ದ.ಕ.: ಶಿಕ್ಷಕರ ಮರು ನಿಯೋಜನೆ ಆದೇಶ ವಿರೋಧಿಸಿ ವಿವಿಧೆಡೆ ಶಾಲೆ ಬಂದ್
ಮಂಗಳೂರು, ಆ.1:ರಾಜ್ಯ ಸರಕಾರವು ಹೆಚ್ಚುವರಿ ಶಿಕ್ಷಕರ ಮರು ನಿಯೋಜನೆ ಹೆಸರಿನಲ್ಲಿ ಶಿಕ್ಷಕರ ಸಂಖ್ಯೆಯನ್ನು ಕಡಿತಗೊಳಿಸುವ ಆದೇಶ ಜಾರಿ ಗೊಳಿಸಿದ್ದನ್ನು ವಿರೋಧಿಸಿ ಎಸ್‌ಎಫ್‌ಐ ಇಂದು ಜಿಲ್ಲೆಯ ಸರಕಾರಿ ಶಾಲಾ ಬಂದ್‌ಗೆ ಕರೆಕೊಟ್ಟ ಭಾಗವಾಗಿ ವಿವಿಧ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಕುತ್ತಾರು ಪ್ರದೇಶದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮುನ್ನೂರುವಿನಲ್ಲಿ ನಡೆದ ಧರಣಿಯಲ್ಲಿ ಮಾತನಾಡಿದ ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ನಿತಿನ್ ಕುತ್ತಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರ ಆದೇಶವನ್ನು ಪಾಲಿಸಲು ಹೇಳಿದ ಪೋಷಕರನ್ನು ಬಂಧಿಸಿರುವುದು ನಮ್ಮ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರಕಾರದ ಸರ್ವಾಧಿಕಾರಿ ಧೋರಣೆಯನ್ನು ಪ್ರತಿ ಬಿಂಬಿಸುತ್ತದೆ ಮತ್ತು ತರಾತುರಿಯಲ್ಲಿ ನಿಯೋಜನೆ ಪತ್ರವನ್ನು ಹೊರಡಿಸಿ ಸರಕಾರ ದಮನಕಾರಿ ನೀತಿ ಅನುಸರಿಸುತ್ತಿದ್ದು ಕೂಡಲೇ ಜಿಲ್ಲಾ ಉಸ್ತುವಾರಿ ಮಂತ್ರಿಗಳು ಆದೇಶ ಹಿಂಪಡೆಯಲು ಸೂಚಿಸಬೇಕು. ಇಲ್ಲದಿದ್ದಲ್ಲಿ ಸಚಿವರ ಒಡೆತನದ ಖಾಸಗಿ ಶಾಲೆಯ ಮುಂದೆ ವಿದ್ಯಾರ್ಥಿಗಳ ಮೆರವಣಿಗೆ ನಡೆಸಲಾಗುವುದು ಎಂದರು.
ವಿದ್ಯಾರ್ಥಿನಿ ಆಯಿಶಾ ಅಫ್ರಾ ಮಾತನಾಡಿ, ನಮ್ಮ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗಲು ಕಾರಣ ಸರಕಾರವೇ ಆಗಿದ್ದು ಮೂಲಭೂತ ಸೌಕರ್ಯ ನೀಡಿದರೆ ವಿದ್ಯಾರ್ಥಿಗಳು ಖಂಡಿತಾ ಸರಕಾರಿ ಶಾಲೆಗೆ ಬರುತ್ತಾರೆ ಮತ್ತು ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದ್ದರೆ ಮಾತ್ರ ಶಿಕ್ಷಕರನ್ನು ನೀಡುವುದಾದರೆ ಶಿಕ್ಷಣ ಇಲಾಖೆಯ ಅಧಿಕಾರಿಗಳ ಮಕ್ಕಳನ್ನು ನಮ್ಮ ಶಾಲೆಗೆ ಸೇರಿಸಲಿ. ಆಗ ನಮಗೆ ಬೇಕಾದ ಶಿಕ್ಷಕರನ್ನು ಪಡೆಯಬಹುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷ ಮುಸ್ತಾಫ, ಸದಸ್ಯ ಕಮಲಾಕ್ಷಿ ಮತ್ತು ಎಸ್‌ಎಫ್‌ಐ ಮುಖಂಡರಾದ ಲಿಮಿತಾ, ದೀಕ್ಷಿತ್ ಕಂಪ ಉಪಸ್ಥಿತರಿದ್ದರು.
ಶಾಲಾ ಬಂದ್‌ಗೆ ಕರೆಕೊಟ್ಟ ಭಾಗವಾಗಿ ಜಿಲ್ಲೆಯಲ್ಲಿನ ನ್ಯೂಪಡ್ಪು ಸರಕಾರಿ ಶಾಲೆ, ಎಲ್ಯಾರ್ ಪದವು, ಕಲ್ಕಟ್ಟಾ, ಮರಕಡ, ಬೆಂಗ್ರೆ, ಅಡ್ಡೂರು, ಮಂಜನಾಡಿ, ಉರುಮನೆ, ಬೈಕಂಪಾಡಿ, ಮೂಡುಶೆಡ್ಡೆ, ಉಳಾಯಿಬೆಟ್ಟು, ಪಿಲಾರ್, ಕುಂಪಲ, ಕಣ್ಣೂರು, ಬಜಾಲ್, ಅಂಬ್ಲಮೊಗರು ಮೊದಲಾದ ಶಾಲೆಗಳಲ್ಲಿ ವಿದ್ಯಾರ್ಥಿಗಳು ಶಾಲಾ ಬಂದ್ ನಡೆಸಿದರು.