ಉಪ್ಪಿನಂಗಡಿ ಗ್ರಾಮಸಭೆಯಲ್ಲಿ ಮಾರ್ದನಿಸಿದ ಸರಕಾರಿ ಶಾಲಾ ಸಮಸ್ಯೆಗಳು
ಉಪ್ಪಿನಂಗಡಿ, ಆ.12: ಸರಕಾರಿ ಶಾಲೆಗಳಲ್ಲಿ ಸಮಸ್ಯೆಗಳ ಆಗರ ಸೃಷ್ಟಿಯಾಗಿದೆ, ಶಿಕ್ಷಕರ, ಮೂಲಸೌಕರ್ಯ ಕೊರತೆಯ ಜೊತೆಗೆ ಶಾಲೆಯಲ್ಲಿ ಬಹಳಷ್ಟು ಇತರೆ ಸಮಸ್ಯೆಗಳನ್ನು ಎದುರಿಸುವಂತಾಗಿದೆ, ಸರಕಾರಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಲೇ ಇದೆ, ಸರಕಾರಿ ಶಾಲೆಯನ್ನು ಸರಕಾರವೇ ಕತ್ತು ಹಿಸುಕಿ ಸಾಯಿಸುತ್ತಿದೆ, ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದೆ ಎಂದು ಆರೋಪಿಸಿದ ಗ್ರಾಮಸ್ಥರು ಇಲಾಖಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಸರಕಾರದ ಗಮನ ಸೆಳೆಯುವಂತೆ ಆಗ್ರಹಿಸಿದ ಮತ್ತು ಈ ಬಗ್ಗೆ ನಿರ್ಣಯ ಅಂಗೀಕರಿಸಿದ ಘಟನೆ ಉಪ್ಪಿನಂಗಡಿ ಗ್ರಾಮ ಸಭೆಯಲ್ಲಿ ನಡೆಯಿತು.
ಉಪ್ಪಿನಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಅಬ್ದುರ್ರಹ್ಮಾನ್‌ರ ಅಧ್ಯಕ್ಷತೆಯಲ್ಲಿ ಆ.11ರಂದು ನಡೆದ ಗ್ರಾಮ ಸಭೆಯಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು.
ಸಭೆಯಲ್ಲಿ ಪುಳಿತ್ತಡಿ ಶಾಲಾ ಅಭಿವೃದ್ಧಿ ಸಮಿತಿ ಸದಸ್ಯ ಲಕ್ಷ್ಮಣ ಮಾತನಾಡಿ, ಶಾಲೆ ಆರಂಭವಾಗಿ 3 ತಿಂಗಳು ಆಗುತ್ತಾ ಬಂತು. ಆದರೆ ಮಕ್ಕಳ ಸಮವಸ್ತ್ರ ಇನ್ನೂ ಬಂದಿಲ್ಲ, ಸಮವಸ್ತ್ರದ ಸಲುವಾಗಿ 200 ಹಣ ನೀಡುವ ವ್ಯವಸ್ಥೆಯಲ್ಲಿ ಅದರ ಅರ್ಧ ಹಣ ಬಂದಿದೆ. ಆದರೆ 200 ರೂಪಾಯಿಗೆ ಕೊಡಿಸಲು ಸಾಧ್ಯವಾಗುತ್ತಿಲ್ಲ. ಈ ಹಿಂದೆ ಕಂಪೆನಿಗೆ ಗುತ್ತಿಗೆ ನೀಡಲಾಗಿ ಅವರಿಂದ ಭರಿಸಲಾಗುತ್ತಿತ್ತು, ಆದರೆ ಹಳ್ಳಿಗಳಲ್ಲಿ ಇರುವ ಶಾಲೆಯವರಿಗೆ ಇದನ್ನು ಗುತ್ತಿಗೆ ನೀಡಲು ವ್ಯವಸ್ಥೆ ಇರುವುದಿಲ್ಲ. ಇನ್ನು 1ನೆ ತರಗತಿಯವರಿಗೆ ಯಾವುದೇ ವ್ಯವಸ್ಥೆ ಆಗಿರುವುದಿಲ್ಲ. ಇಲ್ಲಿ ಈ ಮಕ್ಕಳಿಗೆ ಸಮವಸ್ತ್ರ ಇಲ್ಲದೆ ಬೇರ್ಪಡಿಸಿದಂತಾಗುತ್ತದೆ. ಈ ರೀತಿಯಲ್ಲಿ ಸಮವಸ್ತ್ರದ ಸಮಸ್ಯೆ ಎದುರಾಗಿದೆ ಎಂದರು. ಅನುದಾನಿತ ಶಾಲೆಯಲ್ಲಿ ಇರುವ ಪಠ್ಯ ಪುಸ್ತಕ ಮತ್ತು ಸರಕಾರಿ ಶಾಲೆಯಲ್ಲಿ ಇರುವ ಪಠ್ಯ ಪುಸ್ತಕಗಳಲ್ಲಿ ವ್ಯತ್ಯಾಸ ಇದೆ. ಇದು ಸರಿ ಅಲ್ಲ. ಏಕ ಶಿಕ್ಷಣ ಜಾರಿ ಆಗಬೇಕು, ಒಂದೇ ರೀತಿಯ ಶಿಕ್ಷಣ ನೀಡುವಂತಾಗಬೇಕು ಈ ಬಗ್ಗೆ ಸರಕಾರವನ್ನು ಕೋರಬೇಕು ಎಂದರು. ಅದರಂತೆ ನಿರ್ಣಯ ಅಣಗೀಕರಿಸಲಾಯಿತು.
ಇದಕ್ಕೆ ಪೂರಕವಾಗಿ ಕೇಶವ ರಂಗಾಜೆ ಮಾತನಾಡಿ ಶಾಲೆ ನಿರ್ವಹಣೆಗೆ ವರ್ಷಕ್ಕೆ ಕೇವಲ 22 ಸಾವಿರ ರೂ.ಬರುತ್ತಿದ್ದು, ಈ ಹಣ ಯಾವುದಕ್ಕೂ ಸಾಕಾಗುವುದಿಲ್ಲ, ಕರೆಂಟ್ ಬಿಲ್, ಫೋನ್ ಬಿಲ್ ಕಟ್ಟಬೇಕು, ಇನ್ನು ಶಾಲೆಯಲ್ಲಿ ಸಣ್ಣಪುಟ್ಟ ರಿಪೇರಿ ಮಾಡುವಂತಹ ಕೆಲಸಗಳಿರುತ್ತದೆ. ಅದಾಗ್ಯೂ ಆಗಾಗ್ಗೆ ಗುಬ್ಬಚ್ಚಿ ಸ್ಪೀಕಿಂಗ್, ವಿಷನ್ ಎಂದು ಕೆಲವೊಂದು ಸುತ್ತೋಲೆ ಹೊರಡಿಸುತ್ತದೆ, ಆದರೆ ಅದರ ಅನುಷ್ಠಾನ ಮಾಡಲು ಅನುದಾನ ನೀಡುವುದಿಲ್ಲ, ಇದನ್ನೆಲ್ಲ ಹೇಗೆ ಮಾಡಲು ಸಾಧ್ಯ ಎಂದ ಅವರು ಅನುದಾನ ಹೆಚ್ಚಳ ಮಾಡುವಂತೆ ಸರಕಾರವನ್ನು ಕೋರುವಂತೆ ಆಗ್ರಹಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಕೃಷಿ ಸಹಾಯಕ ಭರಮಣ್ಣ ಇಲಾಖೆ ಮಾಹಿತಿ ನೀಡುತ್ತಾ ಕೆಲವೊಂದು ಯೋಜನೆ ವಿತರಿಸಿರುವ ಬಗ್ಗೆ ತಿಳಿಸಿದರು. ಆಗ ಪಂಚಾಯತ್ ಸದಸ್ಯ ಚಂದ್ರಶೇಖರ್ ಮಾತನಾಡಿ ಈ ರೀತಿಯಾಗಿ ಹಲವು ವರ್ಷಗಳಿಂದ ಹೇಳುತ್ತಲೇ ಇದ್ದೀರಿ, ಆದರೆ ಏನೊಂದು ಸೌಲಭ್ಯ ಯಾರಿಗೂ ಸಿಕ್ಕಿರುವುದಿಲ್ಲ ಎಂದರು. ಆಗ ಕೃಷಿ ಸಹಾಯಕರು ಪ್ರತಿಕ್ರಿಯಿಸಿ, ಹಲವು ಮಂದಿಗೆ ನೀಡಿದ್ದೇನೆ ಎಂದರು. ಹಾಗಿದ್ದರೆ ಅಂತಹವರ ಪಟ್ಟಿ ಓದಿ ಎಂದರು.
