×
Ad

ನಿರಂಜನ್ ಭಟ್‌ನ ಮತ್ತೊಂದು ಕಿವಿಯೋಲೆ ಹೊರಗೆ

Update: 2016-08-11 21:56 IST

ಉಡುಪಿ, ಆ.10: ವಜ್ರದ ಉಂಗುರ ಹಾಗೂ ಕಿವಿಯೋಲೆಗಳನ್ನು ನುಂಗಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ, ಆ ಬಳಿಕ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಆರೋಪಿ ಜ್ಯೋತಿಷಿ ನಂದಳಿಕೆಯ ನಿರಂಜನ್ ಭಟ್(26)ನ ಹೊಟ್ಟೆಯಿಂದ ಕೊನೆಯ ಕಿವಿಯೋಲೆ ಯನ್ನು ಇಂದು ಸಂಜೆ ಹೊರತೆಗೆಯಲಾಗಿದೆ. ಜು.12ರಂದು ಬೆಳಗ್ಗೆ ಆತನನ್ನು ಆಸ್ಪತ್ರೆ ಯಿಂದ ಬಿಡುಗಡೆ ಮಾಡುವ ಸಾಧ್ಯತೆ ಇದ್ದು, ಆ ಬಳಿಕ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗುವುದು ಎಂದು ಪ್ರಕರಣದ ತನಿಖಾಧಿಕಾರಿ ಯಾಗಿರುವ ಕಾರ್ಕಳದ ಸಹಾಯಕ ಪೊಲೀಸ್ ಅಧೀಕ್ಷಕಿ ಸುಮನಾ ತಿಳಿಸಿದ್ದಾರೆ.

ಕೊಲೆಯಾದ ಬಳಿಕ ನಾಪತ್ತೆಯಾಗಿದ್ದ ನಿರಂಜನ್ ಭಟ್‌ನನ್ನು ಆ.8ರಂದು ಪೊಲೀಸರು ಬಂಧಿಸಿದ್ದರು. ಇದಕ್ಕೆ ಮೊದಲೇ ಅಂದರೆ ಆ.7ರಂದು ತಾನು ಕೈ ಬೆರಳಿದ್ದ ವಜ್ರದ ಉಂಗುರ ಹಾಗೂ ಕಿವಿಯ ಎರಡು ಓಲೆಗಳನ್ನು ನುಂಗಿ ರುವುದಾಗಿ ತಿಳಿಸಿದ ಹಿನ್ನೆಲೆಯಲ್ಲಿ ಭಟ್ಟನನ್ನು ಅದೇ ರಾತ್ರಿಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.

ವೈದ್ಯರು ಆ.9ರಂದು ಆಸ್ಪತ್ರೆಯಲ್ಲಿ ಔಷಧಿ ನೀಡಿದ್ದರಿಂದ ಸಂಜೆ ವೇಳೆ ಆತನ ಹೊಟ್ಟೆಯಲ್ಲಿದ್ದ ಒಂದು ವಜ್ರದ ಉಂಗುರ ಹಾಗೂ ಒಂದು ಕಿವಿಯ ಓಲೆ ಹೊರಬಂದಿತ್ತು. ಆದರೆ ಇನ್ನೊಂದು ಓಲೆ ಆತನ ದೊಡ್ಡ ಕರುಳಿಗೆ ಚುಚ್ಚಿ ಕೂತಿದ್ದ ಹಿನ್ನೆಲೆಯಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಣಿಪಾಲ ಆಸ್ಪತ್ರೆಗೆ ನಿನ್ನೆ ಸಂಜೆ ದಾಖಲಿಸಲಾಗಿತ್ತು. ಕೆಎಂಸಿಯ ವೈದ್ಯರು ಕೊಲೊನೊಸ್ಕೋಪಿಯ ಮೂಲಕ ಇಂದು ಸಂಜೆ ವೇಳೆ ಉಳಿದೊಂದು ಓಲೆಯನ್ನು ಹೊಟ್ಟೆಯಿಂದ ಹೊರತೆಗೆದಿದ್ದು, ಆತನಿಗೆ ಆ ಭಾಗದಲ್ಲಿ ಹೆಚ್ಚಿನ ಯಾವುದೇ ಗಾಯವಾಗಿಲ್ಲ. ಒಂದೆರಡು ಗಂಟೆಗಳಲ್ಲಿ ಆತ ಸಂಪೂರ್ಣವಾಗಿ ಚೇತರಿಸಿಕೊಳ್ಳಬಹುದು ಎಂದು ವೈದ್ಯರು ಭರವಸೆ ನೀಡಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ನಿರಂಜನ್ ಭಟ್‌ನನ್ನು ವೈದ್ಯರು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿದ ಕೂಡಲೇ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಲಯದ ಮುಂದೆ ಹಾಜರು ಪಡಿಸಲಿದ್ದಾರೆ ಎಂದು ತಿಳಿದುಬಂದಿದೆ. ಈಗಾಗಲೇ ಈ ಪ್ರಕರಣದ ಇನ್ನಿಬ್ಬರು ಆರೋಪಿಗಳಾದ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿಯ ಪೊಲೀಸ್ ಕಸ್ಟಡಿ ನಾಳೆ ಮುಗಿಯಲಿದ್ದು, ಪೊಲೀಸರು ಇವರಿಬ್ಬರೊಂದಿಗೆ ನಿರಂಜನ್ ಭಟ್ಟನನ್ನು ಸಹ ನಾಳೆ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಪ್ರಕರಣದಲ್ಲಿ  ಹೆಚ್ಚಿನ ಯಾವುದೇ ಬೆಳವಣಿಗೆ ನಡೆದಿಲ್ಲ. ಈಗಾಗಲೇ ಸಿಕ್ಕಿರುವ ವಿವಿಧ ಸಾಕ್ಷಗಳನ್ನು ವ್ಯವಸ್ಥಿತಗೊಳಿಸುವ ಕಾರ್ಯವನ್ನು ಇಂದು ಮಾಡಲಾಗಿದೆ. ನಾಳೆ ಪ್ರಕರಣದ ಇಬ್ಬರು ಆರೋಪಿಗಳಾದ ರಾಜೇಶ್ವರಿ ಹಾಗೂ ನವನೀತ್‌ನೊಂದಿಗೆ, ಈಗಾಗಲೇ ಚಿಕಿತ್ಸೆಯಿಂದ ಚೇತರಿಸಿ ಕೊಂಡಿರುವ ನಿರಂಜನ್ ಭಟ್‌ನನ್ನು ಸಹ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಸುಮನ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News