ಮಂಗಳೂರಿನ ಪ್ರಥಮ ತೂಗುಸೇತುವೆ ಉದ್ಘಾಟನೆ

Update: 2016-08-11 14:09 GMT

ಮಂಗಳೂರು, ಆ.11: ಮಂಗಳೂರು ತಾಲೂಕಿನಲ್ಲಿ ಅಪರೂಪ ಎನ್ನಬಹುದಾದ ತೂಗುಸೇತುವೆಯ ಉದ್ಘಾಟನೆ ಇಂದು ಗಂಜಿಮಠ ಸಮೀಪದ ಮುತ್ತೂರು ಎಂಬಲ್ಲಿ ನಡೆಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಫಲ್ಗುಣಿ ನದಿಗೆ ನಿರ್ಮಿಸಲಾಗಿರುವ ಈ ತೂಗುಸೇತುವೆಯ ಒಂದು ತುದಿ ಮಂಗಳೂರು ತಾಲೂಕು, ಇನ್ನೊಂದು ತುದಿ ಬಂಟ್ವಾಳ ತಾಲೂಕಿನ ಬಡಗಬೆಳ್ಳೂರು.

ಅದೇ ರೀತಿ, ಮಂಗಳೂರು ಉತ್ತರ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಈ ಸೇತುವೆ ಸೇರಲಿದೆ. ನೂತನ ಸೇತುವೆಯನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಉದ್ಘಾಟಿಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಿವೇದಿತ್ ಆಳ್ವ, ಶಾಸಕರಾದ ಬಿ.ಎ. ಮೊಯ್ದಿನ್ ಬಾವ, ಜಿಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮುತ್ತೂರು ಮತ್ತು ಬಡಗಬೆಳ್ಳೂರು ಪಂಚಾಯತ್ ಅಧ್ಯಕ್ಷರಾದ ಜಯಂತಿ, ನಾಗಮ್ಮ ಮೊದಲಾದವರು ಉಪಸ್ಥಿತರಿದ್ದರು.
ಎರಡು ತಾಲೂಕುಗಳನ್ನು ಬೆಸೆಯುವ ಕೊಂಡಿಯಾಗಿರುವ ಇದು ಮಂಗಳೂರಿನ ಪ್ರಥಮ ತೂಗುಸೇತುವೆಯಾಗಿದೆ.
ಈ ಸೇತುವೆಯಿಂದಾಗಿ ಬಡಗಬೆಳ್ಳೂರು ಗ್ರಾಮಸ್ಥರಿಗೆ ಜಿಲ್ಲಾ ಕೇಂದ್ರಕ್ಕೆ ಬರಲು ಇನ್ನಷ್ಟು ಹತ್ತಿರವಾಗಲಿದೆ. ತೂಗು ಸೇತುವೆ ’ಪ್ರವೀಣ’ ಎಂದೇ ಖ್ಯಾತರಾದ ಸುಳ್ಯದ ಗಿರೀಶ್ ಈ ತೂಗುಸೇತುವೆ ನಿರ್ಮಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News