ಗ್ರಾಹಕರಿಂದ ಹೆಚ್ಚುವರಿ ಡೆಪಾಸಿಟ್ ಸಂಗ್ರಹಕ್ಕೆ ವಿರೋಧ: ಮೆಸ್ಕಾಂ ಕಚೇರಿಗೆ ಮುತ್ತಿಗೆ
Update: 2016-08-12 12:23 IST
ಮಂಗಳೂರು, ಆ.12: ಮೆಸ್ಕಾಂ ಗ್ರಾಹಕರಿಂದ ಹೆಚ್ಚುವರಿ ಡೆಪಾಸಿಟ್ ಸಂಗ್ರಹಿಸುತ್ತಿರುವುದು ಮತ್ತು ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಸಿಪಿಎಂ ಮಂಗಳೂರು ದಕ್ಷಿಣ ಸಮಿತಿ ನೇತೃತ್ವದಲ್ಲಿ ಇಂದು ನಗರದ ನೆಹರೂ ಮೈದಾನ ಬಳಿಯಿರುವ ಮೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಸುನಿಲ್ ಕುಮಾರ್ ಬಜಾಲ್, ಒಂದು ವಾರದೊಳಗೆ ಹೆಚ್ಚುವರಿ ಡಿಪಾಸಿಟ್ ಸಂಗ್ರಹಿಸುವುದು ನಿಲ್ಲಿಸಿದಿದ್ದಲ್ಲಿ ಎಲ್ಲ ಮೆಸ್ಕಾಂ ಕಚೇರಿಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.
ಹೆಚ್ಚುವರಿ ಡಿಪಾಸಿಟ್ ಸಂಗ್ರಹ ಮತ್ತು ಅಧಿಕ ದರ ವಸೂಲಿ ಮಾಡುತ್ತಿರುವ ಜನವಿರೋಧಿ ನೀತಿಯನ್ನು ವಿರೋಧಿಸಿ ಜೈಲಿಗೆ ಹೋಗಲು ಸಿದ್ಧ ಎಂದು ಅವರು ಹೇಳಿದರು.
ಪ್ರತಿಭಟನಾ ಸಭೆಯಲ್ಲಿ ಸಿಪಿಎಂ ಮುಖಂಡರಾದ ವಾಸುದೇವ ಉಚ್ಚಿಲ, ಯೋಗೀಶ ಜೆಪ್ಪಿನಮೊಗರು, ಲಿಂಗಪ್ಪ ನಂತೂರು, ಜಯಂತಿ ಶೆಟ್ಟಿ, ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಮೊದಲಾದವರು ಪಾಲ್ಗೊಂಡಿದ್ದರು.