ಆಗ ರಮಣ್ಣ ತನ್ನ ಡೈರಿಯಲ್ಲಿದ್ದ ಚೀಟಿಯೊಂದನ್ನು ಯೋಜನೆ ಹೆಸರು ಹೇಳಿ ಓದಲು ಆರಂಭಿಸಿದರು. ಆಗ ಉಪಾಧ್ಯಕ್ಷೆ ಹೇಮಲತಾ ಮಾತನಾಡಿ ಇಲ್ಲ, ಇದೆಲ್ಲ ಸುಮ್ಮನೆ ಓದುತ್ತೀರಿ, ಇಂತಹವು ನಮ್ಮ ಗಮನಕ್ಕೆ ಬಂದಿಲ್ಲ, ಈ ರೀತಿಯ ಯೋಜನೆ ಇದೆ ಎಂದು ಯಾರಿಗೂ ಗೊತ್ತಿಲ್ಲ, ಇಂತಹ ಮಾಹಿತಿಯನ್ನೇ ನೀವು ನೀಡುತ್ತಿಲ್ಲ ಎಂದು ಅವರನ್ನು ತರಾಟೆಗೆ ತೆಗೆದುಕೊಂಡರು. ಸಭೆಯಲ್ಲಿದ್ದ ಗ್ರಾಮಸ್ಥರು ಅವರು ಯೋಜನೆ ಬಂದಾಗ ತನಗೆ ಬೇಕಾದವರನ್ನು ಕರೆದು ಅರ್ಜಿ ಬರೆಯಿಸಿ ನೀಡುತ್ತಾರೆ. ಅರ್ಹ ಫಲಾನುಭವಿಗಳಿಗೆ ಕೃಷಿ ಇಲಾಖೆಯ ಯೋಜನೆ ದೊರಕುತ್ತಿಲ್ಲ. ಈ ವ್ಯವಸ್ಥೆ ಸರಿ ಆಗಬೇಕು ಎಂದರು. ಆಗ ಕೃಷಿ ಸಹಾಯಕ ನಾನು ಕಚೇರಿಯಲ್ಲಿ ಇರುತ್ತೇನೆ, ಏನಿದ್ದರೂ ಅಲ್ಲಿಗೆ ಬಂದು ಕೇಳಬಹುದಾಗಿದೆ ಎಂದರು. ಆಗ ಗ್ರಾಮಸ್ಥರು ಇನ್ನು ಮುಂದೆ ಈ ರೀತಿ ಆಗಬಾರದು ಎಂದರು.
ಪ್ರಧಾನ ಮಂತ್ರಿಯವರ ಯೋಜನೆಯಲ್ಲಿ ಬಿಪಿಎಲ್ ಕಾರ್ಡುದಾರರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗುತ್ತದೆ. ಆದರೆ ಗ್ಯಾಸ್ ಏಜೆನ್ಸಿಯವರು ಗ್ಯಾಸ್ ಜೊತೆಗೆ ಸ್ಟವ್ ತೆಗೆದುಕೊಳ್ಳಬೇಕು ಎಂದು ಎರಡೂವರೆ ಸಾವಿರ ಅಧಿಕ ಹಣ ಪಡೆಯುತ್ತಿದ್ದಾರೆ. ಈ ರೀತಿಯಾಗಿ ಗ್ರಾಹಕರನ್ನು ವಂಚಿಸುತ್ತಿದ್ದಾರೆ. ಹಾಗೂ ಉಪ್ಪಿನಂಗಡಿಯಲ್ಲಿ ಗ್ಯಾಸ್ ವಿತರಣೆ ಮಾಡುವವರು ನಿಗದಿತ ದರ, ಬಿಲ್‌ಗಿಂತ ಸುಮಾರು 80 ರೂಪಾಯಿ ಅಧಿಕ ವಸೂಲಿ ಮಾಡುತ್ತಾ ಗ್ರಾಹಕರಿಂದ ಲೂಟಿ ಮಾಡುತ್ತಿದ್ದಾರೆ, ಇದನ್ನು ನಿಲ್ಲಿಸಬೇಕು ಎಂಬ ಆಗ್ರಹ ವ್ಯಕ್ತವಾಯಿತು.
