×
Ad

ಸಾಕ್ಷನಾಶದ ಹಿನ್ನೆಲೆ: ಇನ್ನಿಬ್ಬರ ಬಂಧನ; ನ್ಯಾಯಾಂಗ ವಶಕ್ಕೆ

Update: 2016-08-11 21:58 IST

ಉಡುಪಿ, ಆ.11: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಣಿಪಾಲ ಪೊಲೀಸರು ನಿನ್ನೆ ರಾತ್ರಿ ತಮ್ಮ ವಶದಲ್ಲಿದ್ದ ಆರೋಪಿ ನಿರಂಜನ ಭಟ್ಟನ ತಂದೆ ಶ್ರೀನಿವಾಸ ಭಟ್ ಹಾಗೂ ಆತನ ಚಾಲಕ ರಾಘ ಯಾನೆ ರಾಘವೇಂದ್ರನನ್ನು ಬಂಧಿಸಿದ್ದಾರೆ. ಬಂಧಿತರನ್ನು ಇಂದು ಬೆಳಗ್ಗೆ 11ಗಂಟೆಗೆ ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯ ಮತ್ತು ಹೆಚ್ಚುವರಿ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ಹಾಜರುಪಡಿಸಲಾಗಿದ್ದು, ಇಬ್ಬರನ್ನೂ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ವಿಚಾರಣೆ ನಡೆಸಿದ ನ್ಯಾಯಾಧೀಶ ರಾಜೇಶ್ ಕರ್ಣನ್ ಆರೋಪಿ ಗಳಿಬ್ಬರನ್ನು ಆ.24ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದರು ಎಂದು ಹಿರಿಯ ಸಹಾಯಕ ಸರಕಾರಿ ಅಭಿಯೋಜಕ ಪ್ರವೀಣ್ ನಾಯಕ್ ತಿಳಿಸಿದರು. ಇಬ್ಬರ ಪರವಾಗಿಯೂ ಯಾರೂ ಜಾಮೀನು ಅರ್ಜಿಯನ್ನು ಸಲ್ಲಿಸಿರಲಿಲ್ಲ ಎಂದವರು ಹೇಳಿದರು.

ಪ್ರಕರಣದ ಪ್ರಮುಖ ಆರೋಪಿಗಳಾದ ಈಗ ಪೊಲೀಸ್ ಕಸ್ಟಡಿಯಲ್ಲಿರುವ ಭಾಸ್ಕರ ಶೆಟ್ಟಿ ಅವರ ಪತ್ನಿ ರಾಜೇಶ್ವರಿ ಶೆಟ್ಟಿ ಹಾಗೂ ಪುತ್ರ ನವನೀತ್ ಶೆಟ್ಟಿ ಅವರನ್ನು ಪೊಲೀಸರು ನಾಳೆ ನ್ಯಾಯಾಲಯದ ಮುಂದೆ ಹಾಜರು ಪಡಿಸಬೇಕಿದೆ ಎಂದು ಅವರು ತಿಳಿಸಿದರು.

ಭಾಸ್ಕರ ಶೆಟ್ಟಿ ಅವರನ್ನು ಉಡುಪಿ ಹಯಗ್ರೀವನಗರದ ಅವರದೇ ಮನೆಯಲ್ಲಿ ಕೊಂದ ಬಳಿಕ ದೇಹವನ್ನು ನಂದಳಿಕೆಯ ನಿರಂಜನ್ ಭಟನ ಮನೆಯಲ್ಲಿ ಹೋಮಕುಂಡದಲ್ಲಿ ಹಾಕಿ ಸುಟ್ಟು ಹಾಕಲಾಗಿತ್ತು. ಇಲ್ಲಿನ ಸಾಕ್ಷ ನಾಶದಲ್ಲಿ ನಿರಂಜನ ಭಟ್ಟನ ತಂದೆ ಅರ್ಚಕರಾಗಿರುವ ಶ್ರೀನಿವಾಸ ಭಟ್ ಹಾಗೂ ಕಾರಿನ ಚಾಲಕ ರಾಘವೇಂದ್ರ ಸಹಕರಿಸಿದ್ದರು ಎಂದು ಪೊಲೀಸರು ಆರೋಪಿಸಿ ಇಬ್ಬರನ್ನೂ ನಿನ್ನೆ ಬಂಧಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News