಟ್ರಿಬ್ಯೂನಲ್ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎಂದು ಢಾಕ ಟ್ರಿಬ್ಯೂನ್ ಪತ್ರಿಕೆ ವರದಿಮಾಡಿದೆ. ಜಮಾಅತೆ ಇಸ್ಲಾಮಿಯ ವಿದ್ಯಾರ್ಥಿ ವಿಭಾಗದ ಕೇಂದ್ರ ಸಮಿತಿಯ ಸದಸ್ಯರಾಗಿದ್ದ ಶೇಖಾವತ್ ಯುದ್ಧ ಸಂದರ್ಭದಲ್ಲಿ ಪಾಕಿಸ್ತಾನ ಸೈನ್ಯಕ್ಕೆ ನೆರವು ನೀಡಿದ್ದಾರೆ ಹಾಗೂ ಪ್ರಾದೇಶಿಕ ಕಮಾಂಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ ಎಂದು ಆರೋಪಿಸಲಾಗಿದೆ. ನಂತರ ಇವರು ಜಮಾಅತೆ ಇಸ್ಲಾಮಿಯನ್ನು ತೊರೆದು ಖಾಲಿದಾ ಜಿಯಾರ ಬಾಂಗ್ಲಾ ದೇಶ್ ನ್ಯಾಶನಲಿಸ್ಟ್ ಪಾರ್ಟಿಯನ್ನು ಸೇರಿದ್ದರು. ಇವರ ವಿರುದ್ಧ ಪ್ರಕರಣ ಕೋರ್ಟ್‌ಗೆ ತಲುಪಿದಾಗ ಇವರು ಜಾತೀಯ ಪಾರ್ಟಿಯಲ್ಲಿದ್ದರು.
ಬಿಲಾಲ್ ಹುಸೈನ್, ಇಬ್ರಾಹೀಂ ಹುಸೈನ್, ಶೇಖ್ ಮುಜೀಬುರ್ರಹ್ಮಾನ್, ಅಬ್ದುಲ್ ಅಝೀರ್ ಸರ್ದಾರ್, ಕಾಜಿ ಉಹುದುಲ್ ಇಸ್ಲಾಂ, ಅಝೀರ್ ಸರ್ದಾರ್, ಅಬ್ದುಲ್ ಖಾಲಿಕ್ ಮೊರೋನ್ ಜೀವಾವಧಿ ಶಿಕ್ಷೆಗೊಳಗಾದ ಇತರ ಆರೋಪಿಗಳು ಆಗಿದ್ದಾರೆ. ಇನ್ನೊಬ್ಬ ಆರೋಪಿ ಕಳೆದ ಮೇ ಆರನೆ ತಾರಿಕಿನಂದು ಪೊಲೀಸ್ ಕಸ್ಟಡಿಯಲ್ಲಿ ಹೃದಯಾಘಾತದಿಂದ ನಿಧನರಾಗಿದ್ದರು. ಯುದ್ಧ ಅಪರಾಧ ಆರೋಪಿಸಿ ಈವರೆಗೆ ಬಾಂಗ್ಲಾದೇಶ ಸರಕಾರ ನಾಲ್ವರು ಉನ್ನತ ರಾಜಕೀಯ ನಾಯಕರನ್ನು ಗಲ್ಲಿಗೇರಿಸಿದೆ. ಯುದ್ಧಾಪರಾಧಗಳ ವಿಚಾರಣೆ ನಡೆಸುತ್ತಿರುವ ಬಾಂಗ್ಲಾದೇಶ್ ಇಂಟರ್‌ನ್ಯಾಶನಲ್ ಕ್ರೈಂ ಟ್ರಿಬ್ಯೂನಲ್ ಕ್ರಮಗಳು ಪಕ್ಷಪಾತ ರಹಿತವಾಗಿಲ್ಲ ಎಂದು ಈ ಮೊದಲು ಆಮ್ನೆಸ್ಟಿ ಇಂಟರ್‌ನ್ಯಾಶನಲ್ ಮುಂತಾದ ಮಾನವ ಹಕ್ಕು ಸಂಘಟನೆಗಳು ಆರೋಪಿಸಿದ್ದವು.