ಗ್ರಾಮಕರಣಿಕ ರಮಾನಂದ ಚಕ್ಕಡಿ ಪ್ರತಿಕ್ರಿಯಿಸಿ, ಹೆಚ್ಚುವರಿ ಹಣ ಪಡೆಯುವಂತಿಲ್ಲ, ಈ ಬಗ್ಗೆ ನಮಗೆ ತಹಶೀಲ್ದಾರ್, ಸಹಾಯಕ ಕಮೀಷನರ್, ಅಥವಾ ಜಿಲ್ಲಾಧಿಕಾರಿಗೆ ದೂರು ನೀಡಬಹುದಾಗಿದೆ ಎಂದರು. ಆಗ ಅಧ್ಯಕ್ಷ ಅಬ್ದುರ್ರಹ್ಮಾನ್ ಮಾತನಾಡಿ ಉಪ್ಪಿನಂಗಡಿ ಹೋಬಳಿ ಕೇಂದ್ರವಾಗಿದ್ದು, ಇದನ್ನೇ ಕೇಂದ್ರವಾಗಿಟ್ಟುಕೊಂಡು ಗ್ಯಾಸ್ ಸರಬರಾಜು ಮಾಡುವಂತೆ, ಅಧಿಕ ಶುಲ್ಕ ವಿಧಿಸದಂತೆ ಜಿಲ್ಲಾಡಳಿತವನ್ನು ಕೋರಿ ನಿರ್ಣಯ ಮಾಡುವಂತೆ ಸೂಚಿಸಿದರು. ಅದರಂತೆ ನಿರ್ಣಯ ಅಂಗೀಕರಿಸಲಾಯಿತು.
ಉಪ್ಪಿನಂಗಡಿಯಲ್ಲಿ 2 ನದಿ ಹರಿಯುತ್ತಾ ಅಂಗೈಯಲ್ಲಿ ಮರಳು ಇದ್ದರೂ ಇಲ್ಲಿಯವರು ಮನೆ ಕಟ್ಟಲು ಮರಳು ಸಿಗದಂತಾಗಿದೆ. ಯಾವುದೇ ರೀತಿಯ ಮರಳು ನೀತಿ ಜಾರಿ ಆದರೂ, ಯಾರೇ ಎಲ್ಲಿಗೆ ಮರಳು ಸಾಗಾಟ ಮಾಡಿದರೂ ಉಪ್ಪಿನಂಗಡಿ ಪರಿಸರದ ಸ್ಥಳೀಯ ಮಂದಿಗೆ ಮನೆ ಕಟ್ಟಲು ಬೇಕಾಗುವ ಮರಳು ಮುಕ್ತವಾಗಿ ಸಿಗುವಂತೆ ಆಗಬೇಕು. ಮರಳು ಸಾಗಾಟ ಮಾಡುವವರು ಪಂಚಾಯತ್‌ಗೆ ಶುಲ್ಕ ನೀಡಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಅದರಂತೆ ಜಿಲ್ಲಾಡಳಿತವನ್ನು ಕೋರಿ ನಿರ್ಣಯಿಸಲಾಯಿತು.
ಸರಕಾರಿ ಶಾಲೆಗಳಲ್ಲಿ ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಜಿಲ್ಲಾ ಪಂಚಾಯತ್ ಸಬೆಯಲ್ಲಿ ಪ್ರಸ್ತಾಪಿಸುವುದಾಗಿ ಜಿಲ್ಲಾ ಪಂಚಾಯತ್ ಸದಸ್ಯೆ ಶಯನಾ ಜಯಾನಂದ ಸಭೆಗೆ ಭರವಸೆ ನೀಡಿದರು. ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ 12 ಗ್ರಾಮಗಳು ಬರುತ್ತಿದ್ದು, ಬರುವ ಅನುದಾನವನ್ನು ಹಂಚಿಕೆ ಮಾಡಿ ಕೆಲಸ ನಿರ್ವಹಿಸುತ್ತೇನೆ, ಈಗಾಗಲೇ ಇಲ್ಲಿನ ಅಂಗನವಾಡಿಗೆ 1 ಲಕ್ಷ ರೂ., ಉಪ್ಪಿನಂಗಡಿ-ರಾಮನಗರ ರಸ್ತೆಗೆ 2 ಲಕ್ಷ ರೂ. ಅನುದಾನ ನೀಡಲಾಗಿದೆ ಎಂದರು.
ಉಪ್ಪಿನಂಗಡಿ ಪಶು ಸಂಗೋಪನಾ ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ. ರಾಮ್ ಪ್ರಕಾಶ್ ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಸಭೆಯಲ್ಲಿ ಗ್ರಾಮ ಪಂಚಾಯತ್ ಸದಸ್ಯರಾದ ಚಂದ್ರಶೇಖರ್ ಮಡಿವಾಳ, ಸುರೇಶ್ ಅತ್ರಮಜಲು, ಸುನಿಲ್ ದಡ್ಡು, ಗ್ರಾಮಸ್ಥರಾದ ಅಜೀಜ್ ನಿನ್ನಿಕಲ್, ಧರ್ನಪ್ಪ ನಾಯಕ್, ವಸಂತ, ಪ್ರಶಾಂತ್ ಮಾತನಾಡಿದರು. ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ಭಂಡಾರಿ, ಗೋಪಾಲ ಹೆಗ್ಡೆ, ಯು.ಕೆ. ಇಬ್ರಾಹೀಂ, ಯು.ಟಿ. ತೌಸೀಫ್, ಉಮೇಶ್ ಗೌಡ, ಚಂದ್ರಾವತಿ ಹೆಗ್ಡೆ, ಸುಂದರಿ, ಚಂದ್ರಾವತಿ, ಆರೋಗ್ಯ ಸಹಾಯಕಿ ಗಾಯತ್ರಿ, ಅಂಗನವಾಡಿ ಕಾರ್ಯಕರ್ತರಾದ ಚಂದ್ರಿಕಾ, ರೆಹಮತ್, ಸರಿತಾ ಉಪಸ್ಥಿತರಿದ್ದರು.
ಉಪ್ಪಿನಂಗಡಿ ಸಮುದಾಯ ಆರೋಗ್ಯ ಕೇಂದ್ರದ ಡಾ. ಶಶಿಕಲಾ, ಆರೋಗ್ಯ ಮಿತ್ರ ಸೌಮ್ಯ, ಮೆಸ್ಕಾಂ ಇಲಾಖೆಯ ಇಂಜಿನಿಯರ್ ಸುಂದರ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಪ್ರಭಾಚಂದ್ರ, ಮಹಿಳಾ ಮತ್ತು ಮಹಿಳಾ ಕಲ್ಯಾಣ ಇಲಾಖೆಯ ಹರಿಣಾಕ್ಷಿ, ಶಿಕ್ಷಣ ಇಲಾಖೆಯ ಅನಂತ ಇಲಾಖಾ ಮಾಹಿತಿ ನೀಡಿದರು. ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಅಬ್ದುಲ್ಲಾ ಅಸಾಫ್ ಸ್ವಾಗತಿಸಿ, ವಂದಿಸಿದರು. ಸಿಬ್ಬಂದಿ ಜ್ಯೋತಿ, ಮಾಲಿಂಗ ಕಾರ್ಯಕ್ರಮ ನಿರೂಪಿಸಿದರು.