ಸರಕಾರಿ ನೌಕರನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ
Update: 2016-08-11 19:55 IST
ಮಂಗಳೂರು, ಆ.11: ನಗರದ ವಾಣಿಜ್ಯ ತೆರಿಗೆ ಕಚೇರಿಯಲ್ಲಿ ಪ್ರಥಮ ದರ್ಜೆ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಗಣೇಶ್ ಪ್ರಸಾದ್ (45) ಎಂಬವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬೋಂದಲ್ ಸರಕಾರಿ ವಸತಿಗೃಹದಲ್ಲಿ ಪತ್ತೆಯಾಗಿದೆ.
ವಿಪರೀತ ಕುಡಿತದ ಚಟ ಹೊಂದಿದ್ದ ಗಣೇಶ್ ಪ್ರಸಾದ್ ಆ.6 ರಿಂದ ಮನೆಯಿಂದ ಹೊರಬಂದಿರಲಿಲ್ಲ. ಇಂದು ಸುತ್ತಮುತ್ತಲು ವಿಪರೀತ ದುರ್ವಾಸನೆ ಬಂದ ಹಿನ್ನೆಲೆಯಲ್ಲಿ ಮನೆಯ ಬಾಗಿಲನ್ನು ತೆಗೆದು ನೋಡಿದಾಗ ಗಣೇಶ್ ಪ್ರಸಾದ್ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಗಣೇಶ್ ಪ್ರಸಾದ್ ಅವರು ಒಬ್ಬಂಟಿಯಾಗಿ ಮನೆಯಲ್ಲಿ ವಾಸಿಸುತ್ತಿದ್ದರು. ಮನೆಯಲ್ಲಿ ಕುಡಿದ ಮತ್ತಿನಲ್ಲಿ ಕಾಲು ಜಾರಿ ಬಿದ್ದು ಸಾವನ್ನಪ್ಪಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.