ಉಪ್ಪಿನಂಗಡಿ: ಸಂತ ಫಿಲೋಮಿನಾ ಅಮ್ಮನವರ ವಾರ್ಷಿಕ ಹಬ್ಬ
ಉಪ್ಪಿನಂಗಡಿ, ಆ.11: ನಮಗಾಗಿ ದೇವರ ಸನ್ನಿಧಿಯಲ್ಲಿ ಪ್ರಾರ್ಥಿಸುತ್ತಿರುವ ಸಂತ ಫಿಲೋಮಿನಾ ಅಮ್ಮನವರನ್ನು ನೆನಪು ಮಾಡುವುದು ಅತೀ ಮುಖ್ಯವಾಗಿದೆ. ಅವರ ಹೆಸರನ್ನಿಟ್ಟುಕೊಂಡ ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯು ವೌಲ್ಯಧಾರಿತ ಶಿಕ್ಷಣ ನೀಡುವುದರೊಂದಿಗೆ ನಿರಂತರ ಪ್ರಗತಿಯ ಹಾದಿಯಲ್ಲಿ ಮುನ್ನೆಡೆಯುತ್ತಿದೆ ಎಂದು ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಅ.ವಂ. ಮೊನ್ಸಿಂಜೊರ್ ಡೆನಿಸ್ ಮೊರಾಸ್ ಪ್ರು ತಿಳಿಸಿದರು.
ಉಪ್ಪಿನಂಗಡಿಯ ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ನಡೆದ ಶಾಲಾ ಪಾಲಕಿ ಸಂತ ಫಿಲೋಮಿನಾ ಅಮ್ಮನವರ ವಾರ್ಷಿಕ ಹಬ್ಬದ ಸಂದರ್ಭ ಅವರು ದೀನರ ಕನ್ಯಾ ಮಾತೆ ದೇವಾಲಯದಲ್ಲಿ ದಿವ್ಯಬಲಿಪೂಜೆ ನೆರವೇರಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಸಂದೇಶ ನೀಡಿದರು. ಇಂದು ಶಾಲೆಯಲ್ಲಿ ಜಾತ್ರೆಯ ಕಳೆಯಿದ್ದು, ಈ ಹಬ್ಬ ಮಕ್ಕಳ ಹಬ್ಬವಾಗಿದೆ. ಊರವರ, ಮಕ್ಕಳ ಹೆತ್ತವರ ಉತ್ತಮ ಮನಸ್ಸು ಹಾಗೂ ಸಹಕಾರದಿಂದಾಗಿ ಈ ಶಾಲೆ ಇನ್ನಷ್ಟು ಅಭಿವೃದ್ಧಿಯನ್ನು ಸಾಧಿಸಲಿ ಎಂದು ಹರಸಿದರು.
ಚರ್ಚ್ ಪಾಲನಾ ಮಂಡಳಿಯ ಉಪಾಧ್ಯಕ್ಷ ರಾಬರ್ಟ್ ಡಿಸೋಜ ಮಾತನಾಡಿ, ಸಂತ ಫಿಲೋಮಿನಾ ಅಮ್ಮನವರು ಸತ್ಯ, ಧರ್ಮ, ನ್ಯಾಯಕ್ಕಾಗಿ ಹುತಾತ್ಮರಾದವರು. ಫಿಲೋಮಿನಾ ಅಂದರೆ ಲ್ಯಾಟೀನ್ ಭಾಷೆಯಲ್ಲಿ ಬೆಳಕು ಎಂದರ್ಥ. ಆದ್ದರಿಂದ ಈ ಶಾಲೆಯೂ ಬೆಳಕು ನೀಡುವ ಜ್ಯೋತಿಯಾಗಲಿ ಎಂದು ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಂತ ಫೀಲೋಮಿನಾ ಶಾಲೆಯ ಮುಖ್ಯ ಶಿಕ್ಷಕಿ ಫಿಲೋಮಿನಾ ಪಾಸ್ ಮಾತೆ ಸಂತ ಫಿಲೋಮಿನಾ ಅಮ್ಮನವರ ಪರಿಚಯ ನೀಡಿದರು. ಬಳಿಕ ದೀನರ ಕನ್ಯಾಮಾತೆ ದೇವಾಲಯದ ಅಧೀನಕ್ಕೊಳಪಟ್ಟ ನರ್ಸರಿ, ಸೈಂಟ್ ಮೇರಿಸ್ ಪ್ರಾಥಮಿಕ ಹಾಗೂ ಪ್ರೌಢ ಶಾಲೆ ಮತ್ತು ಸಂತಫಿಲೋಮಿನಾ ಪ್ರಾಥಮಿಕ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ದಾನಿಗಳನ್ನು ಗುರುತಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ದೀನರ ಕನ್ಯಾಮಾತೆ ದೇವಾಲಯದ ಧರ್ಮಗುರು, ಸಂತ ಫೀಲೋಮಿನಾ ಹಾಗೂ ಸೈಂಟ್ ಮೇರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕ ವಂ. ರೋನಾಲ್ಡ್ ಪಿಂಟೋ, ಬನ್ನೂರು ಚರ್ಚ್‌ನ ಧರ್ಮಗುರು ವಂ.ನಿಕೋಲಾಸ್, ವಂ. ಮೋರಿಸ್ ಡೇಸ್, ಶಾಲಾ ಶಿಕ್ಷಕ- ರಕ್ಷಕ ಸಂಘದ ಉಪಾಧ್ಯಕ್ಷ ಡೀಕಯ್ಯ, ಮುಖ್ಯ ಶಿಕ್ಷಕಿ ಪವಿತ್ರ ಕಾರ್ಲೋ, ಗ್ರೇಸಿ ಮಿರಾಂದ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯ ಶಿಕ್ಷಕಿ ಮರಿಯಾ ಜಾನೆಟ್ ಡಿಸೋಜ ಸ್ವಾಗತಿಸಿದರು. ಗ್ರೇಸಿ ಮಿರಾಂದ ವಂದಿಸಿದರು. ಶಿಕ್ಷಕ ಹೆರಾಲ್ಡ್ ಡಿಸೋಜ ಹಾಗೂ ವಿದ್ಯಾರ್ಥಿನಿ ಕು.ಶರಧಿ ಕಾರ್ಯಕ್ರಮ ನಿರೂಪಿಸಿದರು.