ಕ್ರಷರ್‌ಗಳಿಂದ ತೆಂಕ ಎಡಪದವು ಗ್ರಾಮಸ್ಥರಿಗೆ ತೊಂದರೆ: ಆರೋಪ
ಮೂಡುಬಿದಿರೆ, ಆ.11: ಎಡಪದವು ಗ್ರಾಮ ಪಂಚಾಯತ್ ವ್ಯಾಪ್ತಿಯ ತೆಂಕ ಎಡಪದವು ಗ್ರಾಮದ ಕೊರ್ಡೆಲು ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಕ್ರಷರ್‌ಗಳಿಂದ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ ಎಂದು ಆರೋಪಿಸಿ ಅಲ್ಲಿನ ನಿವಾಸಿಗಳು ತೆಂಕ ಎಡಪದವು ಗ್ರಾಮ ಪಂಚಾಯತ್‌ಗೆ ದೂರು ನೀಡಿದ್ದಾರೆ.
ಕೊರ್ಡೆಲುವಿನಲ್ಲಿ ಕಾರ್ಯಾಚರಿಸುತ್ತಿರುವ ಎರಡು ಕ್ರಷರ್‌ಗಳಿಂದ ಜನರು ಭಯಭೀತರಾಗಿದ್ದು, ಅಧಿಕ ಪ್ರಮಾಣದ ಸ್ಫೋಟಕಗಳನ್ನು ಬಳಸುವುದರಿಂದ, ಸ್ಫೋಟಗೊಳ್ಳುವ ಸಂದರ್ಭ ಭೂಕಂಪದ ಅನುಭವವಾಗುತ್ತದೆ. ಪರಿಸರದ ಮನೆಗಳು ಬಿರುಕು ಬಿಟ್ಟಿದ್ದು, ಬೀಳುವ ಹಂತದಲ್ಲಿದೆ. ಪಂಚಾಯತ್‌ಗೆ ಹಲವು ಬಾರಿ ಮನವಿ ಮಾಡಿದರೂ, ಗ್ರಾಮಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಂಬಂಧಪಟ್ಟ ಇಲಾಖೆಯವರು ಎರಡು ಕ್ವಾರೆಗಳನ್ನು ಪರಿಶೀಲಿಸಿ, ಪರವಾನಿಗೆಯನ್ನು ರದ್ದುಗೊಳಿಸಬೇಕೆಂದು ಕೊರ್ಡೆಲು ನಿವಾಸಿ ಗುಣಪಾಲ ನಾಯ್ಕ ಎಂಬವರು ಆಗ್ರಹಿಸಿದ್ದು, ಕ್ವಾರೆಯ ಬಗ್ಗೆ ವಿಚಾರಿಸಿದಾಗ ಜಾತಿ ನಿಂದನೆ ಹಾಗೂ ಜೀವ ಬೆದರಿಕೆಯನ್ನೂ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
2016ರ ಎಪ್ರಿಲ್ ತಿಂಗಳಲ್ಲಿ ತೆಂಕ ಎಡಪದವು ಗ್ರಾಮಸಭೆಯಲ್ಲಿ ಒಂದು ತಿಂಗಳೊಳಗೆ ಗಣಿಗಾರಿಕೆ ಅಧಿಕಾರಿಗಳನ್ನು ಹಾಗೂ ಕ್ವಾರೆ ಮಾಲಕರನ್ನು ಕರೆದು ಸೂಕ್ತ ಕ್ರಮ ಕೈಗೊಳ್ಳುವ ಕುರಿತು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಆ ನಿರ್ಣಯಕ್ಕೆ ಪೂರಕವಾಗಿ ಯಾವುದೇ ಕ್ರಮವನ್ನು ಪಂಚಾಯತ್ ಕೈಗೊಂಡಿಲ್ಲ. ಕೊರ್ಡೆಲು ಪರಿಸರದಲ್ಲಿನ ರಸ್ತೆ ಅವ್ಯವಸ್ಥೆ, ಕ್ವಾರೆಯಿಂದ ಕಂಗೆಟ್ಟಿದ್ದ ಎರಡು ಕುಟುಂಬಗಳು ಈಗಾಗಲೇ ಮನೆಯನ್ನು ತೊರೆದಿದ್ದಾರೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.