ಆಟಿ ಆಚರಣೆಯನ್ನು ಉಳಿಸಿ, ಬೆಳೆಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ: ಶಕುಂತಳಾ ಶೆಟ್ಟಿ
ಪುತ್ತೂರು, ಆ.11: ಆಟಿ ಆಚರಣೆಯಂತಹ ಪರಂಪರೆಯನ್ನು ಮುಂದುವರಿಸಿಕೊಂಡು ಉಳಿಸಿ, ಬೆಳೆಸುವ ಜವಾಬ್ದಾರಿ ಯುವ ಜನಾಂಗದ ಮೇಲಿದೆ ಎಂದು ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿ ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಪುತ್ತೂರಿನ ಲಯನ್ಸ್ ಸೇವಾ ಮಂದಿರದಲ್ಲಿ ಗುರುವಾರ ತುಳು ಸಾಹಿತ್ಯ ಅಕಾಡೆಮಿ, ತಾಲೂಕು ಮಹಿಳಾ ಒಕ್ಕೂಟ, ನವ್ಯಶ್ರೀ ಮಹಿಳಾ ಮಂಡಲ, ಲಯನ್ಸ್ ಮತ್ತು ಲಯನೆಸ್ ಕ್ಲಬ್ ಪುತ್ತೂರು, ವನಿತಾ ಸಮಾಜ ಹಾರಾಡಿ, ಒಡಿಯೂರು ವಜ್ರಮಾತಾ ಮಹಿಳಾ ಘಟಕ ಸಹಯೋಗದಲ್ಲಿ ಅಕಾಡೆಮಿಯ ಪರ್ಬ ಯೋಜನೆಯಡಿ ಆಯೋಜಿಸಲಾದ ‘ಆಟಿದ ಪೊರ್ಲು’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಚೆನ್ನಮಣೆ ಆಟ ಆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕಿ ಬಳಿಕ ಮಾತನಾಡಿ, ವೈಜ್ಞಾನಿಕ ಪರಿಕಲ್ಪನೆಯೊಂದಿಗೆ ಪ್ರಕೃತಿಯನ್ನು ಪೂಜಿಸುವ ಪದ್ಧತಿಯೇ ಆಟಿ ಆಚರಣೆಯ ವಿಶೇಷತೆಯಾಗಿದೆ ಎಂದರು.
ಬೊಳುವಾರು ಸಾಂಸ್ಕೃತಿಕ ಕಲಾಕೇಂದ್ರದ ಅಧ್ಯಕ್ಷ ಚಿದಾನಂದ ಕಾಮತ್ ಕಾಸರಗೋಡು ಮಾತನಾಡಿ, ಸಂಪ್ರದಾಯವನ್ನು ಉಳಿಸುವ ನಿಟ್ಟಿನಲ್ಲಿ ಇಂತಹ ಆಚರಣೆಗಳನ್ನು ಆಚರಿಸುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ಪುತ್ತೂರು ಲಯನ್ಸ್ ಕ್ಲಬ್ ಅಧ್ಯಕ್ಷ ಸುಂದರ ಗೌಡ ಅಧ್ಯಕ್ಷತೆ ವಹಿಸಿದ್ದರು. ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ವಿಜಯಲಕ್ಷ್ಮಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣ ಕೆ.ರಾವ್, ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಅನಿತಾ ಕೊಡಿಪ್ಪಾಡಿ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು. ವನಿತಾ ಸಮಾಜದ ಉಪಾಧ್ಯಕ್ಷೆ ವತ್ಸಲಾರಾಜ್ಞಿ ಬಹುಮಾನಿತರ ಪಟ್ಟಿ ಓದಿದರು.
ಒಡಿಯೂರು ವಜ್ರಮಾತಾ ಮಹಿಳಾ ಘಟಕದ ಅಧ್ಯಕ್ಷೆ ನಯನಾ ರೈ ಸ್ವಾಗತಿಸಿದರು. ನವ್ಯಶ್ರೀ ಮಹಿಳಾ ಮಂಡಲದ ಅಧ್ಯಕ್ಷೆ ಪ್ರೇಮಲತಾ ಟಿ. ರಾವ್ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ. ